ನವ ದೆಹಲಿ: ಎಲ್ಲ ಕಳ್ಳರ ಉಪನಾಮವೂ ಮೋದಿ ಎಂದೇ ಯಾಕೆ ಇರುತ್ತದೆ ಎಂಬ ಪ್ರಶ್ನೆ ನನ್ನಲ್ಲಿ ಉದ್ಭವ ಆಗಿದೆ, ನೀರವ್ ಮೋದಿ, ಲಲಿತ್ ಮೋದಿ ಅಥವಾ ನರೇಂದ್ರ ಮೋದಿ ಹೀಗೆ ಪಟ್ಟಿ ಬೆಳೆಯುತ್ತದೆ. ಇನ್ನೂ ಎಷ್ಟು ಮಂದಿ ಮೋದಿಗಳು ಬರಬಹುದು?’ ಎಂದು 2019ರ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಪ್ರಶ್ನಿಸಿದ್ದ ಹೇಳಿಕೆಗೆ ಅವರೀಗ ದೊಡ್ಡ ಬೆಲೆ ತೆರುತ್ತಿದ್ದಾರೆ. ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ನೀಡಿದ್ದ ದೂರು, ಹೂಡಿದ್ದ ಮಾನನಷ್ಟ ಮೊಕದ್ದಮೆ ಕೇಸ್ನಲ್ಲಿ ಅವರು ದೋಷಿ ಎಂದು ಪರಿಗಣಿತರಾಗಿ, 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಸದ್ಯ ಜಾಮೀನು ಆಧಾರದ ಮೇಲೆ ಹೊರಗಿದ್ದಾರೆ. ಮತ್ತೊಂದೆಡೆ ಲೋಕಸಭೆ ಸದಸ್ಯತ್ವ ಸ್ಥಾನದಿಂದಲೇ ಅನರ್ಹಗೊಂಡಿದ್ದಾರೆ. ಕಾಂಗ್ರೆಸ್ ನಾಯಕರು ಈ ಬಗ್ಗೆ ಕಿಡಿಕಾರುತ್ತಿದ್ದಾರೆ. ರಾಹುಲ್ ಗಾಂಧಿ ಅನರ್ಹತೆಯನ್ನು ಪ್ರಶ್ನಿಸುತ್ತಿದ್ದಾರೆ.
ಇದೆಲ್ಲದರ ಮಧ್ಯೆ ನಟಿ, ಬಿಜೆಪಿ ನಾಯಕಿ ಖುಷ್ಬು ಸುಂದರ್ ಅವರು 2018ರಲ್ಲಿ ಮಾಡಿದ್ದ ಟ್ವೀಟ್ವೊಂದು ವೈರಲ್ ಆಗುತ್ತಿದೆ. ಅವರು ಕಾಂಗ್ರೆಸ್ನಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಡಿದ್ದ ಟ್ವೀಟ್ ಅದು. ರಾಹುಲ್ ಗಾಂಧಿ 2019ರಲ್ಲಿ ಏನು ಹೇಳಿದ್ದರೋ, ಅದೇ ಅರ್ಥ ಬರುವಂಥ ಟ್ವೀಟ್ನ್ನೇ 2018ರಲ್ಲಿ ಖುಷ್ಬು ಮಾಡಿದ್ದರು. ಆದರೂ ಯಾಕೆ ಅವರ ವಿರುದ್ಧ ಕ್ರಮವಿಲ್ಲ ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸುತ್ತಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರೂ ಈ ಟ್ವೀಟ್ನ ಶೇರ್ ಮಾಡಿಕೊಂಡಿದ್ದಾರೆ.
ಖುಷ್ಬು ಸುಂದರ್ ಟ್ವೀಟ್ ಏನು?
ರಾಜಕೀಯ ಜೀವನವನ್ನು ಡಿಎಂಕೆ ಪಕ್ಷಕ್ಕೆ ಸೇರುವ ಮೂಲಕ ಶುರು ಮಾಡಿದ ಖುಷ್ಬು ಸುಂದರ್, 2014ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. 2020ರವರೆಗೂ ಆ ಪಕ್ಷದಲ್ಲಿದ್ದು ನಂತರ ಬಿಜೆಪಿಗೆ ಸೇರಿದ್ದಾರೆ. ಹೀಗೆ ಕಾಂಗ್ರೆಸ್ನಲ್ಲಿದ್ದಾಗ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹಲವು ಟೀಕೆಗಳನ್ನು ಮಾಡಿದ್ದರು. ವ್ಯಂಗ್ಯ ಮಾಡಿದ್ದರು. ಅದರಂತೆ 2018ರಲ್ಲಿ ಟ್ವೀಟ್ ಮಾಡಿ ‘ಇಲ್ಲಿ ಮೋದಿ, ಅಲ್ಲಿ ಮೋದಿ, ಎಲ್ಲೆಲ್ಲಿ ನೋಡಿದರೂ ಮೋದಿ..ಆದರೇನು ಮಾಡುವುದು? ಎಲ್ಲ ಮೋದಿಗಳ ಮುಂದೆಯೂ ಭ್ರಷ್ಟಾಚಾರವೆಂಬ ಉಪನಾಮವಿದೆ. ಮೋದಿ ಎಂದರೇ ಭ್ರಷ್ಟಾಚಾರ ಎಂಬ ಅರ್ಥವೇ? ನಾವು ಮೋದಿ ಪದದ ಅರ್ಥವನ್ನು ಭ್ರಷ್ಟಾಚಾರವೆಂದು ಬದಲಿಸೋಣ. ನೀರವ್, ಲಲಿತ್, ನಮೋ=ಭ್ರಷ್ಟಾಚಾರ ಎಂದು ಮಾಡೋಣ. ಇದು ಸೂಕ್ತವಾಗಿದೆ’ ಎಂದಿದ್ದರು.
ಈ ಟ್ವೀಟ್ ಈಗ ಮತ್ತೆ ಹರಿದಾಡುತ್ತಿದೆ. ಮೊದಲು ಇದನ್ನು ಪೋಸ್ಟ್ ಮಾಡಿದ್ದು ಆಲ್ಟ್ ನ್ಯೂಸ್ ಸಂಸ್ಥಾಪಕ ಮೊಹಮ್ಮದ್ ಜುಬೇರ್. ಈತ ಇತ್ತೀಚೆಗಷ್ಟೇ ಸುಳ್ಳುಸುದ್ದಿ ಹರಡಿದ ಪ್ರಕರಣದಲ್ಲಿ ಜೈಲುಶಿಕ್ಷೆಗೆ ಒಳಗಾಗಿದ್ದ. ಈ ಮೊಹಮ್ಮದ್ ಜುಬೇರ್ ಮಾಡಿದ ಟ್ವೀಟ್ನ್ನು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಪೋಸ್ಟ್ ಮಾಡಿ ‘ನರೇಂದ್ರ ಮೋದಿಯವರೇ, ಹೀಗೆ ಮೋದಿ ಉಪನಾಮದ ಬಗ್ಗೆ ಮಾತನಾಡಿದ್ದ ಖುಷ್ಬು ಸುಂದರ್ ವಿರುದ್ಧ ನಿಮ್ಮ ಯಾವ ಶಿಷ್ಯಂದಿರು ಮಾನನಷ್ಟ ಮೊಕದ್ದಮೆ ಹೂಡುತ್ತಾರೆ? ಬಿಜೆಪಿಯ ಯಾವ ಸದಸ್ಯ ಅದನ್ನು ಮಾಡಬಹುದು?’ ಎಂದು ಪ್ರಶ್ನಿಸಿದ್ದಾರೆ.