ನವ ದೆಹಲಿ: ಅದಾನಿ ಸಮೂಹವು ಷೇರು ವ್ಯವಹಾರದಲ್ಲಿ ಅಕ್ರಮ ಎಸಗಿದೆ ಎಂದು ಅಮೆರಿಕ ಮೂಲದ ಹಿಂಡೆನ್ಬರ್ಗ್ ಸಂಶೋಧನಾ ಸಂಸ್ಥೆ ವರದಿ ಮಾಡಿದ ಬೆನ್ನಲ್ಲೇ, ಆ ಸಮೂಹದ ಷೇರು ದೊಡ್ಡಮಟ್ಟದಲ್ಲಿ ಕುಸಿತವಾಗಿದೆ. ಪ್ರಸಕ್ತ ಸಾಲಿನ ಬಜೆಟ್ ಅಧಿವೇಶನದಲ್ಲಿ (Parliament Session) ಇದೇ ವಿಷಯವೀಗ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಜನವರಿ 31ರಂದು ಬಜೆಟ್ ಅಧಿವೇಶನ ಪ್ರಾರಂಭವಾಗಿ, ಫೆ.1ರಂದು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. ಅದರ ಮರುದಿನದಿಂದಲೂ ಸಂಸತ್ತಿನಲ್ಲಿ ಅದಾನಿ ವಿಷಯವನ್ನೇ ಇಟ್ಟುಕೊಂಡು ಪ್ರತಿಪಕ್ಷಗಳು ಗದ್ದಲ ಎಬ್ಬಿಸುತ್ತಿವೆ. ತತ್ಪರಿಣಾಮ ಲೋಕಸಭೆ ಮತ್ತು ರಾಜ್ಯಸಭೆ ಕಲಾಪವನ್ನು ಫೆ.6ರವರೆಗೆ ಮುಂದೂಡಲಾಗಿದೆ.
ಇಂದು ಬೆಳಗ್ಗೆ ಎರಡೂ ಸದನಗಳಲ್ಲಿ ಬೆಳಗ್ಗೆ 11ಗಂಟೆಗೆ ಕಲಾಪ ಶುರುವಾಗುತ್ತಿದ್ದಂತೆ ಪ್ರತಿಪಕ್ಷಗಳ ನಾಯಕರು ಅದಾನಿ ಷೇರು ಕುಸಿತದ ವಿಷಯವನ್ನೇ ತುರ್ತು ಚರ್ಚೆಗೆ ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿದರು. ಲೋಕಸಭೆಯಲ್ಲಿ ಪ್ರತಿಪಕ್ಷಗಳ ಸಂಸದರೆಲ್ಲ ಸೇರಿ ದೊಡ್ಡದಾಗಿ ಘೋಷಣೆಯನ್ನು ಕೂಗಿದರು. ಅದಾನಿ ಆರ್ಥಿಕ ಹಗರಣವನ್ನು ಸುಪ್ರೀಂಕೋರ್ಟ್ ರಚಿತ ಸಮಿತಿ ಅಥವಾ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಗದ್ದಲ/ಪ್ರತಿಭಟನೆ ಮಿತಿಮೀರಿದ ಬೆನ್ನಲ್ಲೇ ಎರಡೂ ಸದನಗಳ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿತ್ತು. ಆದರೆ ಮಧ್ಯಾಹ್ನ 2ಗಂಟೆಯಿಂದ ಕಲಾಪ ಶುರುವಾದರೂ ವಿಪಕ್ಷಗಳ ಪ್ರತಿಭಟನೆಯೇ ಮೇಲುಗೈ ಸಾಧಿಸಿತು. ಕಲಾಪ ಮುಂದುವರಿಸಲು ಸಾಧ್ಯವಾಗದೆ ಫೆ.6ಕ್ಕೆ ಮುಂದೂಡಲಾಗಿದೆ.
ಫೆಬ್ರವರಿ 1ರಂದು ಮಂಡಿಸಲಾದ ಬಜೆಟ್ ಬಗ್ಗೆ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಿಗೆ ಮಾಹಿತಿ ನೀಡಲು ಇಂದು ಕೇಂದ್ರ ವಿತ್ತೀಯ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಬೆಳಗ್ಗೆಯಿಂದಲೂ ಒಮ್ಮೆಯೂ ಕಲಾಪ ನಡೆಯದೆ ಇದ್ದ ಕಾರಣಕ್ಕೆ ಸಾಧ್ಯವಾಗಲಿಲ್ಲ.
ಇದನ್ನೂ ಓದಿ: Parliament Budget Session: ಸಂಸತ್ತಿನಲ್ಲಿ ಇಂದೂ ‘ಅದಾನಿ’ ಗಲಾಟೆ; ಎರಡೂ ಸದನಗಳ ಕಲಾಪ ಮಧ್ಯಾಹ್ನಕ್ಕೆ ಮುಂದೂಡಿಕೆ
ಇಂದು ಬೆಳಗ್ಗೆ ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಪ್ರಾರಂಭವಾಗುವುದಕ್ಕೂ ಮೊದಲು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಪ್ರತಿಪಕ್ಷಗಳ ಸಭೆ ನಡೆಸಿದ್ದರು. ಈ ಸಭೆಯಲ್ಲಿ 16 ಪ್ರತಿಪಕ್ಷಗಳ ಸಂಸದರು ಪಾಲ್ಗೊಂಡಿದ್ದರು. ಇಂದಿನ ಕಲಾಪದ ವೇಳೆ ಯಾವೆಲ್ಲ ವಿಷಯಗಳನ್ನು ಹೇಗೆ ಚರ್ಚಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರೊಂದಿಗೆ ಕಾಂಗ್ರೆಸ್ ತನ್ನ ಸಂಸದರಿಗೆ ವಿಪ್ ಕೂಡ ಜಾರಿ ಮಾಡಿತ್ತು. ಪ್ರತಿಯೊಬ್ಬರೂ ಕಲಾಪಕ್ಕೆ ಹಾಜರಾಗಬೇಕು ಎಂದು ಕಾಂಗ್ರೆಸ್ ಮುಖ್ಯ ಸಚೇತಕ ಕೋಡಿಕುನ್ನಿಲ್ ಸುರೇಶ್ ವಿಪ್ ಜಾರಿಗೊಳಿಸಿದ್ದರು.