Site icon Vistara News

Budget Session: ರಾಹುಲ್​ ಗಾಂಧಿ ಲಂಡನ್​ ಹೇಳಿಕೆ ಗಲಾಟೆ; ರಾಜ್ಯಸಭೆ, ಲೋಕಸಭೆ ಕಲಾಪ ಮುಂದೂಡಿಕೆ

Parliament Budget session

#image_title

ನವ ದಹಲಿ: ಸಂಸತ್ತಿನ ಬಜೆಟ್​ ಅಧಿವೇಶನದ (Parliament Budget Session) ಎರಡನೇ ಹಂತ ಇಂದು ಪ್ರಾರಂಭವಾಗಿದೆ. ಆದರೆ ಮೊದಲದಿನವೆಲ್ಲ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಬರೀ ಗಲಾಟೆಯೇ ಆಯಿತು. ಬಿಜೆಪಿ ಮತ್ತು ಪ್ರತಿಪಕ್ಷಗಳ ದೊಡ್ಡಮಟ್ಟದ ಗಲಾಟೆ/ಪ್ರತಿಭಟನೆ ಹಿನ್ನೆಲೆಯಲ್ಲಿ ಎರಡೂ ಸದನಗಳ ಕಲಾಪವನ್ನು ನಾಳೆ ಬೆಳಗ್ಗೆ (ಮಾರ್ಚ್​ 14) 11 ಗಂಟೆಗೆ ಮುಂದೂಡಲಾಗಿದೆ.

ಇಂದು ಬೆಳಗ್ಗೆ ಕಲಾಪ ಶುರುವಾಗುತ್ತಿದ್ದಂತೆ ಬಿಜೆಪಿ ಸಂಸದರು/ಕೇಂದ್ರ ಸಚಿವರು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಿರುದ್ಧ ತಿರುಗಿಬಿದ್ದರು. ರಾಹುಲ್ ಗಾಂಧಿ ಲಂಡನ್​ಗೆ ತೆರಳಿ ಅಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ಅವಹೇಳನ ಮಾಡಿದ್ದಾರೆ. ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಆಗ ಕಾಂಗ್ರೆಸ್​ ಸಂಸದರು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು. ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ರಾಜ್ಯಸಭೆ ಮತ್ತು ಲೋಕಸಭೆ ಎರಡೂ ಕಡೆಯಲ್ಲೂ ಹೀಗೆ ಆಗಿದ್ದರಿಂದ, ಎರಡೂ ಸದನಗಳ ಕಲಾಪವನ್ನು ಇಂದು ಮಧ್ಯಾಹ್ನ 2ಗಂಟೆಗೆ ಮುಂದೂಡಲಾಗಿತ್ತು.

ಇದನ್ನೂ ಓದಿ: Parliament budget session: ಲಂಡನ್‌ ಹೇಳಿಕೆಗಾಗಿ ರಾಹುಲ್‌ ಕ್ಷಮೆ ಯಾಚನೆಗೆ ಬಿಜೆಪಿ ಆಗ್ರಹ; ಸಂಸತ್ತಿನಲ್ಲಿ ಕೋಲಾಹಲ

ಆದರೆ 2 ಗಂಟೆಗೆ ಕಲಾಪ ಶುರುವಾಗುತ್ತಿದ್ದಂತೆ, ಗಲಾಟೆಯೇ ಮರುಕಳಿಸಿತು. ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ಪಿಯುಷ್​ ಗೋಯೆಲ್​ ಮೊದಲು ಮಾತು ಪ್ರಾರಂಭಿಸಿ, ‘ಲಂಡನ್​ನಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ಅವಮಾನಿಸಿದ ರಾಹುಲ್ ಗಾಂಧಿ, ಕ್ಷಮೆ ಕೇಳಲೇಬೇಕು’ ಎಂದು ಆಗ್ರಹಿಸಿದರು. ಅದಕ್ಕೆ ಪ್ರತಿಯಾಗಿ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ, ‘ಬಿಜೆಪಿಯವರು ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಪಿಯೂಷ್​ ಗೋಯೆಲ್​ ಮಾತುಗಳನ್ನು ಕಡತದಿಂದ ತೆಗೆದುಹಾಕಬೇಕು’ ಎಂದು ಒತ್ತಾಯಿಸಿದರು. ಇದೇ ದೊಡ್ಡ ಗಲಾಟೆಯಾಗಿ, ರಾಜ್ಯಸಭೆ ಕಲಾಪವನ್ನು ಅಧ್ಯಕ್ಷ ಜಗದೀಪ್​ ಧನ್​ಕರ್​ ಅವರು ಮುಂದೂಡಿದರು. ಲೋಕಸಭೆಯಲ್ಲೂ ಕೂಡ ಇದೇ ಸನ್ನಿವೇಶವೇ ಎದುರಾಯಿತು.

ರಾಹುಲ್ ವಿರುದ್ಧ ದೇಶದ್ರೋಹ ಕಾಯ್ದೆ ಹಾಕಲು ಆಗ್ರಹ
ಭಾರತ್ ಜೋಡೋ ಯಾತ್ರೆ ಮುಗಿಸಿ, ಲಂಡನ್ ಪ್ರವಾಸಕ್ಕೆ ತೆರಳಿದ್ದ ರಾಹುಲ್ ಗಾಂಧಿ ಅಲ್ಲಿ ಭಾರತದ ಪ್ರಜಾಪ್ರಭುತ್ವಕ್ಕೆ ಅವಮಾನಿಸುವ ರೀತಿ ಮಾತನಾಡಿದ್ದು ಬಿಜೆಪಿ ನಾಯಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಹಲವರು ರಾಹುಲ್ ಗಾಂಧಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸುತ್ತಿದ್ದಾರೆ. ಅದರ ಮಧ್ಯೆ ಕೇಂದ್ರ ಸಚಿವ ಗಿರಿರಾಜ್​ ಸಿಂಗ್ ಮಾತನಾಡಿ, ‘ರಾಹುಲ್ ಗಾಂಧಿ ವಿರುದ್ಧ ದೇಶದ್ರೋಹ’ ಪ್ರಕರಣ ದಾಖಲಿಸಬೇಕು ಎಂದು ಹೇಳಿದ್ದಾರೆ.

Exit mobile version