ಕೋಲ್ಕತ್ತಾ: ಭಾರತದ ಅತ್ಯಂತ ಹಿರಿಯ ಹುಲಿ ಇನ್ನಿಲ್ಲ. 25 ವರ್ಷ 10 ತಿಂಗಳು ಬದುಕಿದ್ದ ಬಂಗಾಲಿ ಹುಲಿ ʼರಾಜʼ ಸೋಮವಾರ ಮೃತಪಟ್ಟಿದೆ. ಹುಲಿಗಳು ಸಾಮಾನ್ಯವಾಗಿ 12ರಿಂದ 13 ವರ್ಷ ಬದುಕುತ್ತವೆ. ಬಂಗಾಲಿ ಹುಲಿಗಳು 15ರಿಂದ 16 ವರ್ಷ ಬದುಕುತ್ತವೆ. ಆದರೆ ಈ ಹುಲಿಯ ಆಯಸ್ಸು 25 ವರ್ಷಗಳನ್ನೂ ದಾಟಿತ್ತು.
ಪಶ್ಚಿಮ ಬಂಗಾಳದ ಅಲಿಪುರ್ದಾರ್ ಜಿಲ್ಲೆಯ ಜಲ್ದಪರದಲ್ಲಿರುವ ಖೈರಿಬರಿ ಹುಲಿ ಮತ್ತು ಚಿರತೆ ರಕ್ಷಣಾ ಕೇಂದ್ರದಲ್ಲಿ ರಾಜನನ್ನು ಇರಿಸಲಾಗಿತ್ತು. ದಕ್ಷಿಣ 24 ಪರಗಣ ಜಿಲ್ಲೆಯ, ಬಂಗಾಳದ ಹುಲಿಗಳ ವಾಸಸ್ಥಾನವಾದ
ಸುಂದರಬನ್‌ನಲ್ಲಿ ಮೊಸಳೆ ದಾಳಿಯಿಂದ ಗಾಯಗೊಂಡಿದ್ದ ಈ ಹುಲಿಯನ್ನು 2008ರ ಆಗಸ್ಟ್‌ನಲ್ಲಿ ರಕ್ಷಿಸಿ ಈ ಕೇಂದ್ರಕ್ಕೆ ತರಲಾಗಿತ್ತು ಎಂದು ವಿಭಾಗೀಯ ಅರಣ್ಯಾಧಿಕಾರಿ ಎಂ. ದೀಪಕ್ ತಿಳಿಸಿದ್ದಾರೆ.
ಮೊಸಳೆಯು ಕಚ್ಚಿದ್ದರಿಂದ ಇದರ ದೇಹದಲ್ಲಿ 10 ಗಾಯಗಳಾಗಿದ್ದರೂ, ರಾಜನಂತೆ ಈ ಹುಲಿ ಜೋರಾಗಿತ್ತು. ಹೀಗಾಗಿಯೇ ಕೇಂದ್ರದ ಸಿಬ್ಬಂದಿ ಇದಕ್ಕೆ ʼರಾಜʼ ಎಂದೇ ಹೆಸರು ನೀಡಿದ್ದರು. ಅಂದಿನಿಂದಲೂ ರಾಜ ಇಲ್ಲಿಯೇ ಇತ್ತು. ‘ರಾಜ ಕಳೆದ ಕೆಲವು ತಿಂಗಳುಗಳಿಂದ ವಯೋ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿತ್ತು. ಬಹು ಅಂಗಾಂಗ ವೈಫಲ್ಯದ ಹಿನ್ನೆಲೆಯಲ್ಲಿ ಸೋಮವಾರ ಮುಂಜಾನೆ ಮೃತಪಟ್ಟಿದೆ’ ಎಂದು ದೀಪಕ್ ತಿಳಿಸಿದಾರೆ.
ಮೃತ ಹುಲಿಯು ಸುಮಾರು 140 ಕೆಜಿ ತೂಕವಿತ್ತು. ‘ರಾಜ’ ಸ್ಮರಣಾರ್ಥ ಖೈರಿಬರಿ ಹುಲಿ ಮತ್ತು ಚಿರತೆ ರಕ್ಷಣಾ ಕೇಂದ್ರದಲ್ಲಿ ಸ್ಮಾರಕ ನಿರ್ಮಿಸಲು ಚಿಂತಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ರಾಜ ಹುಲಿಗೆ ಸ್ಥಳೀಯ ಜಿಲ್ಲಾಧಿಕಾರಿ ಸುರೇಂದ್ರ ಕುಮಾರ್ ಮೀನಾ ಸೇರಿದಂತೆ ಅರಣ್ಯ ಇಲಾಖೆಯ ಅನೇಕ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದ್ದಾರೆ. ʼಈ ಹಲಿಯ ಸಾವಿನಿಂದ ನನಗೆ ತುಂಬಾ ನೋವಾಗಿದೆ. ನಿಯಮಗಳ ಪ್ರಕಾರ, ಮೊದಲು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು. ನಂತರ ಮೃತದೇಹವನ್ನು ಸುಡಲಾಯಿತು’ ಎಂದು ಮೀನಾ ತಿಳಿಸಿದ್ದಾರೆ.
ಸಾಮಾನ್ಯವಾಗಿ ಅರಣ್ಯದಲ್ಲಿ ಹುಲಿಗಳು ರೋಗ, ವಿವಿಧ ಕಾರಣಗಳಿಗೆ ಪರಸ್ಪರ ಕಾದಾಟ, ಆಹಾರದ ಕೊರತೆ, ಹವಾಮಾನ ವೈಪರೀತ್ಯ, ವಾಸಸ್ಥಳದ ಕೊರತೆ ಮುಂತಾದ ಕಾರಣಗಳಿಂದ 8-15 (ಸರಾಸರಿ 11 ವರ್ಷ) ಮಾತ್ರ ಬದುಕುತ್ತವೆ. ಮೃಗಾಲಯ, ಸಂರಕ್ಷಣಾ ಕೇಂದ್ರಗಳಲ್ಲಿ ಉತ್ತಮ ಆಹಾರ, ರಕ್ಷಣೆ, ಅವುಗಳ ಆರೋಗ್ಯದ ಸುರಕ್ಷತೆ ನೀಡಿ ನೋಡಿಕೊಂಡರೆ ಅವು 25 ವರ್ಷಗಳ ವರೆಗೆ ಬದುಕಬಲ್ಲವು ಎಂಬುದನ್ನು ಈ ರಾಜ ಹುಲಿ ತೋರಿಸಿಕೊಟ್ಟಿದೆ.
ಇದನ್ನೂ ಓದಿ | ʼರಾಕಿʼಗೆ ಮೂರು ಮಕ್ಕಳು: Mysuru Zooನಲ್ಲಿ 9 ವರ್ಷದ ಬಳಿಕ ಬಿಳಿ ಹುಲಿಮರಿಗಳ ಜನನ