Site icon Vistara News

ಜೈಲಲ್ಲಿದ್ದ ಪಶ್ಚಿಮ ಬಂಗಾಳ ಸಚಿವನಿಗೆ ಎದೆನೋವು; ಆಸ್ಪತ್ರೆಗೆ ದಾಖಲಿಸಲು ಕೋರ್ಟ್‌ ಅನುಮತಿ

Paartha Chatarjee

ಕೋಲ್ಕತ್ತ: ಪಶ್ಚಿಮ ಬಂಗಾಳದ ಶಾಲಾ ಸೇವಾ ಆಯೋಗದ ನೇಮಕಾತಿಯಲ್ಲಿ ಅಕ್ರಮ ನಡೆದ ಆರೋಪದಡಿ ಇ.ಡಿ.ಯಿಂದ ಬಂಧಿತರಾದ ಸಚಿವ ಪಾರ್ಥ ಚಟರ್ಜಿಯವರಿಗೆ ಇಂದು ಎದೆನೋವು ಕಾಣಿಸಿಕೊಂಡಿದೆ. ಜೈಲಿನಲ್ಲಿ ಇದ್ದ ಅವರಿಗೆ ಎದೆ ನೋವು ಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲು ಕೋರ್ಟ್‌ ಅನುಮತಿ ನೀಡಿತ್ತು. ಸದ್ಯ ಪಾರ್ಥ ಚಟರ್ಜಿ ಅವರನ್ನು ಕೋಲ್ಕತ್ತದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಾರ್ಥ ಚಟರ್ಜಿ ಸೋಮವಾರದವರೆಗೂ ಇ.ಡಿ. ಕಸ್ಟಡಿಯಲ್ಲಿ ಇರಬೇಕಿತ್ತು. ನಂತರ ಅವರನ್ನು ಅಕ್ರಮ ಹಣ ವರ್ಗಾವಣೆ ವಿಚಾರಣೆ ಕೋರ್ಟ್‌ಗೆ ಹಾಜರುಪಡಿಸಬೇಕಿತ್ತು.

ಪಶ್ಚಿಮ ಬಂಗಾಳದ ಶಾಲಾ ಸೇವಾ ಆಯೋಗದ ನೇಮಕಾತಿ ಹಗರಣದಡಿ ಇ.ಡಿ. ಅಧಿಕಾರಿಗಳು ಕಳೆದ ಎರಡು ದಿನಗಳಿಂದಲೂ ರೇಡ್‌ ರಾಜ್ಯದ ವಿವಿಧ ಕಡೆಗಳಲ್ಲಿ ರೇಡ್‌ ಮಾಡುತ್ತಿದ್ದಾರೆ. ಇದೇ ಕೇಸ್‌ನಲ್ಲಿ ಪಾರ್ಥ ಚಟರ್ಜಿಯವರನ್ನು 26 ತಾಸುಗಳ ಕಾಲ ವಿಚಾರಣೆಗೆ ಒಳಪಡಿಸಿದ್ದ ಇ.ಡಿ., ಅವರು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸದ ಕಾರಣ ಅವರನ್ನು ಇಂದು ಬೆಳಗ್ಗೆ ಬಂಧಿಸಲಾಗಿತ್ತು. ಹಾಗೇ, ಇವರ ಆಪ್ತೆ ಅರ್ಪಿತಾ ಮುಖರ್ಜಿಯನ್ನೂ ಇ.ಡಿ. ಬಂಧಿಸಿದೆ. ಅರ್ಪಿತಾ ಮುಖರ್ಜಿಗೆ ಸೇರಿದ ಪ್ರದೇಶಗಳಿಂದ ವಶಪಡಿಸಿಕೊಂಡ ದಾಖಲೆಗಳು ಮತ್ತು ಸಚಿವರಿಗೆ ಸಂಬಂಧಪಟ್ಟ 14 ಸ್ಥಳಗಳಿಂದ ವಶಪಡಿಸಿಕೊಂಡ ದಾಖಲೆಗಳು, ಇವರಿಬ್ಬರ ಮಧ್ಯೆ ಹಣ ವರ್ಗಾವಣೆಯಾಗಿದ್ದನ್ನು ಸ್ಪಷ್ಟಪಡಿಸುತ್ತವೆ ಎಂದೂ ಇ.ಡಿ. ತಿಳಿಸಿದೆ.

ಪಶ್ಚಿಮ ಬಂಗಾಳದ ಶಾಲಾ ಸೇವಾ ಆಯೋಗದ ನೇಮಕಾತಿ ಅಕ್ರಮಕ್ಕೆ ಸಂಬಂಧಪಟ್ಟಂತೆ ಇ.ಡಿ. ಹಲವು ಕಡೆಗಳಲ್ಲಿ ರೇಡ್‌ ಮಾಡುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ದಾಳಿ ಮಾಡಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಅಂದಹಾಗೇ ಈ ಪಾರ್ಥ ಚಟರ್ಜಿ, 2001ರಲ್ಲಿ ಮೊದಲಿಗೆ ಬೆಹಾಲಾ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಶಾಸಕರಾದರು. 2011ರಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಕ್ಕೂ ಅಂದರೆ 2006ರಿಂದ 2011ರವರೆಗೆ ಇವರು ರಾಜ್ಯ ವಿಧಾನಸಭೆಯಲ್ಲಿ ವಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದರು. ಈಗ ಕೇಳಿಬಂದಿರುವ ಹಗರಣದಡಿ ಕೇವಲ ಪಾರ್ಥ ಚಟರ್ಜಿ ಮನೆ ಮಾತ್ರವಲ್ಲ, ಇತರ ಸಚಿವರಾದ ಪರೇಶ್‌ ಅಧಿಕಾರಿ, ಮಾಣಿಕ್‌ ಭಟ್ಟಾಚಾರ್ಯ, ಶಾಸಕ ಮತ್ತು ಪಶ್ಚಿಮ ಬಂಗಾಳ ಪ್ರಾಥಮಿಕ ಶಾಲಾ ಮಂಡಳಿ ಮಾಜಿ ಅಧ್ಯಕ್ಷ ಕೆ. ಬಂಡೋಪಾಧ್ಯಾಯ ಸೇರಿ, ಇದೇ ಮಂಡಳಿಯ ಹಲವು ಸದಸ್ಯರ ಮನೆಯಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಇದನ್ನೂ ಓದಿ: ತೃಣಮೂಲ ಸಚಿವರ ಆಪ್ತೆಯ ಮನೆಯಲ್ಲಿ 20 ಕೋಟಿ ರೂ. ನಗದು ಇ.ಡಿ ವಶಕ್ಕೆ

Exit mobile version