ನವ ದೆಹಲಿ: ಭಾರತದಲ್ಲಿ ಕೊವಿಡ್ 19 (Covid 19 Updates) ಸೋಂಕು ದಿನೇದಿನೆ ಹೆಚ್ಚಳವಾಗುತ್ತಿದೆ. ನಿನ್ನೆ 10 ಸಾವಿರ ಸೋಂಕಿತರು ದಾಖಲಾಗಿದ್ದರು. ಇಂದು ನಿನ್ನೆಗಿಂತಲೂ 1 ಸಾವಿರ ಕೇಸ್ಗಳು ಹೆಚ್ಚಾಗಿವೆ. ಕಳೆದ 24ಗಂಟೆಯಲ್ಲಿ 11,109 ಕೊವಿಡ್ 19 ಸೋಂಕಿತರು ಪತ್ತೆಯಾಗಿದ್ದಾರೆ. ಹೀಗೆ ಕೊರೊನಾ ಸೋಂಕಿನಲ್ಲಿ ಪ್ರತಿದಿನ ಹೆಚ್ಚಳವಾಗುತ್ತಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹಜವಾಗಿಯೇ ಏರಿಕೆಯಾಗಿದೆ. ಸದ್ಯ ದೇಶದಲ್ಲಿ ಕೊವಿಡ್ 19 ಸಕ್ರಿಯ ಪ್ರಕರಣಗಳು 49,622.
ದೇಶದಲ್ಲಿ 24ಗಂಟೆಯಲ್ಲಿ 29ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ದೈನಂದಿನ ಪಾಸಿಟಿವಿಟಿ ರೇಟ್ ಶೇ.5.01 ಮತ್ತು ವಾರದ ಪಾಸಿಟಿವಿಟಿ ಪ್ರಮಾಣ ಶೇ.4.29ರಷ್ಟಿದೆ. ಚೇತರಿಕೆ ಪ್ರಮಾಣ ಶೇ.98.71 ಇದ್ದು, ಮರಣದ ಪ್ರಮಾಣ ಶೇ.1.19 ಇದೆ. ಕೊರೊನಾ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಚೇತರಿಸಿಕೊಂಡವರು 4,42,16,583 ಮಂದಿ. ಸೋಂಕಿನಿಂದ ಮೃತಪಟ್ಟವರು 5,31,064. ಹಾಗೇ, 24ಗಂಟೆಯಲ್ಲಿ 476 ಡೋಸ್ ಲಸಿಕೆ ನೀಡಲಾಗಿದೆ. ಇದುವರೆಗೆ ದೇಶಾದ್ಯಂತ ಕೊರೊನಾ ಲಸಿಕೆ 220,66,25,120 ಕೋಟಿ ಡೋಸ್ ನೀಡಲಾಗಿದೆ.
ಇದನ್ನೂ ಓದಿ: Covid 19 Updates: ಇಂದು 10 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್ಗಳು ದಾಖಲು; ಪಾಸಿಟಿವಿಟಿ ರೇಟ್ ಶೇ.4ಕ್ಕೆ ಏರಿಕೆ
ಭಾರತದಲ್ಲಿ ಸದ್ಯ ಕೊವಿಡ್ 19 ಎಂಡಮಿಕ್ ಹಂತದಲ್ಲಿದೆ. ಅಂದರೆ ಸ್ಥಳೀಯವಾಗಿ ಜೋರಾಗಿ ಹರಡುತ್ತಿದೆ. ಇನ್ನು 10-12 ದಿನಗಳ ಕಾಲ ಹೀಗೆ ಅತಿಯಾಗಿ ಏರಿಕೆಯಾಗಬಹುದು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜ್ಯ ನಗರಿ ಮುಂಬಯಿ, ಕೇರಳ, ತಮಿಳುನಾಡು, ಹರ್ಯಾಣ, ಉತ್ತರ ಪ್ರದೇಶ, ಕರ್ನಾಟಕದಲ್ಲಿ ಕೊರೊನಾ ಪ್ರಸರಣ ಹೆಚ್ಚುತ್ತಿದೆ. ದೆಹಲಿಯಲ್ಲಿ 24ಗಂಟೆಯಲ್ಲಿ 1,527 ಕೇಸ್ಗಳು ದಾಖಲಾಗಿವೆ. ಪಾಸಿಟಿವಿಟಿ ರೇಟ್ ಅಲ್ಲಿ ಶೇ.27.27ರಷ್ಟಿದೆ. ಹಾಗೇ, ಮುಂಬಯಿಯಲ್ಲಿ ಇಂದು 274 ಕೊರೊನಾ ಕೇಸ್ಗಳು ದಾಖಲಾಗಿವೆ. ಇಲ್ಲಿ ಸಕ್ರಿಯ ಪ್ರಕರಣಗಳು 19,752. ಕೇರಳ, ಹರ್ಯಾಣದಲ್ಲಿ ಈಗಾಗಲೇ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
ಕರ್ನಾಟಕದಲ್ಲಿ ಸಕ್ರಿಯ ಪ್ರಕರಣಗಳು ಎಷ್ಟು?
ಕರ್ನಾಟಕದಲ್ಲಿ ಕೂಡ ಕೊರೊನಾ ಪ್ರಸರಣಗೊಳ್ಳುತ್ತಿದೆ. ರಾಜ್ಯದಲ್ಲಿ ಸದ್ಯ 1714 ಸಕ್ರಿಯ ಪ್ರಕರಣಗಳು ಇವೆ. ಏಪ್ರಿಲ್ 13ರಂದು 498 ಕೊರೊನಾ ಕೇಸ್ಗಳು ದಾಖಲಾಗಿ, 281 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹಾಗೇ, ಒಂದು ಸಾವು ವರದಿಯಾಗಿತ್ತು.