ನವದೆಹಲಿ: ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಪರಸ್ಪರ ಬಣ್ಣ ಹಚ್ಚುವ ಮೂಲಕ ಸೌಹಾರ್ದದ ಸಂದೇಶ ಸಾರಲಾಗುತ್ತದೆ. ಆದರೆ, ದೆಹಲಿಯ ಪಹಾಡಗಂಜ್‌ನಲ್ಲಿ ಹೋಳಿ (Paharganj Holi Case) ಹಬ್ಬದ ದಿನ ಬಣ್ಣ ಹಚ್ಚುವ ನೆಪದಲ್ಲಿ ಯುವಕರು ಜಪಾನ್ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಆಕ್ರೋಶ ವ್ಯಕ್ತವಾಗುತ್ತಲೇ ಒಬ್ಬ ಬಾಲಕ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಪಹಾಡಗಂಜ್‌ನಲ್ಲಿ ಮಾರ್ಚ್ 8ರಂದು ಮಹಿಳೆಯೊಬ್ಬರಿಗೆ ಯುವಕರು ಬಣ್ಣ ಹಚ್ಚಲು ಮುಂದಾಗಿದ್ದಾರೆ. ಇದೇ ವೇಳೆ ಮಹಿಳೆಯ ತಲೆ ಮೇಲೆ ಮೊಟ್ಟೆ ಒಡೆದು, ತಳ್ಳಾಡಿದ್ದಾರೆ. ಮಹಿಳೆಯು ಇದರಿಂದ ಮುಜುಗರಕ್ಕೀಡಾದರೂ ಯುವಕರು ಕುಚೇಷ್ಟೆ ಮಾಡಿದ್ದಾರೆ. ಈ ವಿಡಿಯೊ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.
“ಜಪಾನ್ ಮಹಿಳೆಯನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ. ಆಕೆಯು ದೂರು ನೀಡದಿದ್ದರೂ, ವೈರಲ್ ವಿಡಿಯೊ ಆಧರಿಸಿ ಒಬ್ಬ ಬಾಲಕ ಸೇರಿ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ನಾಲ್ವರೂ ತಪ್ಪೊಪ್ಪಿಕೊಂಡಿದ್ದಾರೆ” ಎಂದು ಸೆಂಟ್ರಲ್ ಡಿಸಿಪಿ ಸಂಜಯ್ ಕುಮಾರ್ ಸೈನ್ ಮಾಹಿತಿ ನೀಡಿದರು. ವಿಡಿಯೊ ವೈರಲ್ ಆಗುತ್ತಲೇ ದೆಹಲಿ ಮಹಿಳಾ ಆಯೋಗವು ಪೊಲೀಸರಿಗೆ ನೋಟಿಸ್ ನೀಡಿತ್ತು.
ಇದನ್ನೂ ಓದಿ: Holi Tragedy: ಹೋಳಿ ಆಡಿದ ಬಳಿಕ ಸ್ನಾನ ಮಾಡಲು ಹೋದ ದಂಪತಿ ಸಾವು, ಗೀಸರ್ ಗ್ಯಾಸ್ ಲೀಕ್ ಶಂಕೆ