Site icon Vistara News

ಪಾರ್ಥ ವೈಭೋಗ; ನಾಯಿಗಳಿಗೂ ಐಷಾರಾಮಿ ಫ್ಲ್ಯಾಟ್‌ ಕಟ್ಟಿಸಿರುವ ಬಂಧಿತ ಟಿಎಂಸಿ ಸಚಿವ !

Partha Chatterjee Flat

ಕೋಲ್ಕತ್ತ: ಪಶ್ಚಿಮ ಬಂಗಾಳ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಪಟ್ಟ ಕೇಸ್‌ನಲ್ಲಿ ಇ.ಡಿ.ಯಿಂದ ಬಂಧಿತರಾಗಿರುವ ತೃಣಮೂಲ ಕಾಂಗ್ರೆಸ್‌ ಸಚಿವ ಪಾರ್ಥ ಚಟರ್ಜಿ (Partha Chatterjee)ಗೆ ಸಂಬಂಧಪಟ್ಟ ಒಂದೊಂದೇ ವಿಷಯಗಳು ಹೊರಬೀಳುತ್ತಿವೆ. ಇವರ ಆಪ್ತೆ ಅರ್ಪಿತಾ ಮುಖರ್ಜಿ ಮನೆಯಲ್ಲಿ 20 ಕೋಟಿ ರೂಪಾಯಿ, 1 ಕೋಟಿ ರೂಪಾಯಿ ಮೌಲ್ಯದ ಆಭರಣಗಳು ಮತ್ತು 20 ಮೊಬೈಲ್‌ಗಳು ಸಿಕ್ಕಿವೆ. ಅದರ ಬೆನ್ನಲ್ಲೇ ಪಾರ್ಥ ಮತ್ತು ಅರ್ಪಿತಾ ಬಂಧನವಾಗಿದೆ. ಆದರೆ ಪಾರ್ಥ ಚಟರ್ಜಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಸದ್ಯ ಭುವನೇಶ್ವರ್‌ನಲ್ಲಿರುವ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದೆಡೆ ಇ ಡಿ ಅಧಿಕಾರಿಗಳು ಪಾರ್ಥ ಚಟರ್ಜಿ ಒಡೆತನದಲ್ಲಿರುವ ಒಂದೊಂದೇ ಆಸ್ತಿ, ಮನೆ, ಫ್ಲ್ಯಾಟ್‌ಗಳನ್ನೆಲ್ಲ ಪತ್ತೆ ಹಚ್ಚಿ ಶೋಧಿಸುತ್ತಿದ್ದಾರೆ.

ಇದೀಗ ಇ ಡಿ ಅಧಿಕಾರಿಗಳು ಪಶ್ಚಿಮ ಬಂಗಾಳದ ಡೈಮಂಡ್‌ ಸಿಟಿಯಲ್ಲಿ ಇರುವ, ಪಾರ್ಥ ಚಟರ್ಜಿಗೆ ಸೇರಿದ ಮೂರು ಫ್ಲ್ಯಾಟ್‌ಗಳನ್ನು ಪತ್ತೆ ಹಚ್ಚಿದ್ದಾರೆ. ಅದರಲ್ಲಿ ಒಂದು ಫ್ಲ್ಯಾಟ್‌ನ್ನು ನಾಯಿಗಳಿಗಾಗಿಯೇ ಮೀಸಲಿಡಲಾಗಿದೆ. ಇದು ಪೂರ್ತಿಯಾಗಿ ಹವಾನಿಯಂತ್ರಿತವಾಗಿದೆ ಎಂದು ಇ.ಡಿ. ಮಾಹಿತಿ ನೀಡಿದೆ. ಪಾರ್ಥ ಚಟರ್ಜಿ ಶ್ವಾನಪ್ರಿಯರಾಗಿದ್ದು ಹಲವು ನಾಯಿಗಳನ್ನು ಸಾಕಿದ್ದಾರೆ. ಅವುಗಳಿಗಾಗಿಯೇ ಐಷಾರಾಮಿ ಫ್ಲ್ಯಾಟ್‌ವೊಂದನ್ನು ಮೀಸಲಿಟ್ಟಿದ್ದಾರೆ. ಅವುಗಳ ನಿರ್ವಹಣೆಗೆ ಜನರನ್ನೂ ನೇಮಿಸಿದ್ದಾರೆ ಎಂದು ತಿಳಿಸಿದೆ.

ಇದನ್ನೂ ಓದಿ: ಬಂಧಿತ ತೃಣಮೂಲ ಸಚಿವ ಪಾರ್ಥ ಚಟರ್ಜಿ ಭುವನೇಶ್ವರ ಏಮ್ಸ್‌ ಆಸ್ಪತ್ರೆಗೆ ಇಂದು ದಾಖಲು

ಡೈಮಂಡ್‌ ಸಿಟಿಯಲ್ಲಿ ಇರುವ 18/D, 19/D ಮತ್ತು 20D ಗಳೆಲ್ಲ ಪಾರ್ಥ ಚಟರ್ಜಿಗೆ ಸೇರಿದ ಫ್ಲ್ಯಾಟ್‌ಗಳೇ ಆಗಿವೆ. ಇದೀಗ ಹಣ ಸಿಕ್ಕಿರುವ ಮನೆಯೂ ಕೂಡ ಪಾರ್ಥ ಚಟರ್ಜಿ ತಮ್ಮ ಆಪ್ತೆ ಅರ್ಪಿತಾ ಮುಖರ್ಜಿಗೆ ಉಡುಗೊರೆ ನೀಡಿದ್ದೇ ಆಗಿದೆ ಎಂದೂ ಇ.ಡಿ. ಪ್ರತಿಪಾದಿಸಿದೆ. ಇದರ ಹೊರತಾಗಿ ಬೋಲ್ಪುರ ಮತ್ತು ಶಾಂತಿನಿಕೇತನ್‌ಗಳಲ್ಲಿ ಅರ್ಪಿತಾ ಮುಖರ್ಜಿ ಮತ್ತು ಪಾರ್ಥ ಚಟರ್ಜಿ ಅಪಾರ್ಟ್‌ಮೆಂಟ್‌ ಹೊಂದಿದ್ದಾರೆ. ಆ ಅಪಾರ್ಟ್‌ಮೆಂಟ್‌ ಮಾಲೀಕತ್ವ ಇವರಿಬ್ಬರಿಗೂ ಸೇರಿದೆ. ಒಟ್ಟಾರೆ ಏಳು ಮನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳನ್ನು ಇ.ಡಿ. ಕಣ್ಗಾವಲಿನಲ್ಲಿ ಇಡಲಾಗಿದೆ ಎಂದೂ ತನಿಖಾ ದಳ ತಿಳಿಸಿದೆ.

ಪಶ್ಷಿಮ ಬಂಗಾಳದಲ್ಲಿ ಪಾರ್ಥ ಚಟರ್ಜಿ ಶಿಕ್ಷಣ ಸಚಿವರಾಗಿದ್ದಾಗ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದಡಿ ಇ.ಡಿ. ತನಿಖೆ ಚುರುಕುಗೊಳಿಸಿದೆ. ಶುಕ್ರವಾರದಿಂದ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದೆ. ಇನ್ನು ಪಾರ್ಥ ಚಟರ್ಜಿ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಅವರ ಆರೋಗ್ಯಕ್ಕೆ ಏನೂ ಆಗಿಲ್ಲ. ಸಚಿವರು ನಾಟಕ ಮಾಡುತ್ತಿದ್ದಾರೆ ಎಂದು ಇ.ಡಿ. ಅಧಿಕಾರಿಗಳು ದೆಹಲಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್‌ ಈ ಮನವಿಯನ್ನು ಮಾನ್ಯ ಮಾಡಲಿಲ್ಲ. ಪಾರ್ಥ ಚಟರ್ಜಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಸೂಚಿಸಿರುವ ಹಿನ್ನೆಲೆಯಲ್ಲಿ ಅವರನ್ನು ಇಂದು ಭುವನೇಶ್ವರ ಏಮ್ಸ್‌ಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಡಾನ್‌ನಂತೆ ವರ್ತಿಸುತ್ತಿದ್ದಾರೆ ಪಾರ್ಥ ಚಟರ್ಜಿ; ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಇ ಡಿ

Exit mobile version