Site icon Vistara News

ಎಐಎಡಿಎಂಕೆಗೆ ಪಳನಿಸ್ವಾಮಿಯೇ ನಾಯಕ ಎಂದು ತೀರ್ಪುಕೊಟ್ಟ ಸುಪ್ರೀಂಕೋರ್ಟ್​; ಪನ್ನೀರಸೆಲ್ವಂ ಮುಂದಿನ ದಾರಿ ಯಾವುದು?

Palaniswami Remains AIADMK Leader Supreme Court Verdict

#image_title

ತಮಿಳುನಾಡಿನ ಎಐಎಡಿಎಂಕೆ ಪಕ್ಷದ ನಾಯಕತ್ವ ವಿಚಾರದಲ್ಲಿ (AIADMK Power Tussle) ಒ.ಪನ್ನೀರಸೆಲ್ವಂ ಅವರಿಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷದ ಸಾಮಾನ್ಯ ಮಂಡಳಿ ಸಭೆಯಲ್ಲಿ, ಪಕ್ಷದ ಪ್ರಧಾನಕಾರ್ಯದರ್ಶಿಯನ್ನಾಗಿ ಕೆ.ಪಳನಿಸ್ವಾಮಿ ಆಯ್ಕೆ ಮಾಡಿದ್ದು ಮಾನ್ಯವಾಗಿದೆ ಎಂದಿದ್ದ ಮದ್ರಾಸ್​ ಹೈಕೋರ್ಟ್​​ನ ತೀರ್ಪನ್ನು ಸುಪ್ರೀಂಕೋರ್ಟ್​ ಎತ್ತಿ ಹಿಡಿದಿದೆ. ಅಲ್ಲಿಗೆ ಇ.ಪಳನಿಸ್ವಾಮಿ ಅವರೇ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ.

ಎಐಎಡಿಎಂಕೆ ಪಕ್ಷದಲ್ಲಿ ದ್ವಿನಾಯಕತ್ವ ವಿವಾದ ಶುರುವಾಗಿ ವರ್ಷವೇ ಆಗಿದೆ. ಜಯಲಲಿತಾ ಮೃತಪಟ್ಟ ಬಳಿಕ ಪಳನಿಸ್ವಾಮಿ ಮತ್ತು ಪನ್ನೀರಸೆಲ್ವಂ ಒಟ್ಟಾಗಿ, ಪಕ್ಷವನ್ನು ಮುನ್ನಡೆಸಿದ್ದರು. ಆಗಿನಿಂದಲೂ ದ್ವಿನಾಯಕತ್ವ ಇತ್ತು. ಆದರೆ 2021ರ ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಸೋತ ಬಳಿಕ, ಎರಡು ನಾಯಕತ್ವ ಇರುವುದು ಬೇಡ ಎಂಬ ಕೂಗು ಶುರುವಾಗಿತ್ತು. ದ್ವಿನಾಯಕತ್ವ ಇದ್ದರೆ ಪಕ್ಷದಲ್ಲಿ ಗೊಂದಲಗಳು ಹೆಚ್ಚು. ಹಾಗಾಗಿ ಒಬ್ಬರೇ ನಾಯಕ ಬೇಕು ಎಂದು ಬೇಡಿಕೆ ಶುರುವಾಯಿತು. ಅಷ್ಟೇ ಅಲ್ಲ, ಪಳನಿಸ್ವಾಮಿಗೆ ಬೆಂಬಲಿಗರು ಹೆಚ್ಚು ಇದ್ದುದರಿಂದ ಅವರೇ ಪಕ್ಷದ ಕಾರ್ಯದರ್ಶಿಯಾಗಲಿ ಎಂಬ ಬೇಡಿಕೆಯೂ ಎದ್ದಿತು. ಅದನ್ನು ಪನ್ನೀರಸೆಲ್ವಂ ಬೆಂಬಲಿಗರು ವಿರೋಧಿಸಿದರು. ಈ ಎರಡೂ ನಾಯಕರ ಬೆಂಬಲಿಗರ ಹೊಡೆದಾಟ ಹಾದಿ-ಬೀದಿ ರಂಪವಾಗಿ ಬಳಿಕ ಕೋರ್ಟ್​ ಮೆಟ್ಟಿಲೇರಿತ್ತು.

ಇದನ್ನೂ ಓದಿ: ವಿಸ್ತಾರ Explainer: ಎಐಎಡಿಎಂಕೆ ಬಿರುಕು, ಅಣ್ಣಾ ದ್ರಾವಿಡ ಕಳಗಂನಲ್ಲಿ ಅಣ್ಣಂದಿರ ಕಾಳಗವೇಕೆ?

ಪಳನಿಸ್ವಾಮಿ ಮತ್ತು ಪನ್ನೀರಸೆಲ್ವಂ ಇಬ್ಬರಲ್ಲಿ ನಾಯಕತ್ವ ಯಾರಿಗೆ? ಎಂಬುದನ್ನು ಚರ್ಚಿಸಲು 2022ರ ಜುಲೈ 11ಕ್ಕೆ ಎಐಎಡಿಎಂಕೆ ಪಕ್ಷದ ಸಾಮಾನ್ಯ ಮಂಡಳಿ ಸಭೆ ನಡೆಸಿದ್ದರು. ಅದರಲ್ಲಿ ಪಳನಿಸ್ವಾಮಿ ಪಕ್ಷದ ಮಧ್ಯಂತರ ಪ್ರಧಾನಕಾರ್ಯದರ್ಶಿಯಾಗಿ ನೇಮಕಗೊಂಡು, ಪನ್ನೀರಸೆಲ್ವಂರನ್ನು ಉಚ್ಚಾಟನೆ ಮಾಡಲಾಗಿತ್ತು. ಇದರ ವಿರುದ್ಧ ಪನ್ನೀರಸೆಲ್ವಂ ಮದ್ರಾಸ್​ ಹೈಕೋರ್ಟ್​ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ದ್ವಿಸದಸ್ಯ ಪೀಠ, ಪಳನಿಸ್ವಾಮಿ ಆಯ್ಕೆಯನ್ನು ಮಾನ್ಯ ಮಾಡಿತ್ತು. ಮತ್ತೆ ಈ ತೀರ್ಪು ರದ್ದುಗೊಳಿಸುವಂತೆ ಒ.ಪನ್ನೀರಸೆಲ್ವಂ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಈಗ ಅಲ್ಲಿಯೂ ಹಿನ್ನಡೆಯಾಗಿದೆ. ನ್ಯಾಯಮೂರ್ತಿ ದಿನೇಶ್​ ಮಹೇಶ್ವರಿ ನೇತೃತ್ವದ ಪೀಠ ವಿಚಾರಣೆ ನಡೆಸಿ, ಮದ್ರಾಸ್​ ಹೈಕೋರ್ಟ್ ತೀರ್ಪನ್ನೇ ಎತ್ತಿ ಹಿಡಿದಿದೆ. ಒ.ಪನ್ನೀರ ಸೆಲ್ವಂ ಅರ್ಜಿಯನ್ನು ತಿರಸ್ಕರಿಸಿದೆ. ಪನ್ನೀರಸೆಲ್ವಂ ಮುಂದಿನ ನಡೆ ಏನೆಂದು ಇನ್ನೂ ಸ್ಪಷ್ಟವಾಗಿಲ್ಲ.

Exit mobile version