ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ಫಾಲೋ-ಆನ್ ಪಬ್ಲಿಕ್ ಆಫರ್ (follow-on public offer – FPO)ನ್ನು ಅದಾನಿ ಎಂಟರ್ಪ್ರೈಸಸ್ ವಾಪಸ್ ಪಡೆದ ವಿಷಯ ಸೇರಿ ಹಲವು ವಿಚಾರಗಳ ಕುರಿತು ಪ್ರತಿಪಕ್ಷಗಳು ಇಂದು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಗದ್ದಲ ಎಬ್ಬಿಸಿದವು. ವಿರೋಧ ಪಕ್ಷಗಳ ಗಲಾಟೆ ಹೆಚ್ಚಾದ ಹಿನ್ನೆಲೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸದನಗಳ ಕಲಾಪವನ್ನು ಮಧ್ಯಾಹ್ನ 2ಗಂಟೆಗೆ ಮುಂದೂಡಲಾಗಿದೆ.
ಜನವರಿ 31ರಿಂದ ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಶುರುವಾಗಿದ್ದು, ಮೊದಲ ದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಿದ್ದಾರೆ. ಇಂದು ಎರಡೂ ಸದನಗಳಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ನಡೆಯಬೇಕಿತ್ತು. ಆದರೆ ಪ್ರತಿಪಕ್ಷಗಳು ಬೆಳಗಿನ ಅವಧಿಯಲ್ಲಿ ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ.
ಇಂದು ಎರಡೂ ಸದನಗಳ ಕಲಾಪ ಶುರುವಾಗುತ್ತಿದ್ದಂತೆ ಕಾಂಗ್ರೆಸ್, ಆಪ್, ತೃಣಮೂಲ ಕಾಂಗ್ರೆಸ್ ಸೇರಿ ವಿವಿಧ ಪಕ್ಷಗಳ ಸಂಸದರು ಗದ್ದಲ ಶುರು ಮಾಡಿದರು. ಜನವರಿ 31ರಂದು ರಾಷ್ಟ್ರಪತಿಯವರು ಮಾಡಿದ ಭಾಷಣ ಬಜೆಟ್ ಭಾಷಣದಂತೆ ಇರಲಿಲ್ಲ. ಬಿಜೆಪಿಯ ಪರವಾದ ಚುನಾವಣಾ ಭಾಷಣದಂತೆ ಇತ್ತು ಎಂದು ಪ್ರತಿಪಕ್ಷಗಳ ಸಂಸದರು ಆರೋಪಿಸಿದರು. ಕೇಂದ್ರ ಬಜೆಟ್ ಜನಸಾಮಾನ್ಯರಿಗೆ ಏನನ್ನೂ ಕೊಟ್ಟಿಲ್ಲ ಎಂದೂ ಆರೋಪಿಸಿದರು. ಅಷ್ಟೇ ಅಲ್ಲ, ಅದಾನಿ ವಿಚಾರ, ಗಡಿಯಲ್ಲಿ ಚೀನಾದ ಉಪಟಳ, ರಾಜ್ಯಗಳ ಆಡಳಿತದಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡುತ್ತಿರುವ ವಿಷಯ, ನಿರಂತರ ಬೆಲೆ ಏರಿಕೆ, ಆರ್ಥಿಕತೆ ವಿಷಯಗಳನ್ನು ಇಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸಿದರು. ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಲೋಕಸಭೆಯಲ್ಲಂತೂ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಘೋಷಣೆ ಕೂಗುವ ಜತೆ, ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: Adani Group: ಅದಾನಿ ಷೇರು ಪತನದಿಂದ ಎಲ್‌ಐಸಿಗಿಲ್ಲ ಅಪಾಯ, ಹೂಡಿದ್ದು 28,000 ಕೋಟಿ ರೂ, ಗಳಿಸಿದ್ದು 56,000 ಕೋಟಿ ರೂ.
ರಾಜ್ಯಸಭೆಯಲ್ಲೂ ಕೂಡ ಪ್ರತಿಪಕ್ಷಗಳು ಅದಾನಿ ಷೇರು ಕುಸಿತದ ವಿಷಯನ್ನೇ ಮುಖ್ಯವಾಗಿ ಇಟ್ಟುಕೊಂಡು ಚರ್ಚೆಗೆ ಒತ್ತಾಯಿಸಿದವು. ಅದಾನಿ ಷೇರು ಕುಸಿತ, ಅದರಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ತುರ್ತು ಚರ್ಚೆ ಕೈಗೆತ್ತಿಕೊಳ್ಳಬೇಕು ಎಂದು ಕಮ್ಯೂನಿಷ್ಟ್ ಪಾರ್ಟಿ ಸಂಸದ ಬಿನಯ್ ವಿಶ್ವಮ್ ಅವರು ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನಕರ್ ಅವರನ್ನು ಒತ್ತಾಯಿಸಿದರು. ಬಳಿಕ ರಾಜ್ಯಸಭೆಯಲ್ಲೂ ಇದೇ ವಿಷಯ ದೊಡ್ಡದಾಗಿ ಗಲಾಟೆ ಹೆಚ್ಚಾಯಿತು.