Site icon Vistara News

ನಿಮ್ಮ ಕೇಂದ್ರ ಸರ್ಕಾರ ತನಿಖಾ ದಳಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ; ವಿಪಕ್ಷಗಳ 9 ನಾಯಕರಿಂದ ಪ್ರಧಾನಿ ನರೇಂದ್ರ ಮೋದಿಗೆ ಪತ್ರ

99th Edition Of Mann Ki Baat By PM Modi here is Live Updates Details In Kannada

ಕೇಂದ್ರೀಯ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ) ಸೇರಿ ಎಲ್ಲ ತನಿಖಾ ದಳಗಳ ದುರ್ಬಳಕೆ ಆಗುತ್ತಿದೆ. ಬೇರೆ ಪಕ್ಷದಲ್ಲಿದ್ದು ಭ್ರಷ್ಟಾಚಾರ ಮಾಡಿ, ನಂತರ ಬಿಜೆಪಿ ಸೇರ್ಪಡೆಯಾದ ರಾಜಕಾರಣಿಗಳ ವಿರುದ್ಧ ಯಾವುದೇ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಒಂಭತ್ತು ವಿಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ಭಾರತ್​ ರಾಷ್ಟ್ರ ಸಮಿತಿ (ಬಿಆರ್​ಎಸ್​-ಆಗಿನ ಟಿಆರ್​ಎಸ್​) ಮುಖ್ಯಸ್ಥ ಚಂದ್ರಶೇಖರ್​ ರಾವ್​, ಜಮ್ಮು-ಕಾಶ್ಮೀರ ನ್ಯಾಶನಲ್ ಕಾನ್ಫರೆನ್ಸ್​ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ಮುಖ್ಯಸ್ಥ ಶರದ್​ ಪವಾರ್​, ಶಿವಸೇನಾ ನಾಯಕ ಉದ್ಧವ್ ಠಾಕ್ರೆ, ಆಮ್​ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್​ ಸೇರಿ ಒಂಭತ್ತು ಪ್ರಮುಖ ನಾಯಕರ ಸಹಿ ಈ ಪತ್ರದಲ್ಲಿದೆ. ಕೇಂದ್ರ ಏಜೆನ್ಸಿಗಳ ಘನತೆ ಕುಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ವಿರೋಧ ಪಕ್ಷಗಳ ಹಲವು ರಾಜಕಾರಣಿಗಳ ಮೇಲೆ ಸಿಬಿಐ, ಇಡಿ, ಐಟಿ ದಾಳಿಯಾಗಿದೆ. ವಿಪಕ್ಷಗಳ ನಾಯಕರು ಬಂಧನಕ್ಕೆ ಒಳಗಾಗುತ್ತಿದ್ದಾರೆ. ಆದರೆ ಬೇರೆ ವಿವಿಧ ಪಕ್ಷಗಳಲ್ಲಿದ್ದು ಬಳಿಕ ಬಿಜೆಪಿಗೆ ಸೇರಿದವರು ಭ್ರಷ್ಟರಾಗಿದ್ದರೂ, ಆ ವಿಷಯ ಗೊತ್ತಿದ್ದರೂ ತನಿಖಾ ದಳಗಳು ಅಂಥವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಉದಾಹರಣೆಗೆ ಅಸ್ಸಾಂ ಮಾಜಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಶಾರದಾ ಚಿಟ್ ಫಂಡ್​ ಹಗರಣದಡಿ 2014 ಮತ್ತು 2015ರಲ್ಲಿ ಇಡಿ ಮತ್ತು ಸಿಬಿಐ ತನಿಖೆಗೆ ಒಳಪಟ್ಟಿದ್ದಾರೆ. ಆದರೆ ಬಳಿಕ ಅವರು ಬಿಜೆಪಿ ಸೇರ್ಪಡೆಯಾದರು. ಅಷ್ಟಾದ ಮೇಲೆ ಹಿಮಂತ ಬಿಸ್ವಾ ಶರ್ಮಾ ವಿರುದ್ಧದ ಕೇಸ್​ ಮುಂದುವರಿಯಲೇ ಇಲ್ಲ. ಅದೇ ರೀತಿ ತೃಣಮೂಲ ಕಾಂಗ್ರೆಸ್​​ನಲ್ಲಿದ್ದ ಸುವೇಂದು ಅಧಿಕಾರಿ ಮತ್ತು ಮುಕುಲ್​ ರಾಯ್​ ಹೆಸರು ಕೂಡ ಕೆಲವು ಹಗರಣಗಳಲ್ಲಿ ಕೇಳಿಬಂದಿತ್ತು. ಆದರೆ ಬಿಜೆಪಿಗೆ ಸೇರಿದ ಮೇಲೆ ಅವರ ವಿರುದ್ಧ ಯಾವುದೇ ತನಿಖೆಯೂ ಇಲ್ಲ. ಮಹಾರಾಷ್ಟ್ರದಲ್ಲಿ ಹೀಗೆ ಶ್ರೀ ನಾರಾಯಣ ರಾಣೆ ಬಚಾವಾಗಿದ್ದಾರೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

2014ರಿಂದ ಇಲ್ಲಿಯವರೆಗೆ ಆರ್​ಜೆಡಿಯ ಲಾಲೂ ಪ್ರಸಾದ್​ ಯಾದವ್​, ಶಿವಸೇನೆಯ ಸಂಜಯ್ ರಾವತ್​, ಸಮಾಜವಾದಿ ಪಾರ್ಟಿಯ ಆಜಂ ಖಾನ್​, ಎನ್​ಸಿಪಿ ಪಕ್ಷದ ನವಾಬ್ ಮಲಿಕ್, ಅನಿಲ್ ದೇಶ್​ಮುಖ್​, ಟಿಎಂಸಿ ಅಭಿಷೇಕ್​ ಬ್ಯಾನರ್ಜಿ ಸೇರಿ ಹಲವರ ಮೇಲೆ ಕೇಸ್ ದಾಖಲಾಯಿತು. ಅದರಲ್ಲೂ ಚುನಾವಣೆಗಳು ಸಮೀಪಿಸುತ್ತಿದ್ದಾಗಲೇ ಪ್ರತಿಪಕ್ಷಗಳ ನಾಯಕರ ಮೇಲೆ ತನಿಖಾ ದಳಗಳ ದಾಳಿ ಆಗುತ್ತದೆ. ಪ್ರತಿಪಕ್ಷಗಳನ್ನು ನಿರ್ಮೂಲನ ಮಾಡಲು ನಿಮ್ಮ ಸರ್ಕಾರ ಈ ತನಿಖಾ ದಳಗಳನ್ನು ಬಳಸಿಕೊಳ್ಳುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ದೇಶದಲ್ಲಿ ಹಲವು ರಾಜ್ಯಗಳಲ್ಲಿ ರಾಜ್ಯಪಾಲರೂ ಕೂಡ ಅವರ ಮಿತಿಗಳನ್ನು ಉಲ್ಲಂಘಿಸಿ, ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅವರೂ ಸಹ ಉದ್ದೇಶಪೂರ್ವಕವಾಗಿ, ಚುನಾಯಿತ ರಾಜ್ಯ ಸರ್ಕಾರಗಳನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ. ಅದೂ ಕೂಡ ಬಿಜೆಪಿಯೇತರ ಸರ್ಕಾರ ಇರುವ ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಪಂಜಾಬ್​, ತೆಲಂಗಾಣ, ದೆಹಲಿಯ ಲೆಫ್ಟಿನೆಂಟ್ ಗವರ್ನರ್​ಗಳು ಈಗಾಗಲೇ ಹಲವು ಗೊಂದಲಗಳನ್ನು ಸೃಷ್ಟಿಸಿದ್ದಾರೆ. ಕೇಂದ್ರ ಮತ್ತು ರಾಜ್ಯಗಳ ನಡುವಿನ ಕಂದಕವನ್ನು ಹೆಚ್ಚಿಸುತ್ತಿದ್ದಾರೆ ಎಂದು ವಿಪಕ್ಷಗಳ ನಾಯಕರು ತಿಳಿಸಿದ್ದಾರೆ.

Exit mobile version