Site icon Vistara News

Odisha Train Accident : ಟಿಕೆಟ್ ರಹಿತ ಪ್ರಯಾಣಿಕರಿಗೂ ಪರಿಹಾರ

Jaya Verma Sinha

#image_title

ನವದೆಹಲಿ: ಒಡಿಶಾದಲ್ಲಿ ಸಂಭವಿಸಿದ ಅಪಘಾತದಲ್ಲಿ (Odisha Train Accident) ಸಿಲುಕಿರುವ ಪ್ಯಾಸೆಂಜರ್ ರೈಲುಗಳಲ್ಲಿ ಪ್ರಯಾಣಿಸಿದ್ದ ಟಿಕೆಟ್ ರಹಿತ ಪ್ರಯಾಣಿಕರಿಗೂ ಪರಿಹಾರ ನೀಡಲಾಗುವುದು ಎಂದು ರೈಲ್ವೆ ಇಲಾಖೆ ಭಾನುವಾರ ತಿಳಿಸಿದೆ. ಇದು ಸುಪ್ರೀಂ ಕೋರ್ಟ್ ಆದೇಶಕ್ಕೆ ಅನುಗುಣವಾಗಿದೆ ಎಂದು ಅಧಿಕಾರಿಗಳು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. “ಪ್ರಯಾಣಿಕರು ಟಿಕೆಟ್ ಇಲ್ಲದೇ ಪ್ರಯಾಣ ಮಾಡಿದ್ದರೂ ಅವರಿಗೆ ಪರಿಹಾರ ನೀಡಲಾಗುವುದು” ಎಂದು ರೈಲ್ವೆ ವಕ್ತಾರ ಅಮಿತಾಭ್ ಶರ್ಮಾ ಹೇಳಿದ್ದಾರೆ.

ಅದೇ ರೀತಿ ಸುದ್ದಿಗಾರರೊಂದಿಗೆ ಮಾತನಾಡಿದ ರೈಲ್ವೆ ಮಂಡಳಿಯ ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿ ಸದಸ್ಯ ಜಯ ವರ್ಮಾ ಸಿನ್ಹಾ, ಆಸ್ಪತ್ರೆಗಳಲ್ಲಿ ದಾಖಲಾದ ಪ್ರತಿಯೊಬ್ಬ ಗಾಯಾಳುವಿಗೆ ತಮ್ಮ ಸಂಬಂಧಿಕರು ಅಥವಾ ಆಪ್ತರನ್ನು ಪತ್ತೆ ಹಚ್ಚುವುದಕ್ಕೆ ನೆರವಾಲು ಸ್ಕೌಟ್ ಅಥವಾ ಗೈಡ್ಸ್​​ ನೆರವು ನೀಡಲಾಗಿದೆ ಎಂಬುದಾಗಿ ಹೇಳಿದ್ದಾರೆ.

ಸಹಾಯವಾಣಿ ಸಂಖ್ಯೆ 139 ಲಭ್ಯವಿದೆ. ಈ ಸಂಪರ್ಕ ಸಂಖ್ಯೆ ಮೂಲಕ ಹಿರಿಯ ರೈಲ್ವೆ ಅಧಿಕಾರಿಗಳು ಕರೆಗಳಿಗೆ ಉತ್ತರಿಸುತ್ತಿದ್ದಾರೆ. ಸಾಧ್ಯವಾದಷ್ಟು ಜನರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರ್ಮಾ ಇದೇ ವೇಳೆ ಮಾಹಿತಿ ನೀಡಿದ್ದಾರೆ.

ಗಾಯಗೊಂಡವರು ಅಥವಾ ಮೃತರ ಕುಟುಂಬದ ಸದಸ್ಯರು ನಮಗೆ ಕರೆ ಮಾಡಬಹುದು. ಅಧಿಕಾರಿಗಳು ಅವರಿಗೆ ಎಲ್ಲ ರೀತಿಯ ಸಹಾಯ ನೀಡುತ್ತಿದ್ದಾರೆ. ಗಾಯಳುಗಳನ್ನು ಭೇಟಿ ಮಾಡಲು ವ್ಯವಸ್ಥೆ ಮಾಡುತ್ತಿದ್ದಾರೆ. ಸಂಬಂಧಿಕರ ಅವರ ಪ್ರಯಾಣ ಮತ್ತು ಇತರ ವೆಚ್ಚಗಳನ್ನು ನಾವು ನೋಡಿಕೊಳ್ಳುತ್ತಿದ್ದಾರೆ ಎಂದು ಜಯ್​ ವರ್ಮಾ ಅವರು ಹೇಳಿದ್ದಾರೆ.

139 ಸಂಖ್ಯೆಯ ಸಹಾಯವಾಣಿ ಸೇವೆಯು ಅಡೆತಡೆಯಿಲ್ಲದೆ ಮುಂದುವರಿಯುತ್ತದೆ. ರೈಲ್ವೆ ಸಚಿವರು ಘೋಷಿಸಿದ ಪರಿಹಾರ ಮೊತ್ತವನ್ನು ತ್ವರಿತವಾಗಿ ವಿತರಿಸಲಾಗುತ್ತದೆ. ಮೃತಪಟ್ಟವರಿಗೆ10 ಲಕ್ಷ ರೂ., ಗಂಭೀರ ಗಾಯಗಳಿಗೆ 2 ಲಕ್ಷ ರೂ., ಸಣ್ಣಪುಟ್ಟ ಗಾಯಗಳಿಗೆ 50,000 ರೂಪಾಯಿ ಪರಿಹಾರ ಸಿಗಲಿದೆ ಎಂದರು

ರೈಲ್ವೆ ಇಲಾಖೆಯು ದುರಂತಕ್ಕೆ ಸಂಬಂಧಿಸಿ ಇದುವರೆಗೆ 3.22 ಕೋಟಿ ರೂ.ಗಳನ್ನು ಪರಿಹಾರ ವಿತರಿಸಿದೆ. ಇದರಲ್ಲಿ 11 ಮೃತಪಟ್ಟವರು, 50 ಗಂಭೀರ ಗಾಯಗಳು ಮತ್ತು 224 ಸಣ್ಣಪುಟ್ಟ ಗಾಯಗಳು ಸೇರಿದಂತೆ 285 ಮಂದಿಗೆ ಪರಿಹಾರ ದೊರಕಿದೆ ಎಂದರು.

ಸೊರೊ, ಖರಗ್ಪುರ, ಬಾಲಸೋರ್, ಖಂಡಪಾರಾ, ಭದ್ರಕ್, ಕಟಕ್ ಮತ್ತು ಭುವನೇಶ್ವರ ಸೇರಿದಂತೆ ಏಳು ಸ್ಥಳಗಳಲ್ಲಿ ಭಾರತೀಯ ರೈಲ್ವೆ ಪರಿಹಾರ ಮೊತ್ತವನ್ನು ನೀಡುತ್ತಿದೆ. 280 ಕ್ಕೂ ಹೆಚ್ಚು ಮೃತಪಟ್ಟವರನ್ನು ಇನ್ನೂ ಗುರುತಿಸಲಾಗಿಲ್ಲ. ಆಗ್ನೇಯ ರೈಲ್ವೆ ಗುರುತಿಸುವ ಉದ್ದೇಶಗಳಿಗಾಗಿ ಅವರ ಛಾಯಾಚಿತ್ರಗಳನ್ನು ತನ್ನ ವೆಬ್​ಸೈಟ್​ನಲ್ಲಿ ಹಾಕಿದೆ.

Exit mobile version