ಹೈದರಾಬಾದ್: ಗೋಧ್ರಾ ಹತ್ಯಾಕಾಂಡದ ವೇಳೆ ಬಿಲ್ಕಿಸ್ ಬಾನೊ (Bilkis Bano Case) ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಅಪರಾಧಿಗಳನ್ನು ಬಿಡುಗಡೆ ಮಾಡಿರುವುದರ ಕುರಿತು ಗುಜರಾತ್ ಬಿಜೆಪಿ ಶಾಸಕ ಸಿ.ಕೆ.ರೌಲ್‌ಜಿ (C.K.Raulji) ನೀಡಿದ “ಸಂಸ್ಕಾರ”ದ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ.
“ಅತ್ಯಾಚಾರದ ಅಪರಾಧಿಗಳು ಬ್ರಾಹ್ಮಣರಾಗಿದ್ದು, ಅವರಿಗೆ ಒಳ್ಳೆಯ ಸಂಸ್ಕಾರ ಇದೆ” ಎಂದು ಬಿಜೆಪಿ ಶಾಸಕ ಹೇಳಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಓವೈಸಿ, “ಕೆಲವರು ಜಾತಿಯ ಬಲದಿಂದ ಜೈಲಿನಿಂದ ಹೊರಗೆ ಬರುತ್ತಾರೆ. ಅಪರಾಧದ ತೀವ್ರತೆ ಎಷ್ಟಿದ್ದರೂ ಜಾತಿಯಿಂದಾಗಿ ಬಿಡುಗಡೆಯಾಗುತ್ತಾರೆ. ಇನ್ನೂ ಕೆಲವು ಜಾತಿ ಹಾಗೂ ಧರ್ಮದವರ ವಿರುದ್ಧ ಸಾಕ್ಷ್ಯಾಧಾರ ಇಲ್ಲದಿದ್ದರೂ ಅವರು ಜೈಲುಪಾಲಾಗುತ್ತಾರೆ, ಶಿಕ್ಷೆ ಅನುಭವಿಸುತ್ತಾರೆ. ಅಷ್ಟಕ್ಕೂ, ನಾಥುರಾಮ್ ಗೋಡ್ಸೆ ಗಲ್ಲಿಗೇರಿದ್ದಾನೆ. ಅದಕ್ಕಾಗಿ ನಾವು ದೇವರಿಗೆ ಕೃತಜ್ಞರಾಗಿರಬೇಕು” ಎಂದು ಹೇಳಿದರು.
೨೦೦೨ರಲ್ಲಿ ಬಿಲ್ಕಿಸ್ ಬಾನೊ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಪ್ರಕರಣದ ಕುರಿತು ತನಿಖೆ ನಡೆದು, ೧೧ ಜನರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಆದರೆ, ಗುಜರಾತ್ ಸರಕಾರವು ಸ್ವಾತಂತ್ರ್ಯ ದಿನದಂದು ೧೧ ಅಪರಾಧಿಗಳನ್ನು ಬಿಡುಗಡೆ ಮಾಡಿದೆ. ಇದರ ಕುರಿತು ಪ್ರತಿಕ್ರಿಯಿಸಿದ್ದ ಬಿಜೆಪಿ ಶಾಸಕ, “ಕೆಟ್ಟ ಉದ್ದೇಶದಿಂದ ಅಪರಾಧ ಎಸಗಿದವರಿಗೆ ಶಿಕ್ಷೆ ವಿಧಿಸಬಹುದು. ಆದರೆ, ಬಿಡುಗಡೆಯಾದವರು ಬ್ರಾಹ್ಮಣರು. ಅವರಿಗೆ ಒಳ್ಳೆಯ ಸಂಸ್ಕಾರ ಇರುತ್ತದೆ” ಎಂದಿದ್ದರು.
ಇದನ್ನೂ ಓದಿ | Bilkis Bano Case | ಆರೋಪಿಗಳೆಲ್ಲ ಬ್ರಾಹ್ಮಣರು, ಒಳ್ಳೆಯ ಸಂಸ್ಕಾರವಿದೆ ಎಂದ ಬಿಜೆಪಿ ಶಾಸಕ !