ನವ ದೆಹಲಿ: ಸಂಸತ್ ಭವನದ ಆವರಣದಲ್ಲಿ ಪ್ರತಿಭಟನೆ, ಧರಣಿ, ಉಪವಾಸ ಸತ್ಯಾಗ್ರಹಗಳನ್ನು ನಡೆಸಬಾರದು ಎಂದು ರಾಜ್ಯಸಭೆ ಕಾರ್ಯಾಲಯ ಸೂಚನೆ ಹೊರಡಿಸಿದ ಬೆನ್ನಲ್ಲೇ, ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಸಂಸತ್ತಿನ ಸಂಕೀರ್ಣದಲ್ಲಿ ಗದ್ದಲ, ಗಲಾಟೆ ಸೃಷ್ಟಿ ಮಾಡಿದ್ದವು. ಅದರ ಬೆನ್ನಲ್ಲೇ ಈಗ ಇನ್ನೊಂದು ಸಲಹೆಯನ್ನು ಲೋಕಸಭೆ ಕಾರ್ಯಾಲಯ ಹೊರಡಿಸಿದೆ. ಮುಂಗಾರು ಅಧಿವೇಶನ ನಡೆಯುತ್ತಿದ್ದಾಗ ಸಂಸತ್ ಭವನದ ಸಂಕೀರ್ಣದಲ್ಲಿ ಯಾವುದೇ ಕರಪತ್ರ, ಹಸ್ತಪತ್ರಿಕೆಗಳನ್ನು ಹಂಚುವ ಹಾಗಿಲ್ಲ. ಫಲಕಗಳನ್ನು ಹಾಕುವಂತಿಲ್ಲ (Parliament Bans Pamphlets) ಎಂದು ಹೇಳಿದೆ.
ಮುಂಗಾರು ಅಧಿವೇಶನ ನಡೆಯುವ ಸಮಯದಲ್ಲಿ, ಸ್ಪೀಕರ್ ಪೂರ್ವಾನುಮತಿ ಇಲ್ಲದೆ ಯಾವುದೇ ಪ್ರಶ್ನಾವಳಿ, ಕರಪತ್ರಗಳು, ಪತ್ರಿಕಾ ಟಿಪ್ಪಣಿಗಳು, ಸಾಹಿತ್ಯಗಳು ಸೇರಿ ಯಾವುದೇ ರೀತಿಯ ಮುದ್ರಿತ ಪತ್ರಗಳನ್ನು ಹಂಚುವಂತಿಲ್ಲ. ಫಲಕಗಳು (Placards) ಕೂಡ ಕಟ್ಟುನಿಟ್ಟಾಗಿ ನಿಷೇಧಿಸಲ್ಪಟ್ಟಿವೆ ಎಂದು ಲೋಕಸಭೆಯ ಕಾರ್ಯಾಲಯದ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಮುಂಗಾರು ಅಧಿವೇಶನಕ್ಕೂ ಪೂರ್ವ ಲೋಕಸಭಾ ಕಾರ್ಯಾಲಯ ಒಂದೊಂದೇ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಇತ್ತೀಚೆಗೆ ಒಂದಷ್ಟು ಶಬ್ದಗಳ ಪಟ್ಟಿಯನ್ನು ಬಿಡುಗಡೆ ಮಾಡಿ, ಇವೆಲ್ಲ ಅಸಂಸದೀಯ ಶಬ್ದಗಳನ್ನು ಸಂಸತ್ ಕಲಾಪದ ವೇಳೆ ಬಳಸುವಂತಿಲ್ಲ ಎಂದು ಹೇಳಿತ್ತು. ಆದರೆ ಇದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ, ಪ್ರತಿಪಕ್ಷಗಳ ಹಲವು ನಾಯಕರು ವಿರೋಧಿಸಿದ್ದರು.
ಇದನ್ನೂ ಓದಿ: ಸಂಸತ್ ಭವನದ ಎದುರು ಪ್ರತಿಭಟನೆಗಿಲ್ಲ ಅವಕಾಶ; ಮತ್ತೆ ಟೀಕೆಗೆ ಗುರಿಯಾದ ಕೇಂದ್ರ ಸರ್ಕಾರ