ನವ ದೆಹಲಿ: ಬಜೆಟ್ ಅಧಿವೇಶನದ (Parliament Budget Session) ನಾಲ್ಕನೇ ದಿನವೂ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದವು. ಬೆಳಗ್ಗೆ 11ಗಂಟೆಗೆ ಎರಡೂ ಸದನಗಳಲ್ಲಿ ಕಲಾಪ ಪ್ರಾರಂಭವಾಗುತ್ತಿದ್ದಂತೆ, ಪ್ರತಿಪಕ್ಷಗಳ ನಾಯಕರು ಒಗ್ಗಟ್ಟಾಗಿ, ಅದಾನಿ ಗ್ರೂಪ್ನಿಂದ ನಡೆದಿರುವ ಆರ್ಥಿಕ ಹಗರಣದ ತನಿಖೆಯನ್ನು ಸಂಸದೀಯ ಸಮಿತಿಗೆ ಒಪ್ಪಿಸಿಬೇಕು ಅಥವಾಗಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಉಸ್ತುವಾರಿಯಲ್ಲಿ ಒಂದು ಸಮಿತಿ ರಚಿಸಬೇಕು ಎಂದು ಆಗ್ರಹಿಸಿದವು. ಫೆಬ್ರವರಿ 1ರಂದು ಮಂಡನೆಯಾದ ಬಜೆಟ್ ಬಗ್ಗೆ ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯ ಎಲ್ಲ ಸದಸ್ಯರನ್ನೂ ಉದ್ದೇಶಿಸಿ ಮಾತನಾಡುವವರು ಇದ್ದರು. ಆದರೆ ಪ್ರತಿಪಕ್ಷಗಳ ನಾಯಕರು ಅದ್ಯಾವುದಕ್ಕೂ ಅವಕಾಶ ಕೊಡಲಿಲ್ಲ. ಅದಾನಿ ಷೇರು ಕುಸಿತ, ಅದರಿಂದ ಆಗುತ್ತಿರುವ ದುಷ್ಪರಿಣಾಮಗಳನ್ನೇ ದೊಡ್ಡದು ಮಾಡಿ ಗಲಾಟೆ ಎಬ್ಬಿಸಿದವು. ಸದ್ಯ ಲೋಕಸಭೆ ಕಲಾಪ ಮಧ್ಯಾಹ್ನ 2ಗಂಟೆಗೆ ಮತ್ತು ರಾಜ್ಯಸಭೆ ಕಲಾಪ ಮಧ್ಯಾಹ್ನ 2.30ರವರೆಗೆ ಮುಂದೂಡಲ್ಪಟ್ಟಿದೆ.
ಮಲ್ಲಿಕಾರ್ಜುನ್ ಖರ್ಗೆ ಸಭೆ
ಇಂದು ಬೆಳಗ್ಗೆ 11ಗಂಟೆಗೆ ಲೋಕಸಭೆ-ರಾಜ್ಯಸಭೆಯಲ್ಲಿ ಅಧಿವೇಶನ ಪ್ರಾರಂಭವಾಗುವುದಕ್ಕೂ ಮೊದಲು ಬೆಳಗ್ಗೆ 10 ಗಂಟೆಗೆ ಎಐಸಿಸಿ ಅಧ್ಯಕ್ಷ, ರಾಜ್ಯ ಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಸಂಸತ್ತಿನಲ್ಲಿರುವ ತಮ್ಮ ಚೇಂಬರ್ನಲ್ಲಿ ಪ್ರತಿಪಕ್ಷಗಳ ಸಭೆ ನಡೆಸಿದರು. ಈ ಸಭೆಯಲ್ಲಿ ಒಟ್ಟು 16 ಪ್ರತಿಪಕ್ಷಗಳ ಸಂಸದರು ಪಾಲ್ಗೊಂಡಿದ್ದರು. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಎತ್ತಬೇಕಾದ ವಿಷಯಗಳನ್ನು ಚರ್ಚಿಸಲು, ಕಾರ್ಯತಂತ್ರ ಹೆಣೆಯುವ ಸಲುವಾಗಿ ಮಲ್ಲಿಕಾರ್ಜುನ್ ಖರ್ಗೆ ಈ ಸಭೆ ಕರೆದಿದ್ದರು.