Site icon Vistara News

ಎಐಎಡಿಎಂಕೆ ಪಕ್ಷದ ನಾಯಕತ್ವಕ್ಕಾಗಿ ಹೋರಾಟದಲ್ಲಿ ಪನ್ನೀರಸೆಲ್ವಂಗೆ ಮತ್ತೆ ಹಿನ್ನಡೆ; ಪಳನಿಸ್ವಾಮಿ ಬೆಂಬಲಿಗರಿಗೆ ಭರ್ಜರಿ ಸಂಭ್ರಮ

Palaniswami to remain AIADMK general secretary Madras High Court dismissed plea of Panneerselvam

#image_title

ತಮಿಳುನಾಡಿನಲ್ಲಿ ಎಐಎಡಿಎಂಕೆ (ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ)ಪಕ್ಷದ ನಾಯಕತ್ವಕ್ಕಾಗಿ ಕಾನೂನು ಹೋರಾಟ ನಡೆಸುತ್ತಿರುವ ಒ.ಪನ್ನೀರಸೆಲ್ವಂ ಅವರಿಗೆ ಮತ್ತೊಮ್ಮೆ ತೀವ್ರ ಹಿನ್ನಡೆಯಾಗಿದೆ. 2022ರಲ್ಲಿ ಎಐಎಡಿಎಂಕೆ ಪಕ್ಷದ ಸಾಮಾನ್ಯ ಮಂಡಳಿ ಸಭೆ ನಡೆಸಿ, ಅದರಲ್ಲಿ ಇ.ಪಳನಿಸ್ವಾಮಿ ಅವರನ್ನು ಪಕ್ಷದ ಮಧ್ಯಂತರ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದನ್ನು ಮತ್ತು ತಮ್ಮನ್ನು ಉಚ್ಚಾಟನೆ ಮಾಡಿದ್ದನ್ನು ವಿರೋಧಿಸಿ ಪನ್ನೀರಸೆಲ್ವಂ ಅವರು ಮದ್ರಾಸ್ ಹೈಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಮೂಲಕ ಪಳನಿಸ್ವಾಮಿಯೇ ಎಐಎಡಿಎಂಕೆ ಪಕ್ಷಕ್ಕೆ ಮುಖ್ಯಸ್ಥ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಜಯಲಲಿತಾ ನಿಧನದ ಬಳಿಕ ಎಐಎಡಿಎಂಕೆ ಪಕ್ಷವನ್ನು ಪ್ರಬಲಗೊಳಿಸಲು ಮತ್ತು ಅವರ ಆಪ್ತೆಯಾಗಿದ್ದ ಶಶಿಕಲಾರನ್ನು ದೂರ ಇಡುವುದಕ್ಕೋಸ್ಕರ ಒ.ಪನ್ನೀರಸೆಲ್ವಂ ಮತ್ತು ಇ.ಪಳನಿಸ್ವಾಮಿ ಇಬ್ಬರೂ ಪಕ್ಷದ ನಾಯಕತ್ವ ವಹಿಸಿಕೊಂಡರು. ಆದರೆ ದ್ವಿನಾಯಕತ್ವ ಪಕ್ಷದಲ್ಲಿ ಹಲವು ಅವ್ಯವಸ್ಥೆ ಸೃಷ್ಟಿಸಿತು. ಅದರಲ್ಲೂ 2021ರ ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷ ಸೋತ ನಂತರ ಪಕ್ಷದ ದ್ವಿನಾಯಕತ್ವದ ಬಗ್ಗೆ ಅಸಮಾಧಾನ ಭುಗಿಲೆದ್ದಿತು. ಪಳನಿಸ್ವಾಮಿಗೆ ಬೆಂಬಲಿಗರು ಹೆಚ್ಚಿದ್ದರಿಂದ ಪಕ್ಷದಲ್ಲಿ ಅವರ ಪ್ರಾಬಲ್ಯ ಹೆಚ್ಚಾಯಿತು. ಇತ್ತ ಪನ್ನೀರಸೆಲ್ವಂ ಬೆಂಬಲಿಗರು ಪ್ರತಿಭಟನೆ ಶುರು ಮಾಡಿದರು. ಪಕ್ಷದ ಮುಖ್ಯಸ್ಥಾನಕ್ಕಾಗಿ ಈ ಇಬ್ಬರು ನಾಯಕರ ನಡುವಿನ ಜಟಾಪಟಿ ಹೆಚ್ಚಾಯಿತು. 2022ರ ಜುಲೈನಲ್ಲಿ ನಡೆದ ಸಾಮಾನ್ಯ ಮಂಡಳಿ ಸಭೆಯಲ್ಲಿ, ಪಳನಿಸ್ವಾಮಿಯನ್ನು ಪಕ್ಷದ ಮಧ್ಯಂತರ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಯಿತು. ಪನ್ನೀರಸೆಲ್ವಂ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಅದರ ವಿರುದ್ಧ ಪನ್ನೀರಸೆಲ್ವಂ ಕಾನೂನು ಹೋರಾಟ ಶುರು ಮಾಡಿದ್ದಾರೆ.

ಎಐಎಡಿಎಂಕೆ ಸಾಮಾನ್ಯ ಮಂಡಳಿ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಣಯದ ವಿರುದ್ಧ ಈ ಹಿಂದೆಯೇ ಒಮ್ಮೆ ಪನ್ನೀರಸೆಲ್ವಂ ಮದ್ರಾಸ್​ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆಗ ಅರ್ಜಿ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ ‘ಸಾಮಾನ್ಯ ಮಂಡಳಿ ಸಭೆಯ ನಿರ್ಣಯಗಳು ಮಾನ್ಯವಾಗಿವೆ’ ಎಂದು ತೀರ್ಪು ನೀಡಿತ್ತು. ಅಂದರೆ ಪಳನಿಸ್ವಾಮಿ ಆಯ್ಕೆ ಕ್ರಮವನ್ನು ಎತ್ತಿಹಿಡಿದಿತ್ತು. ಈ ತೀರ್ಪಿನ ವಿರುದ್ಧ ಪನ್ನೀರಸೆಲ್ವಂ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂಕೋರ್ಟ್​ನಲ್ಲೂ ಅವರಿಗೆ ಹಿನ್ನಡೆಯಾಗಿತ್ತು. ಮದ್ರಾಸ್ ಹೈಕೋರ್ಟ್​ನ ತೀರ್ಪನ್ನೇ ಸುಪ್ರೀಂಕೋರ್ಟ್ ಪುನರುಚ್ಚರಿಸಿತ್ತು. ಅದಾದ ಮೇಲೆ ಪನ್ನೀರಸೆಲ್ವಂ ಮತ್ತು ಅವರ ಬೆಂಬಲಿಗರು ಸೇರಿ ಮತ್ತೆ ಮದ್ರಾಸ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಎಐಎಡಿಎಂಕೆಗೆ ಪಳನಿಸ್ವಾಮಿಯೇ ನಾಯಕ ಎಂದು ತೀರ್ಪುಕೊಟ್ಟ ಸುಪ್ರೀಂಕೋರ್ಟ್​; ಪನ್ನೀರಸೆಲ್ವಂ ಮುಂದಿನ ದಾರಿ ಯಾವುದು?

ಪನ್ನೀರಸೆಲ್ವಂ ಮತ್ತು ಅವರ ಬೆಂಬಲಗರಿಂದ ಸಲ್ಲಿಕೆಯಾಗಿದ್ದ ಎಲ್ಲ ಅರ್ಜಿಗಳನ್ನೂ ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ ಎಂದು ಎಐಎಡಿಎಂಕೆ ಪಕ್ಷದ ವಕೀಲ ಐಎಸ್​ ಇಂಬಾದುರೈ ತಿಳಿಸಿದ್ದಾರೆ. ಇನ್ನು ಪನ್ನೀರಸೆಲ್ವಂಗೆ ಹಿನ್ನಡೆಯಾದ ಬೆನ್ನಲ್ಲೇ ಇತ್ತ ಎಐಎಡಿಎಂಕೆ ಪಕ್ಷದ ಕಚೇರಿಯಲ್ಲಿ ಇ.ಪಳನಿಸ್ವಾಮಿ ಬೆಂಬಲಿಗರು ಸಂಭ್ರಮಾಚರಣೆ ಮಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಚುನಾವಣೆ ನಡೆಯಲಿದ್ದು, ಪಳನಿಸ್ವಾಮಿ ಅವಿರೋಧ ಆಯ್ಕೆ ಪಕ್ಕಾ ಆಗಲಿದೆ. ಅಲ್ಲಿಗೆ ಅವರು ಪೂರ್ಣಕಾಲಿಕ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳ್ಳಲಿದ್ದಾರೆ.

Exit mobile version