ಕೋಲ್ಕತ್ತ: ಪಶ್ಚಿಮ ಬಂಗಾಳ ಶಾಲಾ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಆಪ್ತೆ ಅರ್ಪಿತಾ ಮುಖರ್ಜಿಯವರನ್ನು ಆಗಸ್ಟ್ 18ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ, ಕೋಲ್ಕತ್ತದ ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ಇವರಿಬ್ಬರ ಇಡಿ ಕಸ್ಟಡಿ ಇಂದು ಅಂತ್ಯವಾಗುವ ಹಿನ್ನೆಲೆಯಲ್ಲಿ ಇಬ್ಬರನ್ನೂ ಕೋರ್ಟ್ಗೆ ಹಾಜರುಪಡಿಸಲಾಗಿತ್ತು.
ಇನ್ನು ಅರ್ಪಿತಾ ಮುಖರ್ಜಿ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಇಡಿ ಅಧಿಕಾರಿಗಳು ಕೋರ್ಟ್ಗೆ ಒಂದು ಮಹತ್ವದ ವಿಷಯ ತಿಳಿಸಿದ್ದಾರೆ. ‘ಅರ್ಪಿತಾ ಮುಖರ್ಜಿ ಜೀವಕ್ಕೆ ಗಂಭೀರ ಮಟ್ಟದ ಅಪಾಯ ಇದೆ. ಹೀಗಾಗಿ ಕಾರಾಗೃಹದಲ್ಲಿ ಅವರನ್ನು ನಾಲ್ವರಿಗಿಂತಲೂ ಹೆಚ್ಚು ಕೈದಿಗಳು ಇರುವ ಬ್ಯಾರಕ್ನಲ್ಲಿ ಇಡಬಾರದು’ ಎಂದು ಹೇಳಿದ್ದಾರೆ. ಹಾಗೇ, ಅರ್ಪಿತಾ ಮುಖರ್ಜಿ ಪರ ವಕೀಲರು ಕೂಡ ಇದನ್ನೇ ಹೇಳಿದ್ದಾರೆ. ಅರ್ಪಿತಾರನ್ನು ಒಂದನೇ ದರ್ಜೆಯ ಕೈದಿ ಎಂದು ಪರಿಗಣಿಸಬೇಕು. ಆಕೆಗೆ ಜೈಲಿನಲ್ಲಿ ಆಹಾರ ಮತ್ತು ನೀರನ್ನು ಪರೀಕ್ಷೆ ಮಾಡಿಯೇ ಕೊಡಬೇಕು ಎಂದೂ ಕೇಳಿದ್ದಾರೆ.
ಇನ್ನು ಪಾರ್ಥ ಚಟರ್ಜಿ ಪರ ವಕೀಲರು ಕೋರ್ಟ್ನಲ್ಲಿ ವಾದ ಮಂಡಿಸಿ, ‘ಪಾರ್ಥ ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಇಡಿ ಅಧಿಕಾರಿಗಳು ಹೇಳುತ್ತಿದ್ದಾರೆ. ನನ್ನ ಕಕ್ಷಿದಾರರದ್ದು ಏನೂ ತಪ್ಪಿಲ್ಲ. ಇಡಿ ಶೋಧದ ವೇಳೆ ಅವರ ಮನೆಯಲ್ಲಿ ಏನೂ ಸಿಕ್ಕಿಲ್ಲ. ಹಾಗಾಗಿಯೇ ಅವರು ಇಡಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿಲ್ಲ, ತನಿಖೆಗೂ ಸಹಕರಿಸುತ್ತಿಲ್ಲ’ ಎಂದು ಸಮರ್ಥಿಸಿಕೊಂಡಿದ್ದಾರೆ.
ಪಾರ್ಥ ಚಟರ್ಜಿ ಶಿಕ್ಷಣ ಸಚಿವರಾಗಿದ್ದಾಗ ನಡೆದ ಹಗರಣಕ್ಕೆ ಸಂಬಂಧಪಟ್ಟಂತೆ ಇ ಡಿ ತನಿಖೆ ತೀವ್ರಗೊಂಡಿದೆ. ಅವರ ಆಪ್ತೆ ಅರ್ಪಿತಾ ಮನೆಯಲ್ಲಿ 50 ಕೋಟಿ ರೂಪಾಯಿಗೂ ಅಧಿಕ ನಗದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿವೆ. ಪಾರ್ಥರನ್ನು ಟಿಎಂಸಿ ಪಕ್ಷದಿಂದಲೇ ಅಮಾನತು ಮಾಡಲಾಗಿದೆ. ಅರ್ಪಿತಾ ಮುಖರ್ಜಿ ತನ್ನದೇನೂ ತಪ್ಪಿಲ್ಲ. ನನ್ನ ಮನೆಯಲ್ಲಿರುವ ಹಣವೆಲ್ಲ ಪಾರ್ಥ ಚಟರ್ಜಿಯವರದ್ದೇ ಎಂದು ಇಡಿ ಅಧಿಕಾರಿಗಳ ಎದುರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆ ಹೊರಗೆ ಪಾರ್ಥ ಚಟರ್ಜಿ ಮೇಲೆ ಚಪ್ಪಲಿ ಎಸೆದ ಮಹಿಳೆ; ಅವನೊಬ್ಬ ಅಯೋಗ್ಯ ಎಂದು ಬೈಗುಳ