Site icon Vistara News

Opposition Meet: ಪ್ರತಿಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್​ಗೆ ಬೈದ ದೀದಿ; ಮೂಡದ ಒಮ್ಮತ, ಶೀಘ್ರವೇ ಮತ್ತೆ ಸಭೆ

Todays Opposition Meet

#image_title

2024ರ ಲೋಕಸಭೆ ಚುನಾವಣೆ (2024 Lok Sabha Election)ಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು ಎಂಬ ಹಠತೊಟ್ಟು ದೇಶದ ಪ್ರಮುಖ ವಿಪಕ್ಷಗಳೆಲ್ಲ ಒಂದಾಗಿ ಇಂದು ಪಾಟ್ನಾದಲ್ಲಿ ಸಭೆ (Opposition Meet) ನಡೆಸಿವೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಪ್​, ಸಮಾಜವಾದಿ ಪಕ್ಷ, ಎನ್​ಸಿಪಿ, ಶಿವಸೇನೆ ಉದ್ಧವಠಾಕ್ರೆ ಬಣ, ಜೆಡಿಯು, ಆರ್​ಜೆಡಿ..ಹೀಗೆ ಒಟ್ಟು 15 ಪಕ್ಷಗಳ ಪ್ರಮುಖ ನಾಯಕರು ಇಂದಿನ ಸಭೆಯಲ್ಲಿ ಪಾಲ್ಗೊಂಡರು. ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಅವರ ಪಾಟ್ನಾ ನಿವಾಸದಲ್ಲಿ ಈ ಸಭೆ ಆಯೋಜನೆಗೊಂಡಿತ್ತು. ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್​, ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ, ಶರದ್​ ಪವಾರ್, ಉದ್ಧವ್ ಠಾಕ್ರೆ ಸೇರಿ ದಿಗ್ಗಜರೆಲ್ಲ ಸಭೆಯಲ್ಲಿ ಪಾಲ್ಗೊಂಡು ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಹಾಗಿದ್ದಾಗ್ಯೂ ಪಾಟ್ನಾದಲ್ಲಿ ನಡೆದ ಈ ಸಭೆಯಲ್ಲಿ ಪ್ರತಿಪಕ್ಷಗಳು ಯಾವುದೇ ಒಮ್ಮತಕ್ಕೆ ಬರಲಿಲ್ಲ. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಿಲ್ಲ ಎಂದು ಹೇಳಲಾಗಿದೆ. ಸಭೆ ಮುಗಿಯುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ‘ಇಂದಿನ ಸಭೆಯಲ್ಲಿ ಯಾವುದೇ ವಿಷಯದಲ್ಲೂ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಶೀಘ್ರದಲ್ಲೇ ಶೀಮ್ಲಾ (ಹಿಮಾಚಲ ಪ್ರದೇಶ)ದಲ್ಲಿ ಇನ್ನೊಂದು ಸಭೆ ಆಯೋಜಿಸಲಾಗುವುದು. ಅಲ್ಲಿ ಜುಲೈ 10-12ರವರೆಗೆ ಮೂರು ದಿನಗಳ ಕಾಲ ಸಭೆ ನಡೆಯಲಿದೆ. ಮಲ್ಲಿಕಾರ್ಜು್ ಖರ್ಗೆಯವರೇ ಈ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಹಾಗೇ, ಮುಂದಿನ ಸಭೆಯ ಒಳಗೆ ಪ್ರತಿಪಕ್ಷಗಳ ಈ ಒಕ್ಕೂಟಕ್ಕೆ ಒಬ್ಬ ಸಂಚಾಲಕನನ್ನು ನೇಮಕ ಮಾಡಲಾಗುವುದು’ ಎಂದು ತಿಳಿಸಿದ್ದಾರೆ. ಅಷ್ಟಲ್ಲದೆ ಇಂದಿನ ಸಭೆ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ತುಂಬ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಸಭೆಯನ್ನು ಹಮ್ಮಿಕೊಳ್ಳುವಂತೆ ಅವರೇ ಹೇಳಿದ್ದಾರೆ ಎಂದೂ ನಿತೀಶ್​ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: Opposition Meet: ಪಾಟ್ನಾದಲ್ಲಿ ಪ್ರತಿಪಕ್ಷಗಳ ಒಗ್ಗಟ್ಟು; ‘ಫೋಟೋ ಸೆಷನ್​’ ಎಂದು ಕಾಲೆಳೆದ ಅಮಿತ್ ಶಾ

ಆಪ್​ ತಕರಾರು!
ಪ್ರತಿಪಕ್ಷಗಳ ಒಗ್ಗಟ್ಟಿನ ಮಂತ್ರಕ್ಕೆ ವಿಘ್ನ ತರುವ ಮಾತುಗಳನ್ನು ಆಮ್ ಆದ್ಮಿ ಪಕ್ಷ ಪ್ರಾರಂಭದಲ್ಲೇ ಹೇಳಿದೆ. ದೆಹಲಿ ಕಾನೂನು ಸುವ್ಯವಸ್ಥೆ, ಭೂಮಿ, ಸಾರ್ವಜನಿಕ ಭದ್ರತೆ ವಿಷಯಗಳನ್ನು ಬಿಟ್ಟು, ಉಳಿದೆಲ್ಲ ಸೇವೆಗಳಿಗೆ ಸಂಬಂಧಪಟ್ಟ ಆಡಳಿತ ದೆಹಲಿ ಸ್ಥಳೀಯ ಪ್ರಜಾಪ್ರಭುತ್ವ ಸರ್ಕಾರದ್ದು ಎಂದು ಸುಪ್ರೀಂಕೋರ್ಟ್​ ತೀರ್ಪು ಕೊಟ್ಟಿತ್ತು. ಆದರೆ ಈ ತೀರ್ಪು ಹೊರಬಿದ್ದ ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯೊಂದನ್ನು ಹೊರಡಿಸಿತ್ತು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗ್ರೂಪ್​ 1 ಅಧಿಕಾರಿಗಳ ವರ್ಗಾವಣೆ, ಪೋಸ್ಟಿಂಗ್​ ಮತ್ತಿತರ ವಿಚಾರಗಳಲ್ಲಿ ಅಲ್ಲಿನ ಲೆಫ್ಟಿನೆಂಟ್​ ಗವರ್ನರ್​ ಶಿಫಾರಸ್ಸು ಮಾಡುವ ಅಧಿಕಾರವನ್ನು ನೀಡುವ ರಾಷ್ಟ್ರ ರಾಜಧಾನಿ ಸೇವಾ ಪ್ರಾಧಿಕಾರವನ್ನು ಸ್ಥಾಪಿಸಿತ್ತು. ಸುಪ್ರೀಂ ತೀರ್ಪನ್ನೂ ಮನ್ನಣೆ ಮಾಡದಂಥ ನಿರ್ಧಾರ ಇದು ಎಂಬುದು ಅರವಿಂದ್ ಕೇಜ್ರಿವಾಲ್ ಸರ್ಕಾರದ ಆರೋಪ. ಇದೇ ವಿಷಯವನ್ನು ಇಟ್ಟುಕೊಂಡು ಆಮ್​ ಆದ್ಮಿ ಪಕ್ಷ ಇಂದು ತಕರಾರು ತೆಗೆದಿದೆ.

ದೆಹಲಿ ಆಡಳಿತಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ ವಿರೋಧಿಸಲು ಕಾಂಗ್ರೆಸ್​ ಪಕ್ಷವು, ಆಮ್​ ಆದ್ಮಿ ಪಕ್ಷದೊಂದಿಗೆ ನಿಲ್ಲದೆ ಇದ್ದರೆ ನಾವು ಮುಂದಿನ ಯಾವುದೇ ಪ್ರತಿಪಕ್ಷಗಳ ಸಭೆಗೆ ಹಾಜರಾಗುವುದಿಲ್ಲ ಎಂದು ಆಪ್​ ಹೇಳಿತ್ತು. ಸಭೆ ಪೂರ್ವದಲ್ಲೂ ಈ ಮಾತಾಡಿದ್ದ ಆಮ್​ ಆದ್ಮಿ ಪಕ್ಷ, ಸಭೆಯಲ್ಲೂ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಬಳಿ ಇದೇ ವಿಷಯವನ್ನು ಪ್ರಸ್ತಾಪಿಸಿದೆ. ಅದಕ್ಕೆ ಉತ್ತರಿಸಿದ ಮಲ್ಲಿಕಾರ್ಜುನ್ ಖರ್ಗೆ ‘ಈ ವಿಷಯವನ್ನುನಾವು ಇಲ್ಲಿ ಚರ್ಚಿಸುವುದು ಬೇಡ ಎನ್ನಿಸುತ್ತದೆ’ ಎಂದು ಅರವಿಂದ್ ಕೇಜ್ರಿವಾಲ್​ಗೆ ಹೇಳಿದ್ದಾರೆ.

ಇದನ್ನೂ ಓದಿ: Opposition Meet: ರಾಹುಲ್ ಗಾಂಧಿ ರಿಯಲ್ ದೇವದಾಸ್​; ‘ಆ ದಿನ ದೂರವಿಲ್ಲ’ ಎಂದ ಬಿಜೆಪಿ

ಕಾಂಗ್ರೆಸ್​ಗೆ ನೇರವಾಗಿ ಬೈದ ಮಮತಾ ಬ್ಯಾನರ್ಜಿ
ಈ ಪ್ರತಿಪಕ್ಷಗಳ ಸಭೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್​ಗೆ ನೇರವಾಗಿಯೇ ಕಟುವಾಗಿ ಮಾತನಾಡಿದರು. ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್​​ನ ವರ್ತನೆ ಸರಿಯಿಲ್ಲ. ಅದು ತೃಣಮೂಲ ಕಾಂಗ್ರೆಸ್​ ವಿರುದ್ಧ ಹೆಜ್ಜೆಯಿಡುತ್ತಿದೆ. ನಮ್ಮಲ್ಲೇ ಹೀಗೆ ಆಂತರಿಕ ಜಗಳವಿರದ್ದರೆ ಬಿಜೆಪಿ ಅದನ್ನು ಲಾಭವಾಗಿ ಮಾಡಿಕೊಳ್ಳುತ್ತದೆ ಎಂದು ಹೇಳಿದರು. ಇನ್ನು ‘ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಬಿಜೆಪಿ ಇತಿಹಾಸವನ್ನು ಬದಲಿಸಲು ಪ್ರಯತ್ನಿಸುತ್ತಿದೆ. ಆದರೆ ನಾವು ಇಲ್ಲಿಂದಲೇ ಇತಿಹಾಸ ಶುರು ಮಾಡಿದ್ದೇವೆ. ಮುಂದಿನ ಲೋಕಸಭೆ ಚುನಾವಣೆಯನ್ನು ನಾವೆಲ್ಲ ಒಟ್ಟಾಗಿ ಎದುರಿಸುತ್ತೇವೆ’ ಎಂದಿದ್ದಾರೆ.

ಈ ಮಧ್ಯೆ ತಮ್ಮನ್ನು ಸಭೆಗೆ ಕರೆಯದೆ ಇರುವ ನಿತೀಶ್ ಕುಮಾರ್​ ವಿರುದ್ಧ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದರು.

Exit mobile version