ನವ ದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಪ್ರಾರಂಭದ ದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ (Pm Modi)ಯವರು ಇಂದು ರಾಜ್ಯಸಭೆಯಲ್ಲಿ ಉತ್ತರ ನೀಡಲಿದ್ದಾರೆ. ನರೇಂದ್ರ ಮೋದಿಯವರು ಫೆ.8ರಂದು ಲೋಕಸಭೆಯಲ್ಲಿ ಮಾತನಾಡಿದ್ದರು. ಹಲವು ವಿಷಯಗಳನ್ನು ಮಾತನಾಡಿದ್ದ ಪ್ರಧಾನಿ ಮೋದಿ, ತಮ್ಮದೇ ಶೈಲಿಯಲ್ಲಿ ಪ್ರತಿಪಕ್ಷಗಳನ್ನು ಗೇಲಿ ಮಾಡಿದ್ದರು. ಇಂದು ರಾಜ್ಯಸಭೆಯಲ್ಲಿ ಅವರು ಮಾತನಾಡಲಿದ್ದು, ಅದರ ಸಮಗ್ರ ವಿವರ ಇಲ್ಲಿದೆ..
ಕರ್ನಾಟಕದಲ್ಲಿ 1.7 ಕೋಟಿ ಜನ್ ಧನ ಖಾತೆ
ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರು ಮೋದಿ ನನ್ನ ಕ್ಷೇತ್ರ (ಕಲಬುರಗಿ)ಕ್ಕೆ ಪದೇಪದೇ ಬರುತ್ತಾರೆ ಎಂದು ಹೇಳುತ್ತಾರೆ. ದಲಿತರನ್ನು ಸೋಲಿಸಿದಿರಿ ಎಂದೂ ಹೇಳುತ್ತಾರೆ. ಆದರೆ ಅವರ ಕ್ಷೇತ್ರದಲ್ಲಿ ಜನರೇ ನಿರ್ಧಾರ ಮಾಡಿ, ಖರ್ಗೆ ಬದಲಿಗೆ ಇನ್ನೊಬ್ಬ ದಲಿತನನ್ನು ಗೆಲ್ಲಿಸಿದ್ದಾರೆ. ಅದರಲ್ಲಿ ತಪ್ಪೇನಿದೆ? ಅದಕ್ಕಾಗಿಯೇ ಖರ್ಗೆಯವರು ಇಲ್ಲಿಗೆ ಬಂದು ಕಣ್ಣೀರು ಹಾಕುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು. ಅಷ್ಟೇ ಅಲ್ಲ, ‘ಕರ್ನಾಟಕದಲ್ಲಿ 1.7 ಕೋಟಿ ಜನ್ ಧನ್ ಖಾತೆಗಳು ತೆರೆಯಲ್ಪಟ್ಟಿವೆ. ಅದರಲ್ಲಿ ಕಲಬುರ್ಗಿಯಲ್ಲಿ 8 ಲಕ್ಷ ಅಕೌಂಟ್ ಓಪನ್ ಆಗಿವೆ. ಆದರೆ ಅಚ್ಚರಿ ಎಂದರೆ ಖರ್ಗೆ ಖಾತೆ ಕ್ಲೋಸ್ ಆಗಿದೆ ಎಂದೂ ವ್ಯಂಗ್ಯವಾಡಿದರು.
ಕಮಲ ಅರಳುತ್ತದೆ ಎಂದ ಪ್ರಧಾನಿ ಮೋದಿ
ಪ್ರತಿಪಕ್ಷಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ ‘ನೀವು ಕೆಸರು ಎರಚಿದಷ್ಟೂ ಇನ್ನಷ್ಟು ಚೆನ್ನಾಗಿ ಕಮಲ ಅರಳುತ್ತದೆ’ ಎಂದು ಹೇಳಿದರು. ಕಳೆದ 3-4ವರ್ಷಗಳಲ್ಲಿ 11 ಕೋಟಿ ಮನೆಗಳಿಗೆ ನಲ್ಲಿ ಸಂಪರ್ಕ ನೀಡಲಾಗಿದೆ. ಜನ ಧನ್ ಅಕೌಂಟ್ ಮೂಲಕ ತಳಮಟ್ಟದ ಜನರನ್ನೂ ಸಬಲರನ್ನಾಗಿಸಿದ್ದೇವೆ. ಕಳೆದ 9 ವರ್ಷಗಳಲ್ಲಿ 48 ಕೋಟಿ ಜನ ಧನ್ ಅಕೌಂಟ್ ತೆರೆಯಲಾಗಿದೆ. ಖರ್ಗೆಯವರ ಕಲ್ಬುರ್ಗಿ ಜಿಲ್ಲೆಯಲ್ಲೇ 8 ಲಕ್ಷ ಖಾತೆ ತೆರೆಯಲಾಗಿದೆ ಎಂದು ರಾಜ್ಯಸಭೆಯಲ್ಲಿ ವಿವರಿಸಿದರು.
I want to tell these MPs (Oppostion MPs)…the more you throw 'keechad', the better the lotus will bloom: PM Modi in Rajya Sabha during Motion of Thanks on President's address pic.twitter.com/YaTgotSDrc
— ANI (@ANI) February 9, 2023
ಪ್ರತಿಪಕ್ಷಗಳಿಗೆ ಮೋದಿ ತಿರುಗೇಟು
ತಮ್ಮ ಭಾಷಣಕ್ಕೆ ಅಡ್ಡಿಪಡಿಸಿದ ವಿಪಕ್ಷಗಳ ನಾಯಕರಿಗೆ ಪ್ರಧಾನಿ ಮೋದಿ ತಿರುಗೇಟು ನೀಡಿದರು. ರಾಜ್ಯಸಭೆ ಒಳ್ಳೆಯ ವಿಚಾರಗಳ ಚರ್ಚೆಗೆ ಹೆಸರುವಾಸಿ. ದೇಶದ ಜನರು ಇದನ್ನು ಗಂಭೀರವಾಗಿ ನೋಡುತ್ತಿದ್ದಾರೆ. ಆದರೆ ಪ್ರತಿಪಕ್ಷಗಳು ರಾಜ್ಯಸಭೆಯ ಘನತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಹೇಳಿದರು.
ಮೋದಿ-ಅದಾನಿ ಭಾಯಿ-ಭಾಯಿ
ಇಂದು ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ಸಭೆಯಲ್ಲಿ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ ಪ್ರತಿಪಕ್ಷಗಳ ಸಂಸದರು ಗದ್ದಲ ಎಬ್ಬಿಸಿದರು. ನರೇಂದ್ರ ಮೋದಿ-ಗೌತಮ್ ಅದಾನಿ ಭಾಯಿ-ಭಾಯಿ ಎಂದು ಕೂಗಲು ಶುರು ಮಾಡಿದರು.
#WATCH | Opposition MPs raise slogans of "Modi-Adani bhai-bhai" in Rajya Sabha as PM Modi replies to Motion of Thanks on President's address pic.twitter.com/Kzuj2LJKPZ
— ANI (@ANI) February 9, 2023
ಕಲಾಪ ಮುಂದೂಡಿಕೆ ಯಾಕೆ?
ರಾಜ್ಯಸಭೆಯಲ್ಲಿ ಇಂದು ಬೆಳಗ್ಗೆ 11ಗಂಟೆಗೆ ಕಲಾಪ ಶುರುವಾಗುತ್ತಿದ್ದಂತೆ ಕಾಂಗ್ರೆಸ್ಸಿಗರು ಗದ್ದಲ ಎಬ್ಬಿಸಿದರು. ಅದಾನಿಯವರ ವಿಷಯದಲ್ಲಿ ತಾವು ಆಡಿರುವ ಹಲವು ಮಾತುಗಳನ್ನು ಕಡತದಿಂದ ಅಳಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಆರೋಪಿಸಿದರು. ಇದೇ ವಿಷಯ ದೊಡ್ಡದಾಗಿ ಗಲಾಟೆ ಶುರುವಾದಾಗ ಅಧ್ಯಕ್ಷ ಜಗದೀಪ್ ಧನಕರ್ ಅವರು ಕಲಾಪವನ್ನು ಮಧ್ಯಾಹ್ನ 2ಕ್ಕೆ ಮುಂದೂಡಿ ಆದೇಶಿಸಿದ್ದರು.