ಭುವನೇಶ್ವರ: ದೇಶದಲ್ಲಿ ಎಂತಹದ್ದೇ ಕಾನೂನು ಬರಲಿ, ಆ ಕಾನೂನು ಎಷ್ಟೇ ವೈಜ್ಞಾನಿಕವಾಗಿರಲಿ, ನ್ಯಾಯಪರವಾಗಿರಲಿ, ಕೆಲವು ಕುತ್ಸಿತ ಮನಸ್ಸುಗಳು ಮಾತ್ರ ಕಾನೂನಿಗೆ ಬೆಲೆ ಕೊಡುವುದಿಲ್ಲ. ಕಾನೂನಿಗೆ ಬೆಲೆ ಕೊಡುವುದು ಬಿಡಿ ಕನಿಷ್ಠ ಮಾನವೀಯತೆಯನ್ನೂ ತೋರುವುದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಒಡಿಶಾದಲ್ಲಿ ಮಹಿಳೆಯೊಬ್ಬರು ಆನ್‌ಲೈನ್ ವಂಚನೆ ಜಾಲಕ್ಕೆ ಸಿಲುಕಿ 1.5 ಲಕ್ಷ ರೂ. ಕಳೆದುಕೊಂಡರು ಎಂದು ಪತಿಯು ತ್ರಿವಳಿ ತಲಾಕ್ (Triple Talaq) ನೀಡಿದ್ದಾನೆ. ಆ ಮೂಲಕ ಮಹಿಳೆಯೊಬ್ಬರ ವಿರುದ್ಧ ವಿಕೃತಿ ಮೆರೆದಿದ್ದಾನೆ.
ಕೇಂದ್ರಪಾರ ಜಿಲ್ಲೆಯಲ್ಲಿ ವಾಸವಿರುವ 32 ವರ್ಷದ ಮಹಿಳೆಯಿಂದ ಸೈಬರ್ ವಂಚಕರು 1.5 ಲಕ್ಷ ರೂಪಾಯಿಯನ್ನು ದೋಚಿದ್ದಾರೆ. ಆನ್‌ಲೈನ್ ಕುರಿತು ಹೆಚ್ಚಿನ ಮಾಹಿತಿ ಇರದ ಮಹಿಳೆಯು ಹಣ ಕಳೆದುಕೊಂಡಿದ್ದಾರೆ. ಇದರಿಂದ ಕುಪಿತಗೊಂಡ ಆಕೆಯ ಪತಿಯು ಮೊಬೈಲ್‌ನಲ್ಲಿಯೇ ಕರೆ ಮಾಡಿ ತ್ರಿವಳಿ ತಲಾಕ್ ನೀಡಿದ್ದಾನೆ ಎಂದು ತಿಳಿದುಬಂದಿದೆ. ಮಹಿಳೆಯ ಪತಿಯು ಗುಜರಾತ್‌ನಲ್ಲಿ ವಾಸಿಸುತ್ತಿದ್ದು, ಏಪ್ರಿಲ್ 1ರಂದು ಕರೆ ಮಾಡಿ ಮೂರು ಬಾರಿ ತಲಾಕ್ ಹೇಳಿದ್ದಾನೆ ಮೂಲಗಳು ತಿಳಿಸಿವೆ.
ದೂರು ದಾಖಲಿಸಿದ ಮಹಿಳೆ
ದೇಶದಲ್ಲಿ ತ್ರಿವಳಿ ತಲಾಕ್ ಕಾನೂನುಬಾಹಿರ ಆಗಿರುವುದರಿಂದ ಮಹಿಳೆಯು ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುಸ್ಲಿಂ ಮಹಿಳೆಯರ ಮದುವೆ ಹಕ್ಕುಗಳ ರಕ್ಷಣಾ ಕಾಯ್ದೆ ಅಡಿಯಲ್ಲಿ ಇವರು ಕೇಂದ್ರಪಾರ ಸದರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಮಹಿಳೆಯು 15 ವರ್ಷದಿಂದ ವ್ಯಕ್ತಿ ಜತೆ ಸಂಸಾರ ಮಾಡುತ್ತಿದ್ದು, ಮೂವರು ಮಕ್ಕಳಿದ್ದಾರೆ. ಹಣ ಕಳೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದರೂ, ತಪ್ಪಾಗಿದೆ ಎಂದು ಅಂಗಲಾಚಿದರೂ ಆತ ತ್ರಿವಳಿ ತಲಾಕ್ ನೀಡಿದ್ದಾನೆ ಎಂದು ತಿಳಿದುಬಂದಿದೆ.
“ಮುಸ್ಲಿಂ ಮಹಿಳೆಯರ ಮದುವೆ ಹಕ್ಕುಗಳ ರಕ್ಷಣೆ ಕಾಯ್ದೆ ಜತೆಗೆ ಮಹಿಳೆಯು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದೂ ಪತಿ ವಿರುದ್ಧ ಕೇಸ್ ದಾಖಲಿಸಿದ್ದಾರೆ” ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಸರೋಜ್ ಸಾಹೂ ತಿಳಿಸಿದ್ದಾರೆ. ದೇಶದಲ್ಲಿ 2017ರಿಂದ ತ್ರಿವಳಿ ತಲಾಕ್‌ಅನ್ನು ನಿಷೇಧಿಸಲಾಗಿದೆ. ಮುಸ್ಲಿಂ ಮಹಿಳೆಗೆ ಆಕೆಯ ಪತಿಯು ತ್ರಿವಳಿ ತಲಾಕ್ ನೀಡಿದರೆ, ಆತನಿಗೆ ಮೂರು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ. ಹೀಗಿದ್ದರೂ ದೇಶದ ಹಲವೆಡೆ ತ್ರಿವಳಿ ತಲಾಕ್ ನೀಡುವ ಪ್ರಕರಣಗಳು ಕೇಳಿಬರುತ್ತವೆ. ಮೊಬೈಲ್ ಕರೆ, ಎಸ್‌ಎಂಎಸ್ ಸೇರಿ ಯಾವುದೇ ರೀತಿಯಲ್ಲಿ ತ್ರಿವಳಿ ತಲಾಕ್ ನೀಡಿದರೆ ಅದು ಶಿಕ್ಷಾರ್ಹ ಅಪರಾಧವಾಗಿದೆ.
ಇದನ್ನೂ ಓದಿ: Triple Talaq | ಪತ್ನಿಗೆ ತ್ರಿವಳಿ ತಲಾಕ್ ನೀಡಿದ ಬಿಜೆಪಿ ಕಾರ್ಪೊರೇಟರ್ ವಿರುದ್ಧ ಕೇಸ್