Site icon Vistara News

ಪಾರ್ಥ ಚಟರ್ಜಿಯನ್ನು ಸಂಪೂರ್ಣ ಕೈಬಿಟ್ಟ ಮಮತಾ ಬ್ಯಾನರ್ಜಿ; ಪಕ್ಷದಿಂದಲೇ ಅಮಾನತು

Partha Chatterjee suspended

ನವ ದೆಹಲಿ: ಪಶ್ಚಿಮ ಬಂಗಾಳ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಅಕ್ರಮ ಆರೋಪದಡಿ ಬಂಧಿತರಾಗಿರುವ ಪಾರ್ಥ ಚಟರ್ಜಿಯನ್ನು ಈಗ ತೃಣಮೂಲ ಕಾಂಗ್ರೆಸ್‌ನಿಂದ ಅಮಾನತು ಮಾಡಲಾಗಿದೆ. ಇವರನ್ನು ಪಕ್ಷದಿಂದ ಉಚ್ಚಾಟನೆಯನ್ನೇ ಮಾಡಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಆದರೆ ಸದ್ಯ ಉಚ್ಚಾಟನೆ ಮಾಡದೆ, ಅಮಾನತಿನಲ್ಲಿ ಇಡಲಾಗಿದೆ. ಇಂದು ಸಂಜೆ ೫ಗಂಟೆಯಿಂದ ತೃಣಮೂಲ ಕಾಂಗ್ರೆಸ್‌ನ ಶಿಸ್ತು ಸಮಿತಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಕೈಗೊಂಡ ನಿರ್ಣಯದ ಅನ್ವಯ, ಪಾರ್ಥ ಚಟರ್ಜಿ ಪಕ್ಷದಿಂದ ಅಮಾನತುಗೊಂಡಿದ್ದಾರೆ.

ಶಿಸ್ತು ಸಮಿತಿ ಸಭೆಯ ಬಳಿಕ ಮಾತನಾಡಿದ ಟಿಎಂಸಿ ನಾಯಕ ಅಭಿಷೇಕ್‌ ಬ್ಯಾನರ್ಜಿ, ʼತೃಣಮೂಲ ಕಾಂಗ್ರೆಸ್‌ ಪಕ್ಷವನ್ನು ಕಟ್ಟಲು ಮಮತಾ ಬ್ಯಾನರ್ಜಿ ಅನೇಕ ತ್ಯಾಗಗಳನ್ನು ಮಾಡಿದ್ದಾರೆ. ಈಗ ಯಾವುದೇ ವಿಚಾರಕ್ಕೂ, ಯಾರ ಎದುರೂ ನಾವು ತಲೆಬಾಗುವುದಿಲ್ಲ. ಪಾರ್ಥ ಚಟರ್ಜಿಯನ್ನು ಈಗಾಗಲೇ ಸರ್ಕಾರದ ಸಂಪುಟದಿಂದ ವಜಾಗೊಳಿಸಲಾಗಿದೆ. ಜನರ ನಂಬಿಕೆಗೆ ದ್ರೋಹ ಬಗೆದವರು ಯಾರೇ ಆದರೂ ನಾವು ಅವರನ್ನು ಸುಮ್ಮನೆ ಬಿಡುವುದಿಲ್ಲ. ನಮ್ಮ ಟಿಎಂಸಿ ಪಕ್ಷ ಇಂಥದ್ದನ್ನೆಲ್ಲ ಸಹಿಸಿಕೊಳ್ಳುವುದಿಲ್ಲʼ ಎಂದು ಹೇಳಿದ್ದಾರೆ.

ಇಂದು ಮಧ್ಯಾಹ್ನ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಸಂಪುಟ ಸಭೆ ನಡೆದಿತ್ತು. ಅದರಲ್ಲಿ ಪಾರ್ಥ ಚಟರ್ಜಿಯನ್ನು ಸಚಿವ ಸ್ಥಾನ ಮತ್ತು ಪಕ್ಷದ ಸಾಂಸ್ಥಿಕ ಹುದ್ದೆಗಳಿಂದ ವಜಾಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಅದರಂತೆ ಪಾರ್ಥ ಉಸ್ತುವಾರಿಯಲ್ಲಿದ್ದ, ವಾಣಿಜ್ಯ ಮತ್ತು ಉದ್ಯಮ ಇಲಾಖೆ, ಸಂಸದೀಯ ವ್ಯವಹಾರಗಳ ಇಲಾಖೆ, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್‌, ಸಾರ್ವಜನಿಕ ಉದ್ಯಮ ಮತ್ತು ಕೈಗಾರಿಕಾ ಪುನನಿರ್ಮಾಣ ಇಲಾಖೆಗಳನ್ನೆಲ್ಲ ಹಿಂಪಡೆಯಲಾಗಿದೆ ಮತ್ತು ಇನ್ನೊಬ್ಬ ಸಚಿವನ ನೇಮಕ ಆಗುವವರೆಗೆ ಅವೆಲ್ಲವೂ ಮಮತಾ ಬ್ಯಾನರ್ಜಿ ಕೈಯಲ್ಲೇ ಇರಲಿವೆ. ಹಾಗೇ, ಪಕ್ಷದ ಸಾಂಸ್ಥಿಕ ಹುದ್ದೆಗಳಾದ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಮತ್ತು ಪಕ್ಷದ ಶಿಸ್ತು ಸಮಿತಿಯ ಸದಸ್ಯ ಸ್ಥಾನದಿಂದಲೂ ಅವರು ವಜಾಗೊಂಡಿದ್ದಾರೆ.

ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಮುಖರ್ಜಿ ಮನೆಯಲ್ಲಿ ಇದುವರೆಗೆ 50 ಕೋಟಿ ರೂಪಾಯಿಗೂ ಅಧಿಕ ಹಣ ಪತ್ತೆಯಾಗಿದೆ. ಇವರಿಬ್ಬರಿಗೆ ಸೇರಿದ ಇನ್ನಷ್ಟು ಸ್ಥಳಗಳನ್ನು ಶೋಧ ಮಾಡುವುದು ಬಾಕಿ ಇದೆ. ಇಷ್ಟೆಲ್ಲದರ ಮಧ್ಯೆ ಪಾರ್ಥ ಚಟರ್ಜಿ ಬಗ್ಗೆ ಪಕ್ಷದೊಳಗೇ ಆಕ್ರೋಶ ಹೊರಬಿದ್ದಿತ್ತು. ಮಮತಾ ಬ್ಯಾನರ್ಜಿ ಕೂಡ ಅವರನ್ನು ಉಳಿಸಿಕೊಳ್ಳುವ ಯಾವುದೇ ಪ್ರಯತ್ನವನ್ನೂ ಮಾಡಲಿಲ್ಲ.

ಇದನ್ನೂ ಓದಿ: SSC scam | ಸಚಿವ ಸ್ಥಾನ ಕಳೆದುಕೊಂಡ ಪಾರ್ಥ ಚಟರ್ಜಿ; ಸಿಎಂ ಮಮತಾ ಬ್ಯಾನರ್ಜಿ ಆದೇಶ

Exit mobile version