Site icon Vistara News

ಬಿಜೆಪಿಯ ನೂಪುರ್‌ ಶರ್ಮಾ ಶಿರಚ್ಛೇದ ಮಾಡಿದರೆ 50 ಲಕ್ಷ ರೂ. ಕೊಡುವುದಾಗಿ ಪಾಕಿಸ್ತಾನಿಗಳಿಂದ ಘೋಷಣೆ

Nupur Sharma

ನವದೆಹಲಿ: ಜ್ಞಾನವಾಪಿ ಮಸೀದಿ ಕೇಸ್‌ ಬಗ್ಗೆ ಟಿವಿ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್‌ ಶರ್ಮಾ(Nupur Sharma), ಪ್ರವಾದಿ ಮೊಹಮ್ಮದರ ಬಗ್ಗೆ ಮಾತನಾಡಿದ್ದರು. ʼಈಗ ಮಸೀದಿ ಬಳಿ ಶಿವಲಿಂಗ ಸಿಕ್ಕಿದ್ದನ್ನು ಮುಸ್ಲಿಮರು ಅಪಹಾಸ್ಯ ಮಾಡುತ್ತಿದ್ದಾರೆ. ಹಾಗೇ, ಅವರ ಧರ್ಮದಲ್ಲಿ ಉಲ್ಲೇಖವಾಗಿರುವ ಅಂಶಗಳನ್ನು ಹಿಂದುಗಳೂ ಟೀಕಿಸಿಬಹುದುʼ ಎಂದು ಹೇಳಿದ್ದರು. ಈ ಮಾತುಗಳನ್ನಾಡಿದ ನೂಪುರ್‌ ಶರ್ಮಾ ವಿರುದ್ಧ ಮುಸ್ಲಿಂ ಸುನ್ನಿ ಸಮುದಾಯದ ಸಂಘಟನೆಯಾದ ರಾಜಾ ಅಕಾಡೆಮಿ ದೂರು ನೀಡಿತ್ತು. ಬಿಜೆಪಿ ನಾಯಕಿ ಮುಸ್ಲಿಂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ, ಕೋಮು ಶತ್ರುತ್ವ ಸೃಷ್ಟಿಸುತ್ತಿದ್ದಾರೆ ಎಂದು ಹೇಳಿತ್ತು. ರಾಜಾ ಅಕಾಡೆಮಿ ದೂರಿನ ಅನ್ವಯ ಮೇ 30ರಂದು ಮುಂಬೈನ ಪೈದೋನಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಅದರ ಬೆನ್ನಲ್ಲೇ, ನೂಪುರ್‌ ವಿರುದ್ಧ ಥಾಣೆಯ ಮುಂಬ್ರಾ ಪೊಲೀಸ್‌ ಠಾಣೆಯಲ್ಲಿ ಇನ್ನೊಂದು ಪ್ರಕರಣ ದಾಖಲಾಗಿದೆ.

ನೂಪುರ್‌ ಶರ್ಮಾಗೆ ಜೀವ ಬೆದರಿಕೆ
ಟಿವಿ ಡಿಬೆಟ್‌ನಲ್ಲಿ ಪಾಲ್ಗೊಂಡು ಸತ್ಯವನ್ನು ಹೇಳಿದ ದಿನದಿಂದಲೂ ತಮಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಸೋಷಿಯಲ್‌ ಮೀಡಿಯಾಗಳ ಮೂಲಕವೂ ಕೊಲೆ, ಅತ್ಯಾಚಾರ ಮಾಡುವುದಾಗಿ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ನೂಪುರ್‌ ಶರ್ಮಾ ತಿಳಿಸಿದ್ದಾರೆ. ಅದರಲ್ಲೂ ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೈರ್‌ ತಮ್ಮ ವಿರುದ್ಧ ಇಸ್ಲಾಮಿಕ್‌ ಸಂಘಟನೆಗಳನ್ನು ಎತ್ತಿಕಟ್ಟುತ್ತಿದ್ದಾರೆ. ನಾನು ಮಾತನಾಡಿದ ವಿಡಿಯೋವನ್ನು ಮೊಹಮ್ಮದ್‌ ಜುಬೈರ್‌ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿಕೊಂಡು ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಇಸ್ಲಾಂ ಧರ್ಮೀಯರು ನನ್ನ ಮೇಲೆ ದ್ವೇಷ ಕಾರುವಂತೆ ಮಾಡಿದ್ದಾರೆ ಎಂದು ಆಪಾದಿಸಿದ್ದಾರೆ.

ಇಷ್ಟೆಲ್ಲದರ ಮಧ್ಯೆ ಪಾಕಿಸ್ತಾನಿ ಮೂಲದ ತೆಹ್ರೀಕ್‌ ಇ ಲಬ್ಬೈಕ್ ಪಾಕಿಸ್ತಾನ ಎಂಬ ಬಲಪಂಥೀಯ ಉಗ್ರವಾದಿ ರಾಜಕೀಯ ಪಕ್ಷ, ತನ್ನ ಮುಖವಾಣಿಯಾದ ಲಬ್ಬೈಕಿಯನ್ಸ್ ಟಿವಿಯ ಟ್ವಿಟರ್‌ ಖಾತೆ ಮೂಲಕ, ನೂಪುರ್‌ ಶರ್ಮಾರ ಶಿರಚ್ಛೇದಕ್ಕೆ ಕರೆ ಕೊಟ್ಟಿದೆ. ಪ್ರವಾದಿ ಮೊಹಮ್ಮದ್‌ರ ಅವಹೇಳನ ಮಾಡುವ ಮೂಲಕ ನಮ್ಮ ದೇವರನ್ನೇ ನಿಂದನೆ ಮಾಡಿದ ನೂಪುರ್‌ ಶರ್ಮಾರ ತಲೆ ಕಡೆಯುವವರಿಗೆ 50 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿಯೂ ಘೋಷಿಸಿದೆ. ಲಬ್ಬೈಕಿಯನ್ಸ್ ಟಿವಿ ಈ ಟ್ವೀಟ್‌ ಮಾಡುತ್ತಿದ್ದಂತೆ ಪಾಕಿಸ್ತಾನಿ ಜನರು ಈ ಬಗ್ಗೆ ಚರ್ಚೆ ಶುರುವಿಟ್ಟುಕೊಂಡಿದ್ದಾರೆ. ಗಡಿಯಾಚೆಗೆ ಇರುವ ನಾವು ಆಕೆಯನ್ನು ಕೊಲ್ಲಲು ಸಾಧ್ಯವಿಲ್ಲ. ಆದರೆ ನಾನೇನಾದರೂ ಭಾರತದಲ್ಲಿ ಇದ್ದರೆ, ಇಷ್ಟೊತ್ತಿಗೆ ಆಕೆಯ ಕತೆ ಮುಗಿಯುತ್ತಿತ್ತು ಎಂಬಿತ್ಯಾದಿ ಕಮೆಂಟ್‌ಗಳನ್ನು ಬರೆಯುತ್ತಿದ್ದಾರೆ.

1 ಕೋಟಿ ರೂ. ಬಹುಮಾನ ಘೋಷಿಸಿದ ಎಐಎಂಐಎಂ (ಇಂಕ್ವಿಲಾಬ್‌)
ಪಾಕಿಸ್ತಾನದ ಮುಸ್ಲಿಂ ನಾಯಕರಷ್ಟೇ ಅಲ್ಲ, ಭಾರತದಲ್ಲೂ ನೂಪುರ್‌ ಶರ್ಮಾ ತಲೆಗೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಿದವರು ಇದ್ದಾರೆ. ಹೈದರಾಬಾದ್‌ನ ಸ್ಥಳೀಯ ಪಕ್ಷ ಎಐಎಂಐಎಂ (ಇಂಕ್ವಿಲಾಬ್‌) ಅಧ್ಯಕ್ಷ ಅಡ್ವೋಕೇಟ್‌ ಖವಿ ಅಬ್ಬಾಸಿ ವಿಡಿಯೋವೊಂದನ್ನು ಬಿಡುಗಡೆ ಮಾಡಿ, ಪ್ರವಾದಿ ಮೊಹಮ್ಮದರ ಬಗ್ಗೆ ಅವಹೇಳನ ಮಾಡುವ ಯಾವುದೇ ವ್ಯಕ್ತಿಯನ್ನು ಗಲ್ಲಿಗೇರಿಸಲು ಇಸ್ಲಾಂನಲ್ಲಿ ಆದೇಶವಿದೆ. ಇದೀಗ ನೂಪುರ್‌ ಶರ್ಮಾರನ್ನು ಯಾರೇ ಹತ್ಯೆ ಮಾಡಿದರೂ ಅವರಿಗೆ 1 ಕೋಟಿ ರೂ.ಬಹುಮಾನ ನೀಡಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮನೇಲಿ ಅಡುಗೆ ಮಾಡಿಕೊಂಡಿರಿ ಎಂದು ಸುಪ್ರಿಯಾ ಸುಲೆಗೆ ಹೇಳಿ ವಿವಾದ ಸೃಷ್ಟಿಸಿದ ಬಿಜೆಪಿ ನಾಯಕ

Exit mobile version