Site icon Vistara News

1 ಕೋಟಿ ರೂ. ಆಮಿಷ ಒಡ್ಡುತ್ತಿದ್ದಾರೆ, ದೇಶ ಬಿಡುವಂತೆ ಒತ್ತಾಯ ಮಾಡ್ತಿದ್ದಾರೆ; ಹರಿಯಾಣ ಮಹಿಳಾ ಕೋಚ್​​ರಿಂದ ಮತ್ತೊಂದು ಆರೋಪ

offered Rs 1 cr per month Says Woman Who made alligation against Haryana minister

ಚಂಡಿಗಢ್​: ಹರಿಯಾಣ ಕ್ರೀಡಾ ಸಚಿವರಾಗಿದ್ದ ಸಂದೀಪ್ ಸಿಂಗ್​ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಜ್ಯೂನಿಯರ್​ ಅಥ್ಲೆಟಿಕ್ಸ್​ ಮಹಿಳಾ ಕೋಚ್​ ಈಗ ಇನ್ನೊಂದು ಗಂಭೀರ ಆರೋಪ ಮಾಡಿದ್ದಾರೆ. ಮಾಜಿ ಹಾಕಿ ಆಟಗಾರ, ಭಾರತೀಯ ಹಾಕಿ ತಂಡದ ಮಾಜಿ ನಾಯಕನೂ ಆಗಿದ್ದ ಸಂದೀಪ್ ಸಿಂಗ್​ 2019ರಲ್ಲಿ ಬಿಜೆಪಿ ಸೇರಿ, ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದರು. ಬಳಿಕ ಕ್ರೀಡಾ ಇಲಾಖೆ ಜವಾಬ್ದಾರಿ ಹೊತ್ತಿದ್ದರು. ಈಗ ಮಹಿಳಾ ಕೋಚ್​ರಿಂದ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದ ಬೆನ್ನಲ್ಲೇ ಅವರು ತಮ್ಮ ಮಂತ್ರಿ ಹುದ್ದೆ ತೊರೆದಿದ್ದಾರೆ.

ಈ ಮಧ್ಯೆ ಇನ್ನೊಂದು ಮಹತ್ವದ ವಿಚಾರವನ್ನು ಮಹಿಳಾ ಕೋಚ್​ ತಿಳಿಸಿದ್ದಾರೆ. ‘ನನಗೆ ನಿರಂತರವಾಗಿ ಫೋನ್​ ಕರೆಗಳು ಬರುತ್ತಿವೆ. ತಿಂಗಳಿಗೆ 1 ಕೋಟಿ ರೂಪಾಯಿ ಕೊಡುತ್ತೇವೆ, ದೇಶ ಬಿಟ್ಟು ಹೋಗು ಎಂದು ಒತ್ತಡ ಹೇರುತ್ತಿದ್ದಾರೆ. ದೂರು ವಾಪಸ್​ ತೆಗೆದುಕೊಳ್ಳಲು ಒತ್ತಾಯ ಮಾಡುತ್ತಿಲ್ಲ. ಆದರೆ ಸುಮ್ಮನೆ ಇದ್ದು, ಯಾರಿಗೂ ಗೊತ್ತಾಗದಂತೆ ದೇಶ ಬಿಡು ಎನ್ನುತ್ತಿದ್ದಾರೆ’ ಎಂದು ಕೋಚ್​ ಹೇಳಿಕೊಂಡಿದ್ದಾರೆ. ಹಾಗೇ, ‘ಕ್ರೀಡಾ ಸಚಿವರ ವಿರುದ್ಧ ನಾನು ಮಾಡಿರುವ ಲೈಂಗಿಕ ದೌರ್ಜನ್ಯ ಕೇಸ್​ ತನಿಖೆಯ ಮೇಲೆ ಮುಖ್ಯಮಂತ್ರಿ ಮನೋಹರ್​ ಲಾಲ್​ ಖಟ್ಟರ್​ ಪ್ರಭಾವ ಬೀರುತ್ತಿದ್ದಾರೆ. ತನಿಖೆ ಸರಿಯಾಗಿ ನಡೆಯಲು ಅವರು ಬಿಡುತ್ತಿಲ್ಲ’ ಎಂದೂ ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಪ್ರತಿಕ್ರಿಯೆ ಏನು?
ಸಂದೀಪ್​ ಸಿಂಗ್​ ವಿರುದ್ಧ ಮಹಿಳೆ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್​ ಖಟ್ಟರ್​ ‘ಕ್ರೀಡಾ ಸಚಿವರ ವಿರುದ್ಧ ಮಾಡಲಾದ ಆರೋಪ ಅಸಂಬದ್ಧವಾಗಿದೆ. ಒಬ್ಬ ವ್ಯಕ್ತಿಯ ಮೇಲೆ ಆರೋಪ ಮಾಡಿದಾಕ್ಷಣ, ಆತನೇನೂ ಅಪರಾಧಿ ಆಗಿಬಿಡುವುದಿಲ್ಲ. ಈ ಕೇಸ್​​ನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಂದೆಡೆ ಚಂಡಿಗಢ ಪೊಲೀಸರು ಮತ್ತು ಇನ್ನೊಂದೆಡೆ ಹರಿಯಾಣ ಪೊಲೀಸರು ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ವರದಿ ಬಂದ ಹೊರತು ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯವೇ ಇಲ್ಲ’ ಎಂದು ಹೇಳಿದ್ದಾರೆ. ಈ ಮೂಲಕ ಸಂದೀಪ್​ ಸಿಂಗ್​​ರನ್ನು ಅವರು ವಹಿಸಿಕೊಂಡು ಮಾತನಾಡಿದ್ದಾರೆ.

ಮಹಿಳಾ ಕೋಚ್​ ಆರೋಪವೇನು?
ನಾನು ಮೊದಲು ಸಚಿವರನ್ನು ನೋಡಿದ್ದು ಜಿಮ್​​ನಲ್ಲಿ. ಬಳಿಕ ಸಂದೀಪ್​ ಸಿಂಗ್​ ಅವರು ಇನ್​ಸ್ಟಾಗ್ರಾಂ ಮೂಲಕ ನನ್ನನ್ನು ಸಂಪರ್ಕಿಸಿದರು. ‘ನಿಮ್ಮ ರಾಷ್ಟ್ರೀಯ ಆಟಗಳ ಪ್ರಮಾಣಪತ್ರದ ವಿಷಯವಾಗಿ ಸ್ಪಷ್ಟತೆಯಿಲ್ಲ. ಹೀಗಾಗಿ ಒಮ್ಮೆ ಬಂದು ನನ್ನನ್ನು ಭೇಟಿಯಾಗಿ’ ಎಂದು ಮೆಸೇಜ್​ ಮಾಡಿದರು. ನಾನು ಕೆಲವು ದಾಖಲೆಗಳೊಂದಿಗೆ ಚಂಡಿಗಢ್​​ನಲ್ಲಿರುವ ಅವರ ಅಧಿಕೃತ ನಿವಾಸಕ್ಕೆ ತೆರಳಿದೆ. ಆ ಮನೆಯ ಮೂಲೆಯೊಂದರಲ್ಲಿ ಇದ್ದ ಕ್ಯಾಬಿನ್​​ಗೆ ಸಂದೀಪ್​ ಸಿಂಗ್​ ನನ್ನನ್ನು ಕರೆದೊಯ್ದರು.

ನನ್ನ ಕೈಯಲ್ಲಿದ್ದ ದಾಖಲೆಗಳನ್ನೆಲ್ಲ ಕಿತ್ತುಕೊಂಡು ಪಕ್ಕದ ಟೇಬಲ್​ ಮೇಲಿಟ್ಟು, ಅವರ ಕೈಯನ್ನು ನನ್ನ ಪಾದಗಳ ಮೇಲಿಟ್ಟರು. ‘ನಿನ್ನನ್ನು ಮೊದಲ ಸಲ ನೋಡಿದಾಗಲೇ ತುಂಬ ಇಷ್ಟವಾಯ್ತು. ನೀನು ನನ್ನನ್ನು ಸಂತೋಷವಾಗಿಟ್ಟರೆ, ನಾನೂ ನಿನ್ನನ್ನು ತುಂಬ ಸಂತೋಷವಾಗಿ ಇಡುತ್ತೇನೆ’ ಎಂದು ಹೇಳಿದರು. ನನ್ನ ಕಾಲಿನ ಮೇಲಿದ್ದ ಅವರ ಕೈಯನ್ನು ನಾನು ಅಲ್ಲಿಂದ ಕಿತ್ತೆಸೆದೆ. ಆಗ ಅವರು ನನ್ನ ಟಿ ಶರ್ಟ್ ಹರಿದುಹಾಕಿದರು. ನಾನು ಅಳುತ್ತಿದ್ದೆ ಮತ್ತು ಸಹಾಯಕ್ಕಾಗಿ ಯಾಚಿಸಿದೆ. ಅಲ್ಲಿ ಸಂದೀಪ್​ ಸಿಂಗ್ ಅವರ ಸಹಾಯಕರು, ಸಿಬ್ಬಂದಿ ವರ್ಗ ಎಲ್ಲ ಇದ್ದರು. ಆದರೆ ಒಬ್ಬರೂ ನನ್ನ ಸಹಾಯಕ್ಕೆ ಬರಲಿಲ್ಲ’ ಎಂದು ಮಹಿಳಾ ಕೋಚ್​ ಆರೋಪ ಮಾಡಿದ್ದರು. ಇವರು ಇದೆಲ್ಲವನ್ನೂ ಹರಿಯಾಣದ ರಾಜಕೀಯ ಪಕ್ಷವಾದ ಭಾರತೀಯ ರಾಷ್ಟ್ರೀಯ ಲೋಕದಳ ಪಾರ್ಟಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಹೇಳಿದ್ದರು.

ಇದನ್ನೂ ಓದಿ: ಹರಿಯಾಣ ಕ್ರೀಡಾ ಸಚಿವ ಸಂದೀಪ್​ ಸಿಂಗ್​ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್​ ದಾಖಲು; ಮಹಿಳಾ ಕೋಚ್​​​ರಿಂದ ದೂರು

Exit mobile version