Site icon Vistara News

Parliament Winter Session | ಸಂಸತ್ ಚಳಿಗಾಲದ ಅಧಿವೇಶನ ಡಿಸೆಂಬರ್​ 7ರಿಂದ ಪ್ರಾರಂಭ; ಕಲಾಪಕ್ಕೆ 17 ದಿನಗಳು ಲಭ್ಯ

Parliament Winter session ends

ನವ ದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ (Parliament Winter session) ಡಿಸೆಂಬರ್​ 7ರಿಂದ 29ರವರೆಗೆ ನಡೆಯಲಿದೆ. ಒಟ್ಟಾರೆ 23 ದಿನಗಳ ಕಾಲ ಇದ್ದರೂ ಇದರಲ್ಲಿ 17 ದಿನಗಳು ಮಾತ್ರ ಅಧಿವೇಶನಕ್ಕೆ ಲಭ್ಯವಾಗುತ್ತವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಟ್ವೀಟ್​ ಮಾಡಿ ತಿಳಿಸಿದ್ದಾರೆ. ಹಾಗೇ, ಈ ಅಧಿವೇಶನದಲ್ಲಿ ರಚನಾತ್ಮಕ ಮತ್ತು ಫಲಪ್ರದ ಚರ್ಚೆಗೆ ಆದ್ಯತೆ ನೀಡೋಣ ಎಂದೂ ಕರೆಕೊಟ್ಟಿದ್ದಾರೆ. ಅಂದಹಾಗೇ, ಈ ಚಳಿಗಾಲದ ಅಧಿವೇಶನ ರಾಜ್ಯಸಭೆಯಲ್ಲಿ ತುಸು ವಿಶೇಷ ಅನ್ನಿಸಲು ಕಾರಣ, ಇದು ಜಗದೀಪ್​ ಧನಕರ್​ ಅವರಿಗೆ ಮೊದಲ ಅಧಿವೇಶನ. ಉಪರಾಷ್ಟ್ರಪತಿ ಆದವರೇ ರಾಜ್ಯಸಭೆ ಅಧ್ಯಕ್ಷರಾಗಿರುತ್ತಾರೆ. ಅವರ ನೇತೃತ್ವದಲ್ಲೇ ಕಲಾಪಗಳು ನಡೆಯುತ್ತವೆ. ಇದೇ ವರ್ಷದ ಆಗಸ್ಟ್​ನಲ್ಲಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಜಗದೀಪ್​ ಧನಕರ್​ ಅವರಿಗೆ ಇದೇ ಮೊದಲ ಅಧಿವೇಶನ ಆಗಿದೆ.

ಹಿಮಾಚಲ ಪ್ರದೇಶದಲ್ಲಿ ಈಗಾಗಲೇ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದ್ದು, ಗುಜರಾತ್​ನಲ್ಲಿ ಡಿಸೆಂಬರ್​ 1 ಮತ್ತು 5ರಂದು ಚುನಾವಣೆ ನಡೆಯಲಿದೆ. ಈ ಎರಡೂ ರಾಜ್ಯಗಳ ಚುನಾವಣಾ ಮತ ಎಣಿಕೆ ಡಿಸೆಂಬರ್​ 8ರಂದು ನಡೆಯಲಿದೆ. ಅದಕ್ಕೂ ಒಂದು ದಿನ ಮೊದಲು ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದೆ.
ಇನ್ನು ಈ ಸಲದ ಚಳಿಗಾಲದ ಅಧಿವೇಶನದಲ್ಲೂ ಕೇಂದ್ರ ಸರ್ಕಾರ ಕೆಲವು ಮಹತ್ವದ ಮಸೂದೆ ಮಂಡನೆ ಮಾಡುವ ಯೋಜನೆ ರೂಪಿಸಿಕೊಂಡಿದ್ದರೆ, ವಿವಿಧ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಸಿದ್ಧವಾಗಿವೆ.

ಕಳೆದ ಎರಡು ವರ್ಷ ಕೊವಿಡ್​ 19 ಕಾರಣಕ್ಕೆ ಸಂಸತ್ತಿನ ಅಧಿವೇಶನವೂ ಕಟ್ಟುನಿಟ್ಟಾಗಿ ನಡೆದಿತ್ತು. ಕೊವಿಡ್​ 19 ನಿರ್ಬಂಧಿತ ಕಠಿಣ ನಿಯಮಗಳನ್ನು, ಮಾರ್ಗಸೂಚಿಗಳನ್ನು ಸಂಸದರು, ಸಿಬ್ಬಂದಿ ಕಡ್ಡಾಯವಾಗಿ ಪಾಲಿಸಲಾಗಿತ್ತು. ಆದರೆ ಈ ಸಲ ಕೊರೊನಾದಲ್ಲಿ ಗಣನೀಯ ಇಳಿಕೆ ಮತ್ತು ಎಲ್ಲರೂ ಸಂಪೂರ್ಣ ಲಸಿಕೆ ಹಾಕಿಸಿಕೊಂಡಿದ್ದರಿಂದ ಸಂಸತ್​ ಅಧಿವೇಶನದಲ್ಲಿ ಅಷ್ಟೆಲ್ಲ ಕಠಿಣ ನಿಯಮಗಳು ಇರುವುದಿಲ್ಲ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: Coal Production | ವಿದ್ಯುತ್ ಬೇಡಿಕೆ ದ್ವಿಗುಣಗೊಳ್ಳುವ ಸಂದರ್ಭದಲ್ಲಿ ಕಲ್ಲಿದ್ದಲು ಕ್ಷೇತ್ರ ಹೂಡಿಕೆಗೆ ಉತ್ತಮ: ಪ್ರಲ್ಹಾದ್ ಜೋಶಿ

Exit mobile version