ಪಶ್ಚಿಮ ಬಂಗಾಳದಲ್ಲಿ ಪಂಚಾಯಿತಿ ಚುನಾವಣೆ ನಡೆಯುತ್ತಿದೆ (Panchayat Polls). ಜತೆಜತೆಗೆ ಎಲ್ಲೆಲ್ಲೂ ಹಿಂಸಾಚಾರದ ಕಿಡಿ ಹೊತ್ತಿ ಉರಿಯುತ್ತಿದೆ. ಇಡೀ ರಾಜ್ಯಾದ್ಯಂತ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಇವತ್ತು ಮುಂಜಾನೆ 7ಗಂಟೆಗೆ ಮತದಾನ ಶುರುವಾಗುತ್ತಿದ್ದಂತೆ (West Bengal Panchayat Polls) ವಿವಿಧ ಕಡೆಗಳಲ್ಲಿ ಹಿಂಸಾಚಾರವೂ ಪ್ರಾರಂಭವಾಗಿದೆ. ಶುಕ್ರವಾರ ಮುಂಜಾನೆಯಿಂದ ತಡರಾತ್ರಿವರೆಗೆ ಒಟ್ಟು ನಾಲ್ವರು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಹತ್ಯೆಯಾಗಿದೆ. ಅಷ್ಟೇ ಅಲ್ಲ, ಕೂಚ್ ಬೆಹಾರ್ನಲ್ಲಿ ಬಿಜೆಪಿ ಮತಗಟ್ಟೆ ಏಜೆಂಟ್ನೊಬ್ಬನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಹಾಗೇ, ಕೋಲ್ಕತ್ತದಲ್ಲಿ ನಡೆದ ಸಂಘರ್ಷದಲ್ಲಿ (West Bengal Violence) ತೀವ್ರ ಗಾಯಗೊಂಡಿದ್ದ ಸಿಪಿಐ (ಎಂ) ಕಾರ್ಯಕರ್ತನೊಬ್ಬ ಇಂದು ಮೃತಪಟ್ಟಿದ್ದಾನೆ. ಇನ್ನೂ ಹಲವರು ಗಾಯಗೊಂಡಿದ್ದಾರೆ.
ಪಶ್ಚಿಮ ಬಂಗಳ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ದಿನವಾದ ಜೂನ್ 15ರಂದು ಹಿಂಸಾಚಾರ ಭುಗಿಲೆದ್ದಿದೆ. ಹಲವು ಕಡೆಗಳಲ್ಲಿ ಪ್ರತಿದಿನ ಒಬ್ಬರಲ್ಲ ಒಬ್ಬರು ಸಾಯುತ್ತಿದ್ದಾರೆ. ಅನೇಕರು ಗಾಯಗೊಳ್ಳುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ರಕ್ಷಣಾ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ. ಈ ಸಲ ಪಂಚಾಯಿತಿ ಚುನಾವಣೆಯಲ್ಲಿ ಟಿಎಂಸಿ, ಇಂಡಿಯನ್ ಸೆಕ್ಯೂಲರ್ ಫ್ರಂಟ್, ಬಿಜೆಪಿ ಮಧ್ಯೆ ಹಣಾಹಣಿಯಿದೆ. ಆದರೆ ರಾಜ್ಯದಲ್ಲಿ ಸದ್ಯ ಕಾಂಗ್ರೆಸ್, ಸಿಪಿಐ(ಎಂ) ಐಎಸ್ಎಫ್, ಬಿಜೆಪಿ, ಟಿಎಂಸಿ ಪಕ್ಷಗಳ ಕಾರ್ಯಕರ್ತರ ಮಧ್ಯೆ ವಿಪರೀತ ಸಂಘರ್ಷವಾಗುತ್ತಿದೆ. ಇಂದು ರಾಜ್ಯ ಪಾಲ ಸಿ.ವಿ.ಆನಂದ್ ಬೋಸೆ ಅವರು 24 ಪರಗಣ ಮತ್ತು ನಾಡಿಯಾಗಳಿಗೆ ಭೇಟಿ ಕೊಡಲಿದ್ದು, ಅಲ್ಲೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಅಲ್ಲಿನ ಪ್ರಾದೇಶಿಕ ಪಕ್ಷ ತೃಣಮೂಲ ಕಾಂಗ್ರೆಸ್ನ ಬಾಹುಳ್ಯವೇ ಇದೆ. ಯಾವುದೇ ಚುನಾವಣೆಯಿದ್ದರೂ ಇದೇ ಪಕ್ಷದ ಪ್ರಾಬಲ್ಯವೇ ಇರುತ್ತದೆ. 2018ರ ಪಂಚಾಯಿತಿ ಚುನಾವಣೆಯಲ್ಲಿ ಇಡೀ ರಾಜ್ಯಾದ್ಯಂ ಶೇ.34 ಸೀಟ್ಗಳನ್ನು ತೃಣಮೂಲ ಕಾಂಗ್ರೆಸ್ ಗೆದ್ದುಕೊಂಡಿತ್ತು. ಆ ವರ್ಷವೂ ಕೂಡ ಎಲ್ಲೆಡೆ ಹಿಂಸಾಚಾರ ಆಗಿತ್ತು.
ಸ್ವತಂತ್ರ ಅಭ್ಯರ್ಥಿಯ ಮಗಳಿಗೆ ಗುಂಡೇಟು
ಒಂದೆಡೆ ಮತದಾನ ನಡೆಯುತ್ತಿದ್ದರೆ, ಮತ್ತೊಂದೆಡೆ ಗುಂಡಿನ ಶಬ್ದ ಕೇಳುತ್ತಿದೆ. ಹೆಣಗಳು ಬೀಳುತ್ತಿವೆ. ಇಲ್ಲಿನ ಹೂಗ್ಲಿಯ ತಾರಕೇಶ್ವರ್ನಲ್ಲಿ ಸ್ವತಂತ್ರ ಅಭ್ಯರ್ಥಿ ಪಿಂಟು ಸಿಂಗ್ ಎಂಬುವರು ಮಗಳು ಚಂದನಾ ಸಿಂಗ್ ಹಣೆಗೆ ತೃಣಮೂಲ ಕಾಂಗ್ರೆಸ್ನ ಗೂಂಡಾಗಳು ಗುಂಡು ಹಾರಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಆಕೆಯನ್ನು ಕೋಲ್ಕತ್ತ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಮತಕೇಂದ್ರದಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾಗಿದೆ. ತಾರಕೇಶ್ವರ್ನ ಮತಗಟ್ಟೆ ಬಳಿ, ಬಾಂಬ್, ಬುಲೆಟ್ಗಳು ಪತ್ತೆಯಾಗಿವೆ. ಪೊಲೀಸರಿಗೆ ಹೇಳಿದರೂ, ಅವರು ಅದನ್ನು ವಶಪಡಿಸಿಕೊಳ್ಳಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಪಿಂಟು ಸಿಂಗ್ ಅವರು ಟಿಎಂಸಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಸಿಗಲಿಲ್ಲ ಎಂಬ ಕಾರಣಕ್ಕೆ ಸ್ವತಂತ್ರವಾಗಿ ಸ್ಪರ್ಧಿಸಿದ್ದರು.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮತದಾನಕ್ಕೂ ಮುನ್ನ ಹಿಂಸಾಚಾರ; ನಾಲ್ವರು ಟಿಎಂಸಿ ಕಾರ್ಯಕರ್ತರ ಹತ್ಯೆ
ಭಾಂಗೋರ್ ಎಂಬಲ್ಲಿ ಕಚ್ಚಾ ಬಾಂಬ್ ಸ್ಫೋಟವಾಗಿ 4 ವರ್ಷದ ಮತ್ತು 6ವರ್ಷದ ಮಕ್ಕಳಿಬ್ಬರು ಗಾಯಗೊಂಡಿದ್ದಾರೆ. ಮತಗಟ್ಟೆ ಸಮೀಪದ ಮನೆಯ ಬಳಿ ಈ ಕಚ್ಚಾ ಬಾಂಬ್ ಇತ್ತು. ಮಕ್ಕಳು ಅದನ್ನು ಬಾಲ್ ಎಂದು ಆಟವಾಡುತ್ತಿದ್ದಾಗ ಸ್ಫೋಟವಾಗಿದೆ. ಹಾಗೇ, ಮಾಲ್ಡಾದ ರಟುನಾ ಚಾಂದ್ಮೋನಿ ಎಂಬಲ್ಲಿ ಕೂಡ ಕಚ್ಚಾ ಬಾಂಬ್ ಸ್ಫೋಟಗೊಂಡಿದೆ. ಕಾಂಗ್ರೆಸ್ ನಾಯಕ ನಾಝಿರ್ ಅಲಿ ಬೆಂಬಲಿಗರು ಮತದಾರರ ಮೇಲೆ ದಾಳಿ ನಡೆಸುತ್ತಿದ್ದಾರೆ. ಮೆಜರ್ಉಲ್ ಹಕ್ ಎಂಬ ಯುವಕ ಗಾಯಗೊಂಡಿದ್ದಾನೆ.
ಡೊಮ್ಕಾಲ್ನ ಕೊಲಾಬೇಡಿಯಾ ಎಂಬಲ್ಲಿ ಟಿಎಂಸಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸಂಘರ್ಷ ಏರ್ಪಡುತ್ತಿದೆ. ಹಾಗೇ, ಬರ್ಸಾತ್ನ ಝಿಕ್ರಾದಲ್ಲಿರುವ ಮತಗಟ್ಟೆಯಲ್ಲಿ ತೃಣಮೂಲ ಕಾಂಗ್ರೆಸ್ನ ಕಾರ್ಯಕರ್ತರು ಆವಾಂತರ ಸೃಷ್ಟಿಸಿದ್ದಾರೆ. ಮತಗಟ್ಟೆಯನ್ನು ಧ್ವಂಸ ಮಾಡಿದ್ದಾರೆ. ಮತಪೆಟ್ಟಿಗೆಯನ್ನೇ ಕದ್ದು ಓಡಿದ್ದಾರೆ. ದಿನ್ಹತಾ ನ ಬರಾಚಿ ಎಂಬಲ್ಲಿ ಟಿಎಂಸಿ ಕಾರ್ಯಕರ್ತರು ಮತಪೆಟ್ಟಿಗೆಗಳನ್ನು ಎತ್ತಿದ್ದಾರೆ. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಕಾರ್ಯಕರ್ತರು ಮತಪತ್ರಗಳಿಗೆ ಬೆಂಕಿ ಹಚ್ಚಿದ್ದಾರೆ.