ಕೋಲ್ಕತ್ತ: ಪಶ್ಚಿಮ ಬಂಗಾಳ ಪ್ರಾಥಮಿಕ ಶಾಲಾ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಪಾರ್ಥ ಚಟರ್ಜಿ (Partha chatterjee) ಆಸ್ಪತ್ರೆಗೆ ದಾಖಲಾಗಿದ್ದರೆ, ಅವರ ಆಪ್ತೆ ಅರ್ಪಿತಾ ಮುಖರ್ಜಿ ಇ ಡಿ ಕಸ್ಟಡಿಯಲ್ಲಿದ್ದು, ತೀವ್ರ ವಿಚಾರಣೆ ಎದುರಿಸುತ್ತಿದ್ದಾರೆ. ಹಾಗೇ, ಇವರಿಬ್ಬರಿಗೆ ಸೇರಿದ ಮನೆ, ಅಪಾರ್ಟ್‌ಮೆಂಟ್‌ಗಳನ್ನು ಪತ್ತೆ ಹಚ್ಚಿ, ಶೋಧಿಸುವ ಕಾರ್ಯಾಚರಣೆಯೂ ನಡೆಯುತ್ತಿದೆ. ಪಶ್ಚಿಮ ಬಂಗಾಳದ ಡೈಮಂಡ್ ಸಿಟಿಯಲ್ಲಿ ಪಾರ್ಥ ಚಟರ್ಜಿ ಮೂರು ಫ್ಲ್ಯಾಟ್‌ಗಳನ್ನು ಹೊಂದಿದ್ದಾರೆ, ಅದರಲ್ಲೊಂದು ಹವಾನಿಯಂತ್ರಿತ ಫ್ಲ್ಯಾಟ್‌ನ್ನು ತಾವು ಸಾಕಿದ ನಾಯಿಗಳಿಗಾಗಿಯೇ ಮೀಸಲಿಟ್ಟಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇ ಡಿ) ಹೇಳಿತ್ತು.
ಹಾಗೇ ಇಂದು ಅರ್ಪಿತಾ ಮುಖರ್ಜಜಿಗೆ ಸಂಬಂಧಪಟ್ಟ ಮಹತ್ವದ ವಿಚಾರವೊಂದು ಹೊರಬಿದ್ದಿದೆ. ಕೋಲ್ಕತ್ತದಲ್ಲಿ ಅರ್ಪಿತಾ ಮುಖರ್ಜಿ ಮನೆಯಲ್ಲಿ ಕಪ್ಪು ಬಣ್ಣದ ಡೈರಿಯೊಂದು ಸಿಕ್ಕಿದ್ದು, ಅದರಲ್ಲಿ ಶಾಲಾ ಸೇವಾ ಆಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದ ಹಗರಣ ಸಾಕ್ಷೀಕರಿಸುವ ಪ್ರಮುಖ ಅಂಶಗಳು ಇವೆ ಎಂದು ಇ ಡಿ ಹೇಳಿದ್ದಾಗಿ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಈ ಡೈರಿ ಪಶ್ಚಿಮ ಬಂಗಾಳದ ಉನ್ನತ ಶಿಕ್ಷಣ ಮತ್ತು ಶಾಲಾ ಶಿಕ್ಷಣ ಇಲಾಖೆಗೆ ಸೇರಿದ್ದಾಗಿದೆ. ಅದರಲ್ಲಿ ಸುಮಾರು 40 ಪುಟಗಳಲ್ಲಿ ನಮೂದಿತವಾದ ವಿಷಯಗಳು ಶಿಕ್ಷಕರ ಅಕ್ರಮ ನೇಮಕಾತಿಗೆ ಹಿಡಿದ ಕೈಗನ್ನಡಿಯಾಗಿದೆ. ಅದೆಷ್ಟೋ ಮಂದಿಯಿಂದ ಲಂಚ ಪಡೆದು, ಅವರನ್ನು ನಿರ್ದಿಷ್ಟ ಶಾಲೆಗಳಿಗೆ ಶಿಕ್ಷಕರನ್ನಾಗಿ ನೇಮಕ ಮಾಡಿದ ವಿಷಯಗಳನ್ನು ಡೈರಿಯಲ್ಲಿ ಬರೆದಿಡಲಾಗಿದೆ ಎಂದು ಇ ಡಿ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ, “ಶಾಲಾ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಪಾರ್ಥ ಮತ್ತು ಅವರ ಆಪ್ತ ಸಹಾಯಕಿ ಅರ್ಪಿತಾ ದೋಷಿಯಗಳು ಎಂದು ನಿರ್ಣಯಿಸಲು ಪೂರಕವಾದ ಹಲವು ಅಂಶಗಳು ಈ ಕಪ್ಪು ಡೈರಿಯಲ್ಲಿ ಇದೆ” ಎಂದೂ ಹೇಳಲಾಗಿದೆ.
ಇದನ್ನೂ ಓದಿ: ಪಾರ್ಥ ವೈಭೋಗ; ನಾಯಿಗಳಿಗೂ ಐಷಾರಾಮಿ ಫ್ಲ್ಯಾಟ್ ಕಟ್ಟಿಸಿರುವ ಬಂಧಿತ ಟಿಎಂಸಿ ಸಚಿವ !
ಜುಲೈ 22 ರಂದು ಇ ಡಿ ಅಧಿಕಾರಿಗಳು ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಮುಖರ್ಜಿ ಮನೆಯ ಮೇಲೆ ದಾಳಿ ನಡೆಸಿದ್ದರು. ಅಲ್ಲಿ 20 ಕೋಟಿ ರೂಪಾಯಿ ನಗದು, 1 ಕೋಟಿ ರೂ.ಮೌಲ್ಯದ ಆಭರಗಳು ಪತ್ತೆಯಾಗಿದ್ದವು. ಈ ಪಾರ್ಥ ಚಟರ್ಜಿ ಶಿಕ್ಷಣ ಸಚಿವ ಆಗಿದ್ದಾಗಲೇ ನಡೆದ ಹಗರಣ ಇದಾಗಿದ್ದರಿಂದ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ ಪಾರ್ಥ ಚಟರ್ಜಿಯಾಗಲೀ, ಅರ್ಪಿತಾ ಆಗಲೀ ಸರಿಯಾಗಿ ಸಹಕರಿಸದೆ ಇದ್ದಾಗ ಇಬ್ಬರನ್ನೂ ಅರೆಸ್ಟ್ ಮಾಡಲಾಗಿದೆ. ಎದೆ ನೋವಿನ ಕಾರಣದಿಂದ ಪಾರ್ಥ ಚಟರ್ಜಿ ಭುವನೇಶ್ವರ ಏಮ್ಸ್‌ಗೆ ದಾಖಲಾಗಿದ್ದಾರೆ. ಹಾಗಾಗಿ ಇ ಡಿಗೆ ಅವರನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಾಗಿಲ್ಲ.
ಇದನ್ನೂ ಓದಿ: ಬಂಧಿತ ತೃಣಮೂಲ ಸಚಿವ ಪಾರ್ಥ ಚಟರ್ಜಿ ಭುವನೇಶ್ವರ ಏಮ್ಸ್ ಆಸ್ಪತ್ರೆಗೆ ಇಂದು ದಾಖಲು