ನವದೆಹಲಿ: ದೇಶದಲ್ಲಿ ಮತ್ತೆ ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿಗೆ ಕಾನೂನು ಆಯೋಗವು ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಒಂದೇ ಕುಟುಂಬದಲ್ಲಿ ಎರಡು ನಿಯಮಗಳು ಇರಬಾರದು ಎಂದು ಹೇಳುವ ಮೂಲಕ ಏಕರೂಪ ನಾಗರಿಕ ಸಂಹಿತೆ ಜಾರಿ ಪರ ಮಾತನಾಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಹಾಗೂ ಪ್ರತಿಪಕ್ಷಗಳ ಮಧ್ಯೆ ವಾಕ್ಸಮರ ಶುರುವಾಗಿದೆ. ಏಕರೂಪ ನಾಗರಿಕ ಸಂಹಿತೆ ಜಾರಿಯನ್ನು ವಿರೋಧಿಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಗೆ ಬಿಜೆಪಿ ನಾಯಕ ಗೌರವ್ ಭಾಟಿಯಾ ತಿರುಗೇಟು ನೀಡಿದ್ದಾರೆ. “ಅಸಾದುದ್ದೀನ್ ಓವೈಸಿ ಅವರು ಕುರಾನ್ ಓದುತ್ತಾರೆ. ಅವರಿಗೆ ಸಂವಿಧಾನಕ್ಕಿಂತ ಕುರಾನ್ ಮುಖ್ಯ” ಎಂದು ಟಾಂಗ್ ನೀಡಿದ್ದಾರೆ.
“ಅಸಾದುದ್ದೀನ್ ಓವೈಸಿ ಅವರಿಗೆ ಸಂವಿಧಾನಕ್ಕಿಂತ ಕುರಾನ್ ಮುಖ್ಯ. ಅವರು ಕುರಾನ್ ಓದುವುದರಿಂದ ಸಂವಿಧಾನದ ಬಗ್ಗೆ ಕಾಳಜಿ ಇಲ್ಲ. ಅಸಾದುದ್ದೀನ್ ಓವೈಸಿ ಅವರ ಪದವಿ ನಕಲಿ ಅಲ್ಲವಾಗಿದ್ದರೆ ಅವರು ಕಾನೂನು ಆಯೋಗಕ್ಕೆ ಜುಲೈ 14ರೊಳಗೆ ತಮ್ಮ ಅಭಿಪ್ರಾಯ ತಿಳಿಸಲಿ. ಓವೈಸಿ ಮಾತ್ರವಲ್ಲ, ಯಾರು ಏಕರೂಪ ನಾಗರಿಕ ಸಂಹಿತೆಯ ವಿರುದ್ಧವಾಗಿದ್ದಾರೋ, ಅವರೆಲ್ಲರೂ ಅಭಿಪ್ರಾಯ ತಿಳಿಸಲಿ” ಎಂದು ಹೇಳಿದ್ದಾರೆ. ದೇಶದ ನಾಗರಿಕರು ಹಾಗೂ ಧಾರ್ಮಿಕ ಸಂಸ್ಥೆಗಳು ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ಅಭಿಪ್ರಾಯ ತಿಳಿಸುವಂತೆ ಕಾನೂನು ಆಯೋಗವು ಕೋರಿದೆ. ಕಾಂಗ್ರೆಸ್, ಎಐಎಂಐಎಂ ಸೇರಿ ಹಲವು ಪಕ್ಷಗಳು ಇದನ್ನು ವಿರೋಧಿಸಿವೆ.
ಏನಿದು ಏಕರೂಪ ನಾಗರಿಕ ಸಂಹಿತೆ?
ಜಾತಿ, ಧರ್ಮ, ಪಂಥಗಳ ಭೇದ-ಭಾವ ಇಲ್ಲದೆ, ದೇಶದ ಎಲ್ಲರಿಗೂ ಒಂದೇ ಕಾನೂನು ಇರಬೇಕು ಎಂಬುದೇ ಏಕರೂಪ ನಾಗರಿಕ ಸಂಹಿತೆಯಾಗಿದೆ. ಸಂವಿಧಾನದ 44ನೇ ವಿಧಿಯು ಕೂಡ ಏಕರೂಪ ನಾಗರಿಕ ಸಂಹಿತೆ ಇರಬೇಕು ಎಂದು ಹೇಳುತ್ತದೆ. ಹಾಗಾಗಿ, ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬೇಕು ಎಂದು 2019ರಲ್ಲಿಯೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಆದರೆ, ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದರೆ ಮುಸ್ಲಿಮರಲ್ಲಿರುವ ಬಹುಪತ್ನಿತ್ವದಂತಹ ಪದ್ಧತಿಗಳು ಕೊನೆಗೊಳ್ಳುತ್ತವೆ. ಎಲ್ಲರಿಗೂ ಒಂದೇ ಕಾನೂನು ಜಾರಿಗೆ ಬರುತ್ತದೆ. ಇದಕ್ಕಾಗಿ, ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬಾರದು ಎಂದು ಹಲವು ಧಾರ್ಮಿಕ ಸಂಸ್ಥೆಗಳು, ರಾಜಕಾರಣಿಗಳ ಒತ್ತಾಯವಾಗಿದೆ.
ಇದನ್ನೂ ಓದಿ: Uniform Civil Code: ಏಕರೂಪ ನಾಗರಿಕ ಸಂಹಿತೆ ಜಾರಿ ಪರ ಮೋದಿ ಪ್ರತಿಪಾದನೆ
ನೀವೂ ಅಭಿಪ್ರಾಯ ತಿಳಿಸಬಹುದು
ಜನರು ಹಾಗೂ ಧಾರ್ಮಿಕ ಸಂಸ್ಥೆಗಳ ಅಭಿಪ್ರಾಯ ಪಡೆದುಕೊಂಡೇ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ತೀರ್ಮಾನಿಸಿದ ಕಾರಣ ಸಾಮಾನ್ಯ ಜನರು ಕೂಡ ಸಂಹಿತೆ ಜಾರಿ ಕುರಿತಂತೆ ಅಭಿಪ್ರಾಯ ಸಲ್ಲಿಸಬಹುದಾಗಿದೆ. ಭಾರತೀಯ ಕಾನೂನು ಆಯೋಗದ membersecretary-lci@gov.inಗೆ ಇ-ಮೇಲ್ ಮಾಡುವ ಮೂಲಕ ನಿಮ್ಮ ಅಭಿಪ್ರಾಯವನ್ನೂ ದಾಖಲಿಸಬಹುದು. ಅಂದಹಾಗೆ, ನೀವು ಅಭಿಪ್ರಾಯ ಜುಲೈ 14 ಕೊನೆಯ ದಿನವಾಗಿದೆ. ಅಧಿಸೂಚನೆ ಹೊರಡಿಸಲಾದ 30 ದಿನಗಳೊಳಗೆ ಅಭಿಪ್ರಾಯ ಸಲ್ಲಿಸಬಹುದು.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ