ರಾಯ್ಪುರ: ಭಾರತದಲ್ಲಿ ಅಳಿವಿನಂಚಿನಲ್ಲಿರುವ ಬಾವಲಿಗಳ ತಳಿಯಾದ ʼಕೇಸರಿ ಬಾವಲಿʼ (Orange Bat) ಚತ್ತೀಸ್‌ಗಢದಲ್ಲಿ ಕಾಣಿಸಿಕೊಂಡಿದೆ. ಅಪರೂಪದಲ್ಲಿ ಅಪರೂಪವಾಗಿರುವ ಈ ಬಾವಲಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: Deforestation | ಬಾವಲಿ ಗಲೀಜು ಮಾಡುತ್ತದೆ ಎಂದು ಅರಣ್ಯ ಇಲಾಖೆ ಕಚೇರಿಯ ಎದುರಿನ 6 ಮರಕ್ಕೆ ಕೊಡಲಿ ಏಟು?
ಬಸ್ತಾರ್ ಜಿಲ್ಲೆಯಲ್ಲಿರುವ ಕಂಗೇರ್ ಘಾಟಿ ರಾಷ್ಟ್ರೀಯ ಉದ್ಯಾನದ ಪ್ರಾಂತ್ಯದಲ್ಲಿರುವ ಪರಾಲಿ ಬೊದಲ್ ಗ್ರಾಮದ ಬಾಳೆ ತೋಟದಲ್ಲಿ ಈ ಬಾವಲಿ ಕಾಣಿಸಿಕೊಂಡಿದೆ. “ಬಣ್ಣದ ಬಾವಲಿ” ಎಂದೂ ಕರೆಸಿಕೊಳ್ಳುವ ಈ ಬಾವಲಿಯು ಕಳೆದ ಮೂರು ವರ್ಷಗಳಲ್ಲಿ ಕಂಗೇರ್ ಉದ್ಯಾನದ ಪ್ರದೇಶದಲ್ಲಿ ಮೂರು ಬಾರಿ ಕಾಣಸಿಕ್ಕಿದೆ. ಈ ಹಿಂದೆ 2020 ಹಾಗೂ 2022ರಲ್ಲಿ ಕೇಸರಿ ಬಾವಲಿ ಬೇರೆ ಬೇರೆ ಗ್ರಾಮಗಳಲ್ಲಿ ಕಾಣಿಸಿಕೊಂಡಿತ್ತು ಎಂದು ಉದ್ಯಾನದ ನಿರ್ದೇಶಕರಾಗಿರುವ ಧಮ್ಶಿಲ್ ಗನ್ವೀರ್ ಅವರು ತಿಳಿಸಿದ್ದಾರೆ.
ಕೇಸರಿ ಬಾವುಲಿಯು ಬಾಂಗ್ಲಾದೇಶ, ಮಯನ್ಮಾರ್, ಕಾಂಬೋಡಿಯಾ, ಚೀನಾ, ಭಾರತ, ಇಂಡೋನೇಷ್ಯಾ, ಮಲೇಷಿಯಾ, ಶ್ರೀಲಂಕಾ, ನೇಪಾಳ, ಥಾಯ್ಲೆಂಡ್ ಮತ್ತು ವಿಯೇಟ್ನಾಂನಲ್ಲಿ ಕಾಣಸಿಗುತ್ತದೆ. ಆದರೆ ಸದ್ಯ ಈ ತಳಿ ಅಳಿವಿನಂಚಿನಲ್ಲಿದೆ. ಇವು ಹಾರುತ್ತಲೇ ಹುಳಗಳನ್ನು ಹಿಡಿದು ತಿನ್ನುವ ತಳಿ. ಜೋಳದ ಕೊಯ್ಲಿನ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: RSS Baithak | ಸೆಪ್ಟೆಂಬರ್ 10ರಿಂದ ಚತ್ತೀಸ್‌ಗಢದ ರಾಯ್‌ಪುರದಲ್ಲಿ ಅಖಿಲ ಭಾರತೀಯ ಸಮನ್ವಯ್ ಬೈಠಕ್
ಕಂಗೇರ್ ಘಾಟಿ ರಾಷ್ಟ್ರೀಯ ಉದ್ಯಾನವು 200 ಚ.ಕಿ.ಮೀ. ವಿಸ್ತೀರ್ಣಕ್ಕೆ ಹಬ್ಬಿದೆ. ಸುಣ್ಣದ ಗುಹೆಗಳು ಇದರಲ್ಲಿರುವುದರಿಂದ ಹೆಚ್ಚಾಗಿ ಬಾವಲಿಗಳು ಕಾಣಸಿಗುತ್ತವೆ. ಹಲವಾರು ಜಾತಿಯ ಪ್ರಾಣಿ, ಪಕ್ಷಿಗಳು ಇಲ್ಲಿವೆ. ಶೀಘ್ರವೇ ಉದ್ಯಾನದಲ್ಲಿರುವ ಬಾವಲಿಗಳ ಸಮೀಕ್ಷೆ ನಡೆಸಲಾಗುವುದು ಎಂದು ಉದ್ಯಾನದ ಆಡಳಿತ ತಿಳಿಸಿದೆ.