ನವ ದೆಹಲಿ: ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಸುಮಾರು 300 ಕೋಟಿ ರೂಪಾಯಿ ಮೌಲ್ಯದ 40 ಕೆಜಿಗಳಷ್ಟು ಮಾದಕದ್ರವ್ಯಗಳನ್ನು ಹೊತ್ತು ಪಾಕಿಸ್ತಾನದ ಕರಾಚಿಯಿಂದ ಗುಜರಾತ್ ಕರಾವಳಿ ತೀರಕ್ಕೆ ಹೊರಟಿದ್ದ ಬೋಟ್ನ್ನು ಭಾರತೀಯ ಕರಾವಳಿ ಪಡೆ ಸಿಬ್ಬಂದಿ ಅರ್ಧದಲ್ಲೇ ತಡೆದಿದ್ದು, ಅದರಲ್ಲಿದ್ದ 10 ಮಂದಿಯನ್ನು ಸೆರೆ ಹಿಡಿದಿದ್ದಾರೆ. ಸದ್ಯ ಆ ಪಾಕಿಸ್ತಾನಿ ಬೋಟ್ನ್ನು ದ್ವಾರಕಾ ಜಿಲ್ಲೆಯಲ್ಲಿರುವ ಕರಾವಳಿ ತೀರದ ಪಟ್ಟಣ ಓಖಾಕ್ಕೆ ಕೊಂಡೊಯ್ಯಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಕರಾಚಿಯಿಂದ ಮದ್ದುಗುಂಡುಗಳು, ಮಾದಕ ವಸ್ತುಗಳನ್ನು ಹೊತ್ತ ಬೋಟ್ವೊಂದು ಗುಜರಾತ್ ಕರಾವಳಿ ತೀರಕ್ಕೆ ಹೊರಟಿದೆ ಎಂಬ ಖಚಿತ ಮಾಹಿತಿಯನ್ನು ಕರಾವಳಿ ರಕ್ಷಕ ಪಡೆಗೆ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ನೀಡಿತ್ತು. ಕಾರ್ಯಪ್ರವೃತ್ತರಾದ ಕೋಸ್ಟ್ ಗಾರ್ಡ್ ಸಿಬ್ಬಂದಿ, ಡಿ.25ರ ತಡರಾತ್ರಿ ಅಂತಾರಾಷ್ಟ್ರೀಯ ಕಡಲ ಗಡಿ ರೇಖೆ (IMBL)ಬಳಿ ಬಿಗಿ ಭದ್ರತೆ ಕಲ್ಪಿಸಿದ್ದರು. ಗಡಿ ರೇಖೆ ಬಳಿ ಕರಾವಳಿ ರಕ್ಷಕ ಪಡೆಯ ಗಸ್ತು ಬೋಟ್ ಅರಿಂಜಯ್ನ್ನು ನಿಲ್ಲಿಸಲಾಗಿತ್ತು. ಪಾಕಿಸ್ತಾನಿ ಬೋಟ್ ಅಲ್ಲಿಗೆ ಬಂದಾಗ ಭಾರತೀಯ ಭದ್ರತಾ ಪಡೆಗಳು ಎಚ್ಚರಿಸುವ ಸಲುವಾಗಿ ಗುಂಡು ಹಾರಿಸಿದವು. ಆಗ ಪಾಕಿಸ್ತಾನದ ಕಡೆಯವರು ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟರು. ಆದರೆ ಅಷ್ಟರದಲ್ಲಿ ಅರಿಂಜಯ್ ಹಡಗು ಅತ್ಯಂತ ಕೌಶಲದಿಂದ ಚಲಿಸಿ, ಪಾಕಿಸ್ತಾನಿ ಬೋಟ್ನ್ನು ತಡೆಯಿತು. ಕೊನೆಗೂ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಪಾಕಿಸ್ತಾನಿ ಬೋಟ್ವನ್ನು ವಶಕ್ಕೆ ಪಡೆಯಲಾಗಿದೆ. ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಮತ್ತು ಕರಾವಳಿ ರಕ್ಷಕ ಪಡೆಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿವೆ.
ಪಾಕಿಸ್ತಾನದ ಈ ಬೋಟ್ ಹೆಸರು ಅಲ್ ಸೊಹೇಲಿ ಎಂದಾಗಿದೆ. ಅದರಲ್ಲಿದ್ದ 10 ಮಂದಿಯನ್ನೂ ಅರೆಸ್ಟ್ ಮಾಡುವ ಜತೆ ಎಲ್ಲ ಮದ್ದುಗುಂಡುಗಳು, ಶಸ್ತ್ರಾಸ್ತ್ರಗಳು ಮತ್ತು ಡ್ರಗ್ಸ್ನ್ನು ಕರಾವಳಿ ರಕ್ಷಕ ಪಡೆ ವಶಪಡಿಸಿಕೊಂಡಿದೆ. ಪಂಜಾಬ್, ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನದಿಂದ ಬರುವ ಡ್ರೋನ್ಗಳ ಸಂಖ್ಯೆ ಹೆಚ್ಚಾದಂತೆ, ಇಲ್ಲಿ ಗುಜರಾತ್ ಕರಾವಳಿ ತೀರದಲ್ಲಿ ಪಾಕ್ನಿಂದ ಬರುವ ಬೋಟ್ಗಳೂ ಹೆಚ್ಚಾಗಿವೆ. ಕಳೆದ 18ತಿಂಗಳಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬರುತ್ತಿರುವ 7ನೇ ಬೋಟ್ ಇದಾಗಿದೆ. ಇಷ್ಟು ದಿನ ಬರುವ ಬೋಟ್ಗಳಲ್ಲಿ ಒಂದೋ ಮಾದಕ ದ್ರವ್ಯಗಳು ಇರುತ್ತಿದ್ದವು, ಇಲ್ಲವೇ ಶಸ್ತ್ರಾಸ್ತ್ರಗಳು ಇರುತ್ತಿದ್ದವು. ಆದರೆ ಇದೇ ಮೊದಲ ಬಾರಿಗೆ ಎರಡನ್ನೂ ಹೊತ್ತು ಬಂದ ಬೋಟ್ ಇದಾಗಿದೆ ಎಂದು ಭಾರತೀಯ ಕರಾವಳಿ ರಕ್ಷಕ ಪಡೆ ಹೇಳಿದೆ.
26/11ರ ಮುಂಬಯಿ ದಾಳಿ ನೆನಪಿಸುವಂತಿದೆ!
ಹೀಗೆ ಅಪಾರ ಶಸ್ತ್ರಾಸ್ತ್ರಗಳನ್ನು ಹೊತ್ತ ಅಲ್ ಸೊಹೇಲಿ ಹಡಗು ಗುಜರಾತ್ ಕರಾವಳಿ ತೀರಕ್ಕೆ ಬಂದಿದ್ದು, ಮುಂಬಯಿ ಮೇಲಿನ ಉಗ್ರದಾಳಿಯನ್ನು ನೆನಪಿಸುವಂತಿದೆ. 2008ರ ನವೆಂಬರ್ 26ರಂದು ಲಷ್ಕರೆ ತೊಯ್ಬಾ ಸಂಘಟನೆಯ 10 ಮಂದಿ ಉಗ್ರರು ಹೀಗೆ ಸಮುದ್ರ ಮಾರ್ಗ ಮೂಲಕವೇ ಮುಂಬಯಿ ಕರಾವಳಿ ತೀರಕ್ಕೆ ಬಂದು ದಾಳಿ ನಡೆಸಿದ್ದರು. ಆ ದಾಳಿಯಲ್ಲಿ 160 ಮಂದಿ ಮೃತಪಟ್ಟಿದ್ದರು. ಆ ಘಟನೆ ಈಗಲೂ ನಮ್ಮ ದೇಶದ ಇತಿಹಾಸದಲ್ಲಿ ಕರಾಳದಿನ ಎನ್ನಿಸಿಕೊಳ್ಳುತ್ತದೆ.
ಇದನ್ನೂ ಓದಿ: ಗುಜರಾತ್ ಕರಾವಳಿಯಲ್ಲಿ ಡ್ರಗ್ಸ್ ತರುತ್ತಿದ್ದ ಪಾಕ್ ಬೋಟ್ ಜಪ್ತಿ; 200 ಕೋಟಿ ರೂ ಬೆಲೆಯ ಮಾದಕ ವಸ್ತು ವಶ