Site icon Vistara News

Pariksha pe charcha 2023: ಹಾರ್ಡ್​ ವರ್ಕ್​​ ಮುಖ್ಯವೋ? ಸ್ಮಾರ್ಟ್​ ವರ್ಕ್​ ಮುಖ್ಯವೋ?; ಪ್ರಧಾನಿ ಮೋದಿ ಕೊಟ್ಟ ಉತ್ತರ ಹೀಗಿದೆ

Pariksha pe charcha 2023 PM Modi reply to question Over hard word and Smartk work

ಮಕ್ಕಳ ಮೇಲೆ ಯಾವುದೇ ಕಾರಣಕ್ಕೂ ಒತ್ತಡ ಹೇರಬೇಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಾಲಕರಿಗೆ ಹೇಳಿದರು. ಅವರು ಇಂದು ನವದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ಆಯೋಜಿಸಲಾಗಿರುವ ‘ಪರೀಕ್ಷಾ ಪೆ ಚರ್ಚಾ’ (Pariksha pe charcha 2023) ಸಂವಾದದಲ್ಲಿ ಮಾತನಾಡಿದರು. ಬೋರ್ಡ್​ ಪರೀಕ್ಷೆ ಎದುರಿಸಲಿರುವ, ಆಯ್ದ ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರೊಂದಿಗೆ ಚರ್ಚೆ ನಡೆಸಿದ ಅವರು, ಮುಂಬರುವ ಪರೀಕ್ಷೆ ದೃಷ್ಟಿಯಿಂದ ಮಕ್ಕಳು, ಪಾಲಕರು, ಶಿಕ್ಷಕರಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

‘ಪಾಲಕರು ತಮ್ಮ ಮಕ್ಕಳ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಚೆನ್ನಾಗಿ ಓದಲಿ, ಒಳ್ಳೆ ಅಂಕ ತೆಗೆದುಕೊಳ್ಳಲಿ ಎಂದು ಅವರು ನಿರೀಕ್ಷಿಸುವುದು ತಪ್ಪಲ್ಲ. ಆದರೆ ಪಾಲಕರು ಸಮಾಜದಲ್ಲಿ ತಮ್ಮ ಘನತೆ ಕಡಿಮೆಯಾಗಬಾರದು ಎಂಬ ಕಾರಣಕ್ಕಷ್ಟೇ ಮಕ್ಕಳ ಓದಿನ ವಿಚಾರದಲ್ಲಿ ಒತ್ತಡ ಹೇರುವುದು, ಅವರಿಂದ ಹೆಚ್ಚೆಚ್ಚು ಅಂಕ ನಿರೀಕ್ಷೆ ಮಾಡುವುದು ಕಳವಳಕಾರಿ’ ಎಂದು ಹೇಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ ‘ಮಕ್ಕಳೂ ಕೂಡ ತಮ್ಮ ಸಾಮರ್ಥ್ಯದ ಬಗ್ಗೆ ಅಪನಂಬಿಕೆ ಇಟ್ಟುಕೊಳ್ಳಬಾರದು. ಹೆಚ್ಚಿನ ಅಂಕ ಗಳಿಕೆ ನನ್ನಿಂದ ಸಾಧ್ಯವಿಲ್ಲ ಎಂದು ಭಾವಿಸಬಾರದು ಎಂದೂ ಹೇಳಿದರು.

ಮಕ್ಕಳಿಗೆ ಓದಿನಲ್ಲಿ ಏಕಾಗ್ರತೆ-ಗಮನ ಹೇಗಿರಬೇಕು ಎಂಬುದಕ್ಕೆ ಕ್ರಿಕೆಟ್​ ಆಟದ ಸಾದೃಶ್ಯ ಕೊಟ್ಟ ಪ್ರಧಾನಿ ಮೋದಿ ‘ಕ್ರಿಕೆಟ್​ ಪಂದ್ಯಾವಳಿ ನಡೆಯುತ್ತಿದ್ದಾಗ, ನೆರೆದಿದ್ದ ಜನರೆಲ್ಲ ದೊಡ್ಡದಾಗಿ ಕೂಗುತ್ತಿರುತ್ತಾರೆ. ತಮ್ಮ ನೆಚ್ಚಿನ ಆಟಗಾರನ ಹೆಸರನ್ನು ಒಂದೇ ಸಮ ಕೂಗುತ್ತಾರೆ. ಆದರೆ ಬ್ಯಾಟ್ಸ್​ಮೆನ್​ ತನ್ನ ಗಮನವನ್ನು ಆ ಕೂಗು, ಗಲಾಟೆಯ ಮೇಲೆ ಕೇಂದ್ರೀಕರಿಸುವುದಿಲ್ಲ. ತನ್ನೆಡೆಗೆ ಬರುತ್ತಿರುವ ಬಾಲ್​ ಮೇಲೆ ಗಮನ ಹರಿಸಿ, ಏಕಾಗ್ರತೆಯಿಂದ ಆಟವಾಡುತ್ತಾನೆ. ಹಾಗೇ ಮಾಡದೆ ಇದ್ದರೆ, ಆತ ಔಟ್​ ಆಗಬಹುದು. ಅದರಂತೆ ವಿದ್ಯಾರ್ಥಿಗಳೂ ಕೂಡ ನಿಮ್ಮ ಓದು-ಬರಹದ ಕಡೆಗೆ ಸಂಪೂರ್ಣ ಗಮನವಹಿಸಬೇಕು. ಪಾಲಕರು ನಿರಂತರವಾಗಿ ಒತ್ತಡ ಹೇರುತ್ತಿದ್ದರೆ, ಅದು ಮಾಡು-ಇದು ಮಾಡು ಎಂದು ನಿರೀಕ್ಷೆಗಳನ್ನೆಲ್ಲ ನಿಮ್ಮ ಮೇಲೆ ಹೇರುತ್ತಿದ್ದರೆ, ಅದರ ಬಗ್ಗೆ ತುಂಬ ತಲೆಕೆಡಿಸಿಕೊಳ್ಳಬೇಡಿ. ಒತ್ತಡಕ್ಕೆ ಒಳಗಾಗಿ ಮನಸು ಹಾಳುಮಾಡಿಕೊಳ್ಳಬೇಡಿ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಓದಿ-ಪರೀಕ್ಷೆ ಬರೆಯಿರಿ’ ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ: Viral Video: ಪ್ರಧಾನಿ ಮೋದಿಯವರ ಚಿನ್ನದ ಪ್ರತಿಮೆ ನಿರ್ಮಿಸಿದ ಸೂರತ್ ​​​ಆಭರಣ ವ್ಯಾಪಾರಿ; 156 ಗ್ರಾಂ ಬಂಗಾರವನ್ನೇ ಬಳಸಿದ್ದೇಕೆ?

ಪರೀಕ್ಷಾ ಪೆ ಚರ್ಚೆ ವೇಳೆ ವಿದ್ಯಾರ್ಥಿಯೊಬ್ಬ ಪ್ರಧಾನಿ ಮೋದಿ ಬಳಿ ‘ಕಠಿಣ ಶ್ರಮ ವಹಿಸಿ ಕೆಲಸ (Hard Work) ಮಾಡುವುದು ಮುಖ್ಯವೋ? ಕೆಲಸವನ್ನು ಬುದ್ಧವಂತಿಕೆಯಿಂದ (Smart Work) ಮಾಡುವುದು ಮುಖ್ಯವೋ? ಎಂದು ಪ್ರಶ್ನಿಸಿದ. ಅದಕ್ಕೆ ತಮಾಷೆಯಾಗಿಯೇ, ನಗುತ್ತ ಉತ್ತರಿಸಿದ ಪ್ರಧಾನಿ ಮೋದಿ ‘ಕೆಲವು ಜನರು ತುಂಬ ಕಷ್ಟಪಟ್ಟು, ಬುದ್ಧಿವಂತಿಕೆಯಿಂದ ಕೆಲಸ ಮಾಡುತ್ತಾರೆ. ಹಾಗೇ, ಇನ್ನೂ ಕೆಲವರು ಅತ್ಯಂತ ಸ್ಮಾರ್ಟ್​ ಆಗಿ, ಕಷ್ಟಪಟ್ಟುಕೊಂಡು ಕೆಲಸ ಮಾಡುತ್ತಾರೆ’ ಎಂದು ಹೇಳಿದರು. ಆದರೆ ಬಳಿಕ ಅದಕ್ಕೊಂದು ಸ್ಪಷ್ಟ ಉತ್ತರ ನೀಡಿದ ಮೋದಿ ‘ಯಾವಾಗಲೂ ನಾವು ಪರಿಶ್ರಮ ವಹಿಸಿ ಕೆಲಸ ಮಾಡಬೇಕು ಮತ್ತು ಆ ಕೆಲಸವನ್ನು ಬುದ್ಧಿವಂತಿಕೆಯಿಂದಲೇ ಮಾಡಬೇಕು. ಬುದ್ಧಿವಂತಿಕೆ ಉಪಯೋಗಿಸದೆ ಎಷ್ಟೇ ಕಷ್ಟಪಟ್ಟು, ಇಡೀ ದಿನ ಕೆಲಸ ಮಾಡಿದರೂ, ಅದು ಪ್ರಯೋಜನಕ್ಕೆ ಬರುವುದಿಲ್ಲ’ ಎಂದು ಹೇಳಿದರು.

Exit mobile version