ನವ ದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಪ್ರಾರಂಭದ ದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ (Pm Modi)ಯವರು ಇಂದು ರಾಜ್ಯಸಭೆಯಲ್ಲಿ ಉತ್ತರ ನೀಡಲಿದ್ದಾರೆ. ನರೇಂದ್ರ ಮೋದಿಯವರು ಫೆ.8ರಂದು ಲೋಕಸಭೆಯಲ್ಲಿ ಮಾತನಾಡಿದ್ದರು. ಹಲವು ವಿಷಯಗಳನ್ನು ಮಾತನಾಡಿದ್ದ ಪ್ರಧಾನಿ ಮೋದಿ, ತಮ್ಮದೇ ಶೈಲಿಯಲ್ಲಿ ಪ್ರತಿಪಕ್ಷಗಳನ್ನು ಗೇಲಿ ಮಾಡಿದ್ದರು. ಇಂದು ರಾಜ್ಯಸಭೆಯಲ್ಲಿ ಅವರು ಮಾತನಾಡಲಿದ್ದು, ಅದರ ಸಮಗ್ರ ವಿವರ ಇಲ್ಲಿದೆ..
ಓಲೈಕೆಯನ್ನೆಂದೂ ಮಾಡುವುದಿಲ್ಲ
ಈ ಆಜಾದಿ ಕಾ ಅಮೃತ್ ಮಹೋತ್ಸವ ಕಾಲದಲ್ಲಿ ಪ್ರತಿಯೊಬ್ಬರಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸುವುದು ನಮ್ಮ ಉದ್ದೇಶ. ಎಲ್ಲ ತೆರನಾದ ಓಲೈಕೆಯನ್ನು ತೊಡೆದು ಹಾಕಿ, ಪ್ರತಿ ಯೋಜನೆ, ಪ್ರತಿ ಫಲಾನುಭವಿಗಳಿಗೆ ತಲುಪುವಂತೆ ಮಾಡುವುದೇ ನಮ್ಮ ಆದ್ಯತೆ ಎಂದು ಹೇಳಿದ ಪ್ರಧಾನಿ ಮೋದಿ ‘ಈ ದೇಶದ ಜನರು ನಮ್ಮೊಂದಿಗೆ ಇದ್ದಾರೆ. ನಾಗರಿಕರು ಕಾಂಗ್ರೆಸ್ನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಕಾಲಕಾಲಕ್ಕೆ ಸರಿಯಾದ ಶಿಕ್ಷೆ ನೀಡಿದ್ದಾರೆ’ ಎಂದು ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ನಾವು ದೇಶದ ಜನರಿಗಾಗಿ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದೇವೆ. ಈ ರಾಷ್ಟ್ರದ ಜನರ ನಂಬಿಕೆಯನ್ನು ಗಳಿಸಿಕೊಂಡಿದ್ದೇವೆ ಎಂದು ಪ್ರಧಾನಿ ಮೋದಿ ಇಂದು ರಾಜ್ಯಸಭೆಯಲ್ಲಿ ಹೇಳಿದರು.
ಶ್ರೀಸಾಮಾನ್ಯರೇ ನಮ್ಮ ಆದ್ಯತೆ
ನಮ್ಮ ದೇಶದಲ್ಲಿ ಸುಮಾರು 110 ಹಿಂದುಳಿದ ಜಿಲ್ಲೆಗಳನ್ನು ಪಟ್ಟಿಮಾಡಿ, ಅಲ್ಲಿ ಶಿಕ್ಷಣ, ಮೂಲಸೌಕರ್ಯ, ಆರೋಗ್ಯ ವ್ಯವಸ್ಥೆಯಲ್ಲಿ ದೊಡ್ಡಮಟ್ಟದ ಸುಧಾರಣೆ ತರಲಾಗಿದೆ. ಇದರಿಂದಾಗಿ ಸುಮಾರು 3 ಕೋಟಿ ಬುಡಕಟ್ಟು ಜನಾಂಗದ ಜನರಿಗೆ ಅನುಕೂಲವಾಗಿದೆ. ಅದೇ ಕಾಂಗ್ರೆಸ್ ಆಡಳಿತವಿದ್ದಾಗ ಬುಡಕಟ್ಟು ಜನಾಂಗದವರು ಭಯದಲ್ಲಿಯೇ ಬದುಕುತ್ತಿದ್ದರು. ಅವರಿಗೆ ಯಾವ ಸೌಕರ್ಯವನ್ನೂ ಕಾಂಗ್ರೆಸ್ ನೀಡಿರಲಿಲ್ಲ ಎಂದು ಹೇಳಿದ ಪ್ರಧಾನಿ ಮೋದಿ, ‘ಸರ್ಕಾರದ ಎಲ್ಲ ಯೋಜನೆಗಳೂ ಎಲ್ಲ ವರ್ಗದ ಜನರನ್ನೂ ತಲುಪುತ್ತಿವೆ ಎಂದು ಖಚಿತ ಪಡಿಸಿಕೊಳ್ಳುವುದೇ ನಿಜವಾದ ಜಾತ್ಯತೀತತೆ. ಶ್ರೀಸಾಮಾನ್ಯರೇ ನಮ್ಮ ಆದ್ಯತೆ’ ಎಂದು ತಿಳಿಸಿದರು.
ಕಾಂಗ್ರೆಸ್ಸಿಗರು ಏನು ಮಾಡಿದರು?
ಕಾಂಗ್ರೆಸ್ನವರು ಗರೀಬಿ ಹಠಾವೋ (ಬಡತನ ನಿರ್ಮೂಲನೆ ಮಾಡುತ್ತೇವೆ) ಎಂದು ಹೇಳಿದರು. ಆದರೆ 4 ದಶಕಗಳ ಕಾಲ ಏನೂ ಮಾಡಲಿಲ್ಲ. ಆದರೆ ನಾವು ಈ ದೇಶದ ಪ್ರತಿ ವರ್ಷದ ಜನರ ನಿರೀಕ್ಷೆ, ಆಕಾಂಕ್ಷೆಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹಾಗೇ, ಕೆಲಸದ ವಿಧಾನವನ್ನು ನಾವು ತಂತ್ರಜ್ಞಾನದ ಶಕ್ತಿಯೊಂದಿಗೆ ಮಿಳಿತಗೊಳಿಸಿದ್ದೇವೆ. ಎಲ್ಲ ಕ್ಷೇತ್ರದಲ್ಲಿ ಕೆಲಸದ ವೇಗ ಮತ್ತು ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸುವುದು ನಮ್ಮ ಉದ್ದೇಶ ಎಂದು ಅವರು ಹೇಳಿದರು.
ಖರ್ಗೆಯನ್ನೇ ಟಾರ್ಗೆಟ್ ಮಾಡಿದ ಪ್ರಧಾನಿ ಮೋದಿ
ನಾವು 60 ವರ್ಷಗಳಿಂದ ಏನೆಲ್ಲ ಕೆಲಸ ಮಾಡಿದ್ದೇವೆ. ಅದರ ಕ್ರೆಡಿಟ್ನ್ನು ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿದ್ದಾರೆ ಎಂದೂ ಮಲ್ಲಿಕಾರ್ಜುನ್ ಖರ್ಗೆಯವರು ಹೇಳಿದ್ದಾರೆ. ನಾನು 2014 ರಲ್ಲಿ ನಾನು ನೋಡಿದ್ದಾಗ ಎಲ್ಲಾ ಕಡೆ ಗುಂಡಿಗಳೆ ಬಿದ್ದಿದ್ದವು. ಪ್ರಪಂಚದ ಸಣ್ಣ ಸಣ್ಣ ದೇಶಗಳು ಉತ್ತುಂಗಕ್ಕೆ ಏರುತ್ತಿದ್ದರೆ, ಭಾರತ ಇಲ್ಲೇ ಉಳಿದುಕೊಂಡಿತ್ತು. ಪಂಚಾಯತ್ನಿಂದ ಮೇಲಿನವರೆಗೆ ಎಲ್ಲರೂ ಕಾಂಗ್ರೆಸ್ಸಿಗರಿಗೆ ಜೀ ಹುಜೂರ್ ಎನ್ನುತ್ತಿದ್ದರು. ಟೋಕನ್ ತೆಗೆದುಕೊಳ್ಳುವುರು ಕೆಲಸ ಮಾಡುವುದು ಆಗಿತ್ತು. ನಾವು ಒಂದೊಂದೇ ವಿಚಾರವನ್ನು ಇಟ್ಟುಕೊಂಡು ಶಾಶ್ವತ ಪರಿಹಾರ ಹುಡುಕುತ್ತಿದ್ದೇವೆ. ನಾವು ಬಂದಮೇಲೆ ಮೂರು ಕೋಟಿ ಮನೆಗೆ ನಲ್ಲಿ ಮೂಲಕ ನೀರು ನೀಡಿದ್ದೇವೆ ಎಂದು ಮೋದಿ ಹೇಳಿದ್ದಾರೆ.