Site icon Vistara News

Parliament Session: ರಾಜ್ಯಸಭೆಯಲ್ಲಿ ಅಶಿಸ್ತಿನ ವರ್ತನೆ; ಮತ್ತೆ ಮೂವರು ಸಂಸದರು ಅಮಾನತು

Rajya Sabha MpS

ನವ ದೆಹಲಿ: ಈ ಬಾರಿ ಸಂಸತ್‌ ಮುಂಗಾರು ಅಧಿವೇಶನ (Parliament Session) ಪ್ರಾರಂಭವಾಗಿ ಹತ್ತು ದಿನಗಳು ಕಳೆದಿದ್ದರೂ ರಾಜ್ಯಸಭೆಯಲ್ಲಾಗಲಿ, ಲೋಕಸಭೆಯಲ್ಲಾಗಲಿ ಸುಲಲಿತವಾಗಿ ನಡೆಯುವ ಲಕ್ಷಣಗಳೇ ಕಾಣುತ್ತಿಲ್ಲ. ಎರಡು ದಿನಗಳ ಹಿಂದೆ ರಾಜ್ಯಸಭೆಯಲ್ಲಿ ಅಶಸ್ತಿನ ವರ್ತನೆ ತೋರಿದ್ದ ಪ್ರತಿಪಕ್ಷಗಳ 20 ಸದಸ್ಯರನ್ನು ಅಮಾನತು ಮಾಡಲಾಗಿತ್ತು. ಈ ಅಮಾನತುಗೊಳ್ಳುವವರ ಸಂಖ್ಯೆಯೀಗ ಮುಂದುವರಿದಿದೆ. ಇಂದು ಕೂಡ ರಾಜ್ಯಸಭೆಯಿಂದ ಮೂವರು ಸದಸ್ಯರು ಅಮಾನತುಗೊಂಡಿದ್ದಾರೆ. ಆಮ್‌ ಆದ್ಮಿ ಪಕ್ಷದ ಸುಶೀಲ್‌ ಕುಮಾರ್‌ ಗುಪ್ತಾ, ಸಂದೀಪ್‌ ಕುಮಾರ್‌ ಪಾಠಕ್‌ ಮತ್ತು ಸ್ವತಂತ್ರ ಸಂಸದ ಅಜಿತ್‌ ಕುಮಾರ್‌ ಭುಯಾನ್‌ ಅವರು ಅಮಾನತುಗೊಂಡಿದ್ದು, ಇನ್ನು ಒಂದುವಾರಗಳ ಕಾಲ ಅವರು ಅಧಿವೇಶನಕ್ಕೆ ಹಾಜರಾಗುವಂತಿಲ್ಲ.

ಅಧಿವೇಶನ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ರಾಜ್ಯಸಭೆಯ 23 ಮತ್ತು ಲೋಕಸಭೆಯ ನಾಲ್ವರು ಸೇರಿ ಒಟ್ಟು 27ಸಂಸದರು ಅಮಾನತುಗೊಂಡಿದ್ದಾರೆ. ಬೆಲೆ ಏರಿಕೆ, ಅಗ್ನಿಪಥ್‌ ಯೋಜನೆ ವಿರೋಧಿ ಮತ್ತು ಇತರ ವಿಷಯಗಳನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸುವ ನೆಪದಲ್ಲಿ ಸದನದಲ್ಲಿ ಅಶಸ್ತಿನ ವರ್ತನೆ ತೋರಿಸಿದ, ಘೋಷಣಾ ಫಲಕಗಳನ್ನು ಪ್ರದರ್ಶಿಸಿದ ಕಾರಣಕ್ಕೆ ಇವರನ್ನೆಲ್ಲ ಅಮಾನತುಗೊಳಿಸಲಾಗಿದೆ. ರಾಜ್ಯಸಭೆಯ ೨೩ ಸದಸ್ಯರನ್ನು ಒಂದು ವಾರಗಳ ಮಟ್ಟಿಗೆ ಮಾತ್ರ ಸಸ್ಪೆಂಡ್‌ ಮಾಡಲಾಗಿದ್ದರೆ, ಲೋಕಸಭೆ ನಾಲ್ವರು ಸಂಸದರು ಇಡೀ ಮುಂಗಾರು ಅಧಿವೇಶನ ಮುಗಿಯುವವರೆಗೂ ಸಂಸತ್ತಿಗೆ ಕಾಲಿಡುವಂತಿಲ್ಲ.

ರಾಜ್ಯಸಭೆಯಿಂದ ಅಮಾನತುಗೊಂಡಿರುವ ಸಂಸದರು ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆ ರಾತ್ರಿಯೂ ಅವರು ಅಲ್ಲಿಯೇ ಕಳೆದಿದ್ದಾರೆ. ನಾವು 50ಗಂಟೆಗಳ ರಿಲೇ ಪ್ರತಿಭಟನೆ ನಡೆಸುವುದಾಗಿ ಅವರು ಘೋಷಿಸಿಕೊಂಡಿದ್ದಾರೆ. ಇಂದು ಅಮಾನತುಗೊಂಡ ಮೂವರು ಸದಸ್ಯರೂ ಅವರ ಗುಂಪಿಗೆ ಸೇರುವ ಸಾಧ್ಯತೆ ಇದೆ. ನಿನ್ನೆ ಸಂಸತ್ತಿನ ಆವರಣದಲ್ಲಿ ಮಲಗಿದ್ದ ಅವರಿಗೆ ಮಳೆಯ ಆತಂಕ ಶುರುವಾಗಿತ್ತು. ಹಾಗಿದ್ದಾಗ್ಯೂ ಅಲ್ಲಿಂದ ಕದಲಲಿಲ್ಲ ಎನ್ನಲಾಗಿದೆ. ಅವರು ಶುಕ್ರವಾರ ಸಂಜೆ ೫ಗಂಟೆವರೆಗೆ ಇಲ್ಲಿಯೇ ಧರಣಿ ಕುಳಿತುಕೊಳ್ಳಲಿದ್ದಾರೆ.

ಇದನ್ನೂ ಓದಿ: ರಾಜ್ಯಸಭೆಯ 19 ಸಂಸದರು ಅಮಾನತು; ಮುಂಗಾರು ಅಧಿವೇಶನಕ್ಕೆ ಒಂದು ವಾರ ಕಾಲಿಡುವಂತಿಲ್ಲ

Exit mobile version