ಕೋಲ್ಕತ್ತ: ಪಶ್ಚಿಮ ಬಂಗಾಳ ಶಾಲಾ ಶಿಕ್ಷಕರ ನೇಮಕಾತಿ ಅಕ್ರಮದಲ್ಲಿ ಇ ಡಿಯಿಂದ ಬಂಧಿತವಾಗಿರುವ ಸಚಿವ ಪಾರ್ಥ ಚಟರ್ಜಿ ವಿರುದ್ಧ ಸ್ವಪಕ್ಷದಲ್ಲಿಯೇ ಅಸಮಾಧಾನ ಭುಗಿಲೆದ್ದಿದೆ. ಪಾರ್ಥ ಚಟರ್ಜಿಯನ್ನು ಸಚಿವ ಸ್ಥಾನದಿಂದ ತೆಗೆದುಹಾಕಬೇಕು. ಅಷ್ಟೇ ಅಲ್ಲ ಪಕ್ಷದ ಎಲ್ಲ ಹುದ್ದೆಗಳಿಂದಲೂ ಅವರನ್ನು ವಜಾಗೊಳಿಸಬೇಕು. ಪಕ್ಷದಿಂದಲೇ ಉಚ್ಚಾಟನೆ ಮಾಡಿದರೂ ತಪ್ಪಿಲ್ಲ ಎಂದು ತೃಣಮೂಲ ಕಾಂಗ್ರೆಸ್ ವಕ್ತಾರ ಕುನಾಲ್ ಘೋಷ್ ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ. ಹಾಗೇ, “ನನ್ನ ಈ ಮಾತುಗಳು ತಪ್ಪು ಎನ್ನಿಸಿದರೆ, ನನ್ನನ್ನೇ ಪಕ್ಷದಿಂದ ಉಚ್ಚಾಟನೆ ಮಾಡಿ. ಒಬ್ಬಂಟಿಯಾಗಿ, ಒಬ್ಬ ಯೋಧನಂತೆ ನನ್ನ ಜೀವನ ನಡೆಸುತ್ತೇನೆ” ಎಂದೂ ಹೇಳಿಕೊಂಡಿದ್ದಾರೆ.
ಪಾರ್ಥ ಚಟರ್ಜಿಯವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಪ್ತರಲ್ಲಿ ಒಬ್ಬರು. ಹಾಗಂತ ಅವರು ಬಂಧಿತರಾದರೂ ಮಮತಾ ಬ್ಯಾನರ್ಜಿ ಅದನ್ನು ವಿರೋಧಿಸುತ್ತಿಲ್ಲ. ಪಾರ್ಥ ಇಂಥ ಕೆಲಸ ಮಾಡುತ್ತಾರೆ ಎಂದರೆ ನಂಬಲೂ ಸಾಧ್ಯವಾಗುತ್ತಿಲ್ಲ. ಅವರ ಬಂಧನ ವೈಯಕ್ತಿಕವಾಗಿ ನೋವಾಗಿದೆ ಎಂದಷ್ಟೇ ಹೇಳಿದ್ದಾರೆ. ಇನ್ನು ಇ ಡಿ ಅಧಿಕಾರಿಗಳು ತಮ್ಮನ್ನು ಬಂಧಿಸಲು ಬಂದಿದ್ದಾಗ ಪಾರ್ಥ ಚಟರ್ಜಿ, ಸಿಎಂ ಮಮತಾಗೆ ನಾಲ್ಕೈದು ಬಾರಿ ಕರೆ ಮಾಡಿದ್ದರು. ಆದರೆ ದೀದಿ ಅದನ್ನು ಸ್ವೀಕರಿಸಲಿಲ್ಲ ಎಂದೂ ಮಾಹಿತಿ ಲಭ್ಯವಾಗಿದೆ. ಸದ್ಯ ಪಾರ್ಥ ಚಟರ್ಜಿ ಎದೆನೋವಿನಿಂದ ಬಳಲುತ್ತಿದ್ದು, ಸದ್ಯ ಭುವನೇಶ್ವರದ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲಿಂದ ಬಿಡುಗಡೆಯಾದರೂ ಇ ಡಿ ಅವರನ್ನು ವಶಕ್ಕೆ ಪಡೆಯಲಿದೆ.
ಇದನ್ನೂ ಓದಿ: ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಮನೆಯಲ್ಲಿ ಹಣದ ಹೊಳೆ; ಇಂದು ಮತ್ತೆ 20 ಕೋಟಿ ರೂ. ನಗದು ಪತ್ತೆ !