ನವ ದೆಹಲಿ: ರಕ್ಷಾ ಬಂಧನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi)ಯವರಿಗೆ ಪಾಕಿಸ್ತಾನ ಮೂಲದ ಸೋದರಿಯಿಂದ ರಾಖಿ ಬಂದಿದೆ. ಈ ರಾಖಿ ಕಳಿಸಿದ್ದು ಮತ್ಯಾರೂ, ಅಲ್ಲ ಕಮರ್ ಮೊಹ್ಸಿನ್ ಶೇಖ್. ಈ ಹೆಸರು ಈಗಾಗಲೇ ಚಿರಪರಿಚಿತ. ಶೇಖ್ ಕಳೆದ 25ವರ್ಷಗಳಿಂದಲೂ ತಪ್ಪದೆ ನರೇಂದ್ರ ಮೋದಿಯವರಿಗೆ ರಾಖಿ ಕಳಿಸುತ್ತಲೇ ಇದ್ದಾರೆ. 2019ರಲ್ಲಿ ಅವರು ನರೇಂದ್ರ ಮೋದಿಯವರನ್ನು ಭೇಟಿಯಾಗಿ ರಕ್ಷಾ ಬಂಧನ ಕಟ್ಟಿದ್ದರು. ಹಾಗೇ, ಈ ಬಾರಿ ರಾಖಿ ಕಳಿಸಿದ ಮೊಹ್ಸಿನ್ ಅವರು ಜತೆಗೊಂದು ಪತ್ರವನ್ನೂ ಕಳಿಸಿಕೊಟ್ಟಿದ್ದು, ‘ಮೋದಿಯವರಿಗೆ ಭಗವಂತ ಆರೋಗ್ಯ, ಆಯುಷ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದಿದ್ದಾರೆ. ಹಾಗೇ, 2024ರ ಲೋಕಸಭೆ ಚುನಾವಣೆಯಲ್ಲೂ ನರೇಂದ್ರ ಮೋದಿ ಗೆಲ್ಲಲಿ’ ಎಂದು ಆಶಿಸಿದ್ದಾರೆ. ಅಷ್ಟೇ ಅಲ್ಲ, ಈ ಬಾರಿ ಹೇಗಾದರೂ ಸರಿ ನಿಮ್ಮನ್ನು ಭೇಟಿಯಾಗುತ್ತೇನೆ ಎಂದೂ ಬರೆದಿದ್ದಾರೆ.
ಕಮರ್ ಮೊಹ್ಸಿನ್ ಶೇಖ್ ಮೂಲತಃ ಪಾಕಿಸ್ತಾನದವರಾಗಿದ್ದು, ಮದುವೆಯಾಗಿ ಭಾರತಕ್ಕೆ ಬಂದಿದ್ದಾರೆ. ಇಲ್ಲಿಯೇ ನೆಲೆಸಿರುವ ಅವರು ಪ್ರತಿವರ್ಷವೂ ತಪ್ಪದೆ ನರೇಂದ್ರ ಮೋದಿಗೆ ರಾಖಿ ಕಳಿಸುತ್ತಿದ್ದಾರೆ. ಹಾಗೇ,ಇವರು ಮೊಟ್ಟಮೊದಲು ಮೋದಿಯವರಿಗೆ ರಾಖಿ ಕಟ್ಟಿದಾಗ ಅವರು ಆರ್ಎಸ್ಎಸ್ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರು. ಈಗ ಅವರು ಪ್ರಧಾನಿ ಹುದ್ದೆಗೇರಿದ್ದರೂ ಮೊಹ್ಸಿನ್ ಮಾತ್ರ ಒಂದು ಬಾರಿಯೂ ತಪ್ಪಿಸಿಲ್ಲ.
ಈ ಸಲ ರಕ್ಷಾ ಬಂಧನಕ್ಕೆ ರಾಖಿ ಕಳಿಸಿದ ನಂತರ ಎಎನ್ಐ ಜತೆ ಮಾತನಾಡಿದ ಶೇಖ್, ‘ನರೇಂದ್ರ ಮೋದಿ ಖಂಡಿತವಾಗಿಯೂ ಈ ಸಲ ನನ್ನನ್ನು ದೆಹಲಿಗೆ ಕರೆಯುತ್ತಾರೆ ಎಂಬ ನಂಬಿಕೆ ಇದೆ. ರೇಷ್ಮೆ ರಿಬ್ಬನ್ ಮತ್ತು ಎಂಬ್ರಾಯ್ಡರಿ ವಿನ್ಯಾಸದ ರಾಖಿಯನ್ನು ನಾನೇ ತಯಾರಿಸಿ ಕಳಿಸಿದ್ದೇನೆ. ಮುಂದಿನ ಸಲವೂ ಅವರೇ ಪ್ರಧಾನಮಂತ್ರಿ ಆಗುತ್ತಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ನರೇಂದ್ರ ಮೋದಿಗೆ ಖಂಡಿತವಾಗಿಯೂ ಆ ಸಾಮರ್ಥ್ಯವಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಕ್ಷಾ ಬಂಧನ ವಿಶೇಷ; ಮಹಿಳೆಯರಿಗೆ ಬಂಪರ್ ಉಡುಗೊರೆ ಘೋಷಿಸಿದ ಸಿಎಂ ಯೋಗಿ ಆದಿತ್ಯನಾಥ್