Site icon Vistara News

ಕಪ್ಪು ಬಟ್ಟೆ ಧರಿಸಿ ಸಂಸತ್ತಿಗೆ ಬಂದು, ಸ್ಪೀಕರ್​ರತ್ತ ಪೇಪರ್​ ಎಸೆದ ಕಾಂಗ್ರೆಸ್​ ಸಂಸದರು; ಬಿಜೆಪಿ ವಿರುದ್ಧ ಪ್ರತಿಭಟನೆಗಾಗಿ ‘ವಿರೋಧಿ’ಗಳ ಒಗ್ಗಟ್ಟು

Parliament

ನವದೆಹಲಿ: ಮಾರ್ಚ್​ 13ರಿಂದ ಶುರುವಾದ 2ನೇ ಹಂತದ ಬಜೆಟ್ ಅಧಿವೇಶನ ಇಲ್ಲಿಯವರೆಗೆ ಬರೀ ಗಲಾಟೆ-ಗದ್ದಲದಲ್ಲೇ ಕಳೆದು ಹೋಗಿದೆ. ಕಾಂಗ್ರೆಸ್​ನವರು ಅದಾನಿ ಷೇರು ಕುಸಿತದ ವಿಷಯವನ್ನೇ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ಬಿಜೆಪಿಯವರು ಲಂಡನ್​​ನಲ್ಲಿ ರಾಹುಲ್ ಗಾಂಧಿ ನೀಡಿದ ಭಾರತ ವಿರೋಧಿ ಹೇಳಿಕೆಗಳನ್ನು ಇಟ್ಟುಕೊಂಡು ವಾಗ್ದಾಳಿ ನಡೆಸುತ್ತಿದ್ದರು. ರಾಹುಲ್ ಗಾಂಧಿ ಕ್ಷಮೆ ಕೇಳುವಂತೆ ಆಗ್ರಹಿಸುತ್ತಿದ್ದರು. ಇಂದು ಕೂಡ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಗದ್ದಲ ಮುಂದುವರಿದು, ರಾಜ್ಯ ಸಭೆ ಕಲಾಪವನ್ನು ಮಧ್ಯಾಹ್ನ 2ಗಂಟೆವರೆಗೆ ಮತ್ತು ಲೋಕಸಭೆ ಕಲಾಪವನ್ನು ಸಂಜೆ 4ಗಂಟೆವರೆಗೆ ಮುಂದೂಡಲಾಗಿದೆ.

ಅದಾನಿ ಷೇರು ಕುಸಿತದ ಬಗ್ಗೆ ಕೇಂದ್ರ ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿ ಮತ್ತು ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿದ್ದನ್ನು ವಿರೋಧಿಸುವ ಸಲುವಾಗಿ ಇಂದು ಕಾಂಗ್ರೆಸ್​ ಸಂಸದರೆಲ್ಲ ಕಪ್ಪುಬಟ್ಟೆ ಧರಿಸಿ ಸಂಸತ್ತಿಗೆ ಆಗಮಿಸಿದ್ದರು. ಸೋನಿಯಾ ಗಾಂಧಿ ಕೂಡ ಬೂದು ಮತ್ತು ಕಪ್ಪು ಬಣ್ಣ ಮಿಶ್ರಣ ಇರುವ ಸೀರೆಯುಟ್ಟು ಬಂದಿದ್ದರು. ಎರಡೂ ಸದನಗಳಲ್ಲಿ ಕಲಾಪ ಶುರುವಾಗುತ್ತಿದ್ದಂತೆ ಕಾಂಗ್ರೆಸ್ ಮತ್ತು ಇನ್ನಿತರ ಪಕ್ಷಗಳ ಸಂಸದರು ಪ್ರತಿಭಟನೆ ಶುರುವಿಟ್ಟುಕೊಂಡರು. ಅದಾನಿ ವಿಷಯಯವನ್ನು ದೊಡ್ಡದು ಮಾಡಿ ಘೋಷಣೆಗಳನ್ನು ಕೂಗಿದರು. ಲೋಕಸಭೆಯಲ್ಲಿ ಸ್ಪೀಕರ್​​ ಅವರತ್ತ ಪ್ಲೇಕಾರ್ಡ್​, ಪೇಪರ್​ಗಳನ್ನೆಲ್ಲ ಎಸೆದರು. ಇದೇ ಕಾರಣಕ್ಕೆ ಕಲಾಪ ಮುಂದೂಡಿಕೆಯಾಗಿದೆ.

ಇದನ್ನೂ ಓದಿ: Rahul Gandhi: ‘ಅನರ್ಹಗೊಂಡ ಸಂಸದ’ ಎಂದು ಟ್ವಿಟರ್ ಸ್ಟೇಟಸ್​ನಲ್ಲಿ ಬರೆದುಕೊಂಡ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ

ಇಂದು ರಾಜ್ಯಸಭೆ ಮತ್ತು ಲೋಕಸಭೆಗಳಲ್ಲಿ ಕಲಾಪ ಬೆಳಗ್ಗೆ 11ಗಂಟೆಗೆ ಪ್ರಾರಂಭವಾಯಿತು. ಅದಕ್ಕೂ ಮೊದಲು ಕಾಂಗ್ರೆಸ್​ ನಾಯಕರು ಸಂಸತ್ತಿನಲ್ಲಿರುವ ಕಾಂಗ್ರೆಸ್ ಸಂಸದೀಯ ಪಕ್ಷದ ಕಚೇರಿಯಲ್ಲಿ ಕುಳಿತು ಸಭೆ ನಡೆಸಿದರು. ಇದರಲ್ಲಿ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಪಾಲ್ಗೊಂಡಿದ್ದರು. ಸಂಸತ್ತಿನಲ್ಲಿ ಪ್ರತಿಭಟನೆಯ ರೂಪುರೇಷೆ ರಚಿಸಲು ಈ ಸಭೆ ನಡೆಸಲಾಗಿತ್ತು. ಅದಾದ ಮೇಲೆ ಸಂಸತ್ತಿನಲ್ಲಿ ಎರಡೂ ಸದನಗಳ ಕಲಾಪ ಮುಂದೂಡುಲ್ಪಡುತ್ತಿದ್ದಂತೆ ಹೊರಗೆ ಬಂದು, ಸಂಸತ್ತಿನ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಶುರು ಮಾಡಿಕೊಂಡಿದ್ದಾರೆ. ಇಲ್ಲಿ ಬರಿ ಕಾಂಗ್ರೆಸ್ ಅಲ್ಲದೆ, ತೃಣಮೂಲ ಕಾಂಗ್ರೆಸ್​​, ಭಾರತ್ ರಾಷ್ಟ್ರ ಸಮಿತಿಯ ಸಂಸದರೂ ಇದ್ದರು.

ಬೆಂಬಲ ವ್ಯಕ್ತಪಡಿಸಿದ ತೃಣಮೂಲ ಕಾಂಗ್ರೆಸ್!
2024ರ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುತ್ತೇವೆ, ಕಾಂಗ್ರೆಸ್​ ಮತ್ತು ಬಿಜೆಪಿ ಪಕ್ಷಗಳು ಒಂದೇ. ಹೀಗಾಗಿ ನಾವು ಯಾವ ಪಕ್ಷವನ್ನೂ ನಂಬುವುದಿಲ್ಲ ಎಂದು ಹೇಳಿಕೊಂಡಿದ್ದ ತೃಣಮೂಲ ಕಾಂಗ್ರೆಸ್, ಈಗ ರಾಹುಲ್ ಗಾಂಧಿ ಅನರ್ಹಗೊಂಡಿದ್ದನ್ನು ವಿರೋಧಿಸಿದೆ. ಅಷ್ಟೇ ಅಲ್ಲ, ಪ್ರತಿಭಟನೆಗೆ ಸಾಥ್​ ಕೊಡುವುದಾಗಿ ತೃಣಮೂಲ ಕಾಂಗ್ರೆಸ್ ಹೇಳಿದೆ. ಮತ್ತೂ ಒಂದು ಅಚ್ಚರಿಯೆಂದರೆ ತೆಲಂಗಾಣದಲ್ಲಿ ಕಾಂಗ್ರೆಸ್​ನ ವಿರೋಧಿ ಪಕ್ಷ ಭಾರತ್ ರಾಷ್ಟ್ರ ಸಮಿತಿ (ಕೆಸಿಆರ್ ಅವರ ಪಕ್ಷ) ಪಕ್ಷ ಕೂಡ ಈಗ ಕಾಂಗ್ರೆಸ್​​ಗೆ ಬೆಂಬಲ ಸೂಚಿಸಿದೆ. ಒಟ್ಟಿನಲ್ಲಿ ಬಿಜೆಪಿ ಮಣಿಸಲು ವಿರೋಧಿಗಳೆಲ್ಲ ಒಂದಾಗಿದ್ದಾರೆ. ಅಂದರೆ ತಮ್ಮತಮ್ಮಲ್ಲಿರುವ ವಿರೋಧವನ್ನೂ ಮರೆತು ಒಗ್ಗಟ್ಟಾಗಿದ್ದಾರೆ. ಈ ಎಲ್ಲ ವಿಪಕ್ಷಗಳ ಸಂಸದರ ಸಭೆ, ಇಂದು ಸಂಸತ್ತಿನಲ್ಲಿರುವ ಮಲ್ಲಿಕಾರ್ಜುನ್ ಖರ್ಗೆ ಚೇಂಬರ್​ನಲ್ಲಿ ನಡೆದಿದೆ. ಡಿಎಂಕೆ, ಎಸ್​ಪಿ, ಜೆಡಿಯು, ಬಿಆರ್​ಎಸ್​, ಸಿಪಿಐ (ಎಂ), ಆರ್​ಜೆಡಿ, ಎನ್​ಸಿಪಿ, ಸಿಪಿಐ, ಸಿಪಿಐ, ಟಿಎಂಸಿ, ಆರ್​ಎಸ್​ಪಿ, ಆಪ್​, ಶಿವಸೇನಾ ಉದ್ಧವ್ ಠಾಕ್ರೆ ಬಣ ಮತ್ತು ಇತರ ಪಕ್ಷಗಳ ಸಂಸದರು ಇದ್ದರು.

Exit mobile version