Site icon Vistara News

Bishweswar Tudu: ಐಎಎಸ್‌ ಅಧಿಕಾರಿಗಳೆಲ್ಲ ಡಕಾಯಿತರು, ಕೇಂದ್ರ ಸಚಿವ ವಿಶ್ವೇಶ್ವರ ಟುಡು ವಿವಾದಾತ್ಮಕ ಹೇಳಿಕೆ

Officers Appointed Through Civil Service Are dacoits: Says Union minister Bisheswar Tudu

Officers Appointed Through Civil Service Are dacoits: Says Union minister Bisheswar Tudu

ಭುವನೇಶ್ವರ: ರಾಜಕಾರಣಿಗಳಿಗೂ, ವಿವಾದಗಳಿಗೂ ಎಲ್ಲಿಲ್ಲ ನಂಟು. ರಾಜಕಾರಣಿಗಳ ದುರಂಹಕಾರದ ವರ್ತನೆಗಳು, ವಿವಾದಾತ್ಮಕ ಹೇಳಿಕೆಗಳು ಅವರ ಬಗ್ಗೆ ಇಂತಹ ಅಭಿಪ್ರಾಯ ಮೂಡಲು ಕಾರಣವಾಗಿವೆ. ಇದಕ್ಕೆ ನಿದರ್ಶನ ಎಂಬಂತೆ, ಕೇಂದ್ರ ಸಚಿವ ವಿಶ್ವೇಶ್ವರ ಟುಡು (Bishweswar Tudu) ಅವರು ಕೇಂದ್ರ ಲೋಕಸೇವಾ ಆಯೋಗದ (UPSC) ಅಧಿಕಾರಿಗಳ ಬಗ್ಗೆ ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. “ಯುಪಿಎಸ್‌ಸಿ ಮೂಲಕ ಆಯ್ಕೆಯಾದ ಅಧಿಕಾರಿಗಳೆಲ್ಲ ಡಕಾಯಿತರು” ಎಂದು ಅವರು ಹೇಳಿದ್ದಾರೆ.

ಒಡಿಶಾದ ಬಾಲಾಸೋರ್‌ನ ಬಲಿಪಾಲ್‌ನಲ್ಲಿ ಸರ್ಕಾರಿ ಶಾಲೆಯೊಂದರ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಒಂದು ಕೋಳಿ ಕದ್ದವನನ್ನು ಬೇಕಾದರೂ ಹಿಡಿದು, ಆತನಿಗೆ ಶಿಕ್ಷೆ ವಿಧಿಸಬಹುದು. ಆದರೆ, ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಯುಪಿಎಸ್‌ಸಿ ಅಧಿಕಾರಿಗಳನ್ನು ಯಾರೂ ಮುಟ್ಟಲು ಆಗುವುದಿಲ್ಲ. ಅವರನ್ನು ತಪ್ಪಿತಸ್ಥರು ಎಂದು ಶಿಕ್ಷಿಸಲು ಆಗುವುದಿಲ್ಲ. ವ್ಯವಸ್ಥೆಯೇ ಅವರಿಗೆ ಅಂಥದ್ದೊಂದು ರಕ್ಷಣೆ ನೀಡಿದೆ” ಎಂದು ಹೇಳಿದರು. ಕೇಂದ್ರ ಜಲಶಕ್ತಿ ಖಾತೆ ಸಹಾಯಕ ಸಚಿವ ವಿಶ್ವೇಶ್ವರ ಟುಡು ನೀಡಿದ ಹೇಳಿಕೆಯ ವಿಡಿಯೊ ಈಗ ವೈರಲ್‌ ಆಗಿದೆ.

“ಯುಪಿಎಸ್‌ಸಿ ಪರೀಕ್ಷೆಗಳ ಮೂಲಕ ಆಯ್ಕೆಯಾದ ಅಧಿಕಾರಿಗಳಿಗೆ ತುಂಬ ಜ್ಞಾನ ಇರುತ್ತದೆ. ಅವರು ಯಾವಾಗಲೂ ಉನ್ನತ ಸ್ಥಾನದಲ್ಲಿರುತ್ತಾರೆ ಹಾಗೂ ಅಂತಹ ವಿಚಾರಗಳನ್ನು ಹೊಂದಿರುತ್ತಾರೆ ಎಂದು ಭಾವಿಸಿದ್ದೆ. ಆದರೆ, ಅವರ ಬಗ್ಗೆ ಈಗ ನನ್ನ ಅಭಿಪ್ರಾಯ ಬದಲಾಗಿದೆ. ಯುಪಿಎಸ್‌ಸಿ ಮೂಲಕ ಆಯ್ಕೆಯಾದ ಅಧಿಕಾರಿಗಳು ನನಗೆ ಡಕಾಯಿತರು ಎಂದೇ ಎನಿಸುತ್ತಿದೆ. ನೂರಕ್ಕೆ ನೂರರಷ್ಟು ಅಧಿಕಾರಿಗಳು ಡಕಾಯಿತರು ಎಂದು ಹೇಳುವುದಿಲ್ಲ. ಆದರೆ, ಬಹುತೇಕ ಅಧಿಕಾರಿಗಳು ಡಕಾಯಿತರೇ ಆಗಿದ್ದಾರೆ” ಎಂದರು.

“ನಮ್ಮ ದೇಶದಲ್ಲಿ ಇಷ್ಟೊಂದು ಅಕ್ಷರಸ್ಥರು ಇದ್ದಾರೆ. ಆದರೂ ಏಕೆ ಸಮಾಜದಲ್ಲಿ ಇಷ್ಟೊಂದು ಭ್ರಷ್ಟಾಚಾರ, ಅನ್ಯಾಯ ಇದೆ? ಏಕೆಂದರೆ, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕತೆಯ ಕೊರತೆ ಇದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅಧ್ಯಾತ್ಮಿಕ ಅಂಶಗಳನ್ನು ಜಾಸ್ತಿ ಸೇರಿಸಿದರೆ ಆಗ ನೈತಿಕ ಮೌಲ್ಯಗಳು ಹೆಚ್ಚಾಗುತ್ತವೆ. ಅದರಿಂದ ಭ್ರಷ್ಟಾಚಾರ ಕಡಿಮೆಯಾಗುತ್ತದೆ” ಎಂದು ಹೇಳಿದರು. ಇದಕ್ಕೂ ಮೊದಲು ಅಂದರೆ, 2021ರಲ್ಲಿ ಕೂಡ ಟುಡು ಅವರು ಅಧಿಕಾರಿಗಳ ವಿರುದ್ಧ ಮಾತನಾಡಿದ್ದರು. “ರಾಜ್ಯ ಸರ್ಕಾರಿ ಅಧಿಕಾರಿಗಳು ನನ್ನ ಜತೆ ಅನುಚಿತವಾಗಿ ವರ್ತನೆ ಮಾಡಿದ್ದಾರೆ” ಎಂದು ಆರೋಪಿಸಿದ್ದರು. ಆದರೆ, ಈಗ ಯುಪಿಎಸ್‌ಸಿ ಅಧಿಕಾರಿಗಳ ಕುರಿತು ಹೇಳಿಕೆ ನೀಡಿದ ಕಾರಣ ಅವರ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ.

ಇದನ್ನೂ ಓದಿ: Actor Chetan Ahimsa: ಹಿಂದುತ್ವ ಕುರಿತು ವಿವಾದಾತ್ಮಕ ಹೇಳಿಕೆ; ನಟ ಚೇತನ್‌ಗೆ ಜಾಮೀನು, ಬಿಡುಗಡೆ

Exit mobile version