ಬಾಲಿವುಡ್ ನಟಿ ಪರಿಣಿತಿ ಚೋಪ್ರಾ (Parineeti Chopra) ಮತ್ತು ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ (Raghav Chadha) ಕೊನೆಗೂ ತಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ. ಹಲವು ದಿನಗಳಿಂದಲೂ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಶೀಘ್ರವೇ ಮದುವೆಯಾಗಲಿದ್ದಾರೆ ಎಂಬ ಮಾತು ಕೇಳಿಬಂದಿದ್ದರೂ, ಇವರಿಬ್ಬರೂ ಬಾಯ್ಬಿಟ್ಟಿರಲಿಲ್ಲ. ಆದರೆ ಮೇ 13ರಂದು ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ‘ಹೌದು ತಾವು ಇನ್ನು ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದೇವೆ’ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ನಿಶ್ಚಿತಾರ್ಥದ ಕ್ಯೂಟ್ ಫೋಟೋಗಳನ್ನು ಆಪ್ ನಾಯಕ ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೇ, ಇವರಿಬ್ಬರ ನಿಶ್ಚಿತಾರ್ಥ ದೆಹಲಿಯ ಕಪುರ್ತಲಾದಲ್ಲಿರುವ ಮನೆಯಲ್ಲಿ ಅದ್ದೂರಿಯಾಗಿ, ಎರಡೂ ಕುಟುಂಬಗಳ ಸದಸ್ಯರು, ಆಪ್ತರು, ಸ್ನೇಹಿತರ ಸಮ್ಮುಖದಲ್ಲಿ ಸಂಭ್ರಮದಲ್ಲಿ ನಡೆದಿದೆ.
ಶನಿವಾರ ಸಂಜೆ 5ಗಂಟೆಯಿಂದ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ನಿಶ್ಚಿತಾರ್ಥ ಕಾರ್ಯಕ್ರಮಗಳು ಶುರುವಾದವು. ಮೊದಲು ಪ್ರಾರ್ಥನೆ ನಡೆಯಿತು. ಬಳಿಕ ಇವರಿಬ್ಬರೂ ಉಂಗುರ ಬದಲಿಸಿಕೊಂಡಿದ್ದಾರೆ. ಉಳಿದಂತೆ ಎಲ್ಲ ಆಚರಣೆಗೂ ಸಿಖ್ ಸಂಪ್ರದಾಯದಂತೆ ನಡೆದಿವೆ ಎಂದು ವರದಿಯಾಗಿದೆ. ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಬಹುಕಾಲದಿಂದಲೂ ಸ್ನೇಹಿತರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಒಟ್ಟಿಗೇ ಓದಿದವರು. ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಇವರಿಬ್ಬರೂ ಒಟ್ಟಾಗಿ ಮುಂಬಯಿಯಲ್ಲಿ ಕಾಣಿಸಿಕೊಂಡಿದ್ದರು. ಅದಾದ ಮೇಲೆ ಪದೇಪದೆ ಕಾಣಿಸಿಕೊಂಡು, ಗುಮಾನಿ ಹುಟ್ಟಿಸಿದ್ದರು.
ಗಣ್ಯರಿಂದ ಶುಭ ಹಾರೈಕೆ
ರಾಘವ್ ಚಡ್ಡಾ-ಪರಿಣಿತಿ ಚೋಪ್ರಾ ನಿಶ್ಚಿತಾರ್ಥದಲ್ಲಿ ಪ್ರಿಯಾಂಕಾ ಚೋಪ್ರಾ ಪಾಲ್ಗೊಂಡಿದ್ದರು. ಅದರ ಹೊರತಾಗಿ ರಾಜಕೀಯ ಗಣ್ಯರು ಭಾಗವಹಿಸಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಕಾಂಗ್ರೆಸ್ ನಾಯಕ ಪಿ.ಚಿದಂಬರಂ, ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಪಾಲ್ಗೊಂಡು, ಹೊಸ ಜೋಡಿಗೆ ಶುಭ ಹಾರೈಸಿದರು. ಅರವಿಂದ್ ಕೇಜ್ರಿವಾಲ್ ಅವರು ಟ್ವೀಟ್ ಮಾಡಿ ‘ಈ ಸುಂದರ ಜೋಡಿಗೆ ಯಾವಾಗಲೂ ಒಳಿತಾಗಲಿ. ಹೊಸ ಜೀವನದ ಪ್ರಾರಂಭದಲ್ಲಿ ನಿಮ್ಮಿಬ್ಬರಿಗೂ ಅಭಿನಂದನೆಗಳು. ದೇವರು ನಿಮ್ಮನ್ನು ಸದಾ ಆಶೀರ್ವದಿಸಲಿ’ ಎಂದಿದ್ದಾರೆ.