Site icon Vistara News

ವಿಮಾನದಲ್ಲಿ ಗಗನ ಸಖಿಯರಿಗೆ ಹಲ್ಲೆ ನಡೆಸಿದ ಪ್ರಯಾಣಿಕ ಡೆಲ್ಲಿಯಲ್ಲಿ ಅರೆಸ್ಟ್​​

Air India Flight

#image_title

ನವದೆಹಲಿ: ಗೋವಾದಿಂದ ದೆಹಲಿಗೆ ಹಾರುತ್ತಿದ್ದ ಏರ್​ ಇಂಡಿಯಾ ವಿಮಾನದ ಸಿಬ್ಬಂದಿ ಮೇಲೆ ಪ್ರಯಾಣಿಕೊಬ್ಬ ಹಲ್ಲೆ ನಡೆಸಿದ್ದಾನೆ. ಸೋಮವಾರ ಈ ಘಟನೆ ನಡೆದಿದ್ದು ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆದ ಬಳಿಕ ಪ್ರಯಾಣಿಕನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ. ಇತ್ತೀಚಿನ ಕೆಲವು ತಿಂಗಳುಗಳಲ್ಲಿ, ವಿಮಾನದಲ್ಲಿ ಪ್ರಯಾಣಿಕರು ಅಶಿಸ್ತು ತೋರುತ್ತಿರುವ ಪ್ರಸಂಗಗಳು ಹೆಚ್ಚಾಗಿ ಕಂಡು ಬರುತ್ತದೆ. ಅದೇ ಮಾದರಿಯ ಘಟನೆ ಗೋವಾದಿಂದ ದೆಹಲಿಗೆ ತೆರಳುತ್ತಿದ್ದ ಎಐ882 ಸಂಖ್ಯೆ ವಿಮಾನದಲ್ಲಿ ನಡೆದಿದೆ.

ನಮ್ಮ ಸಿಬ್ಬಂದಿಯನ್ನು ಪ್ರಯಾಣಿಕ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಒಬ್ಬರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆಯೂ ಆ ಪ್ರಯಾಣಿಕ ಆಕ್ರಮಣಕಾರಿ ನಡವಳಿಕೆಯನ್ನು ಮುಂದುವರಿಸಿದ್ದ. ಹೀಗಾಗಿ ಆ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಯಿತು. ಘಟನೆ ಬಗ್ಗೆ ಪ್ರಾಧಿಕಾರಗಳಿಗೆ ವರದಿ ಮಾಡಿದ್ದೇವೆ ಎಂದು ಏರ್ ಇಂಡಿಯಾ ವಕ್ತಾರರು ಮಂಗಳವಾರ ಹೇಳಿಕೆ ನೀಡಿದ್ದಾರೆ. ಆದರೆ ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ.

ಇದನ್ನೂ ಓದಿ : ಸ್ವಲ್ಪದರಲ್ಲೇ ತಪ್ಪಿದ ಏರ್ ಇಂಡಿಯಾ-ನೇಪಾಳ ಏರ್‌ಲೈನ್ಸ್ ವಿಮಾನ ಡಿಕ್ಕಿ!

ನಮ್ಮ ಸಿಬ್ಬಂದಿಯ ಮತ್ತು ಪ್ರಯಾಣಿಕರ ಸುರಕ್ಷತೆ ನಮಗೆ ಆದ್ಯತೆಯ ವಿಷಯವಾಗಿದೆ. ಹೀಗಾಗಿ ಪ್ರಯಾಣಿಕನ ಅಶಿಸ್ತಿನ ನಡವಳಿಕೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ವ್ಯಕ್ತಿಯಿಂದ ಹಲ್ಲೆಗೊಳಗಾಗ ನಮ್ಮ ಸಿಬ್ಬಂದಿಗೆ ನಾವು ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತೇವೆ ಎಂದು ಏರ್​ ಇಂಡಿಯಾ ತಿಳಿಸಿದೆ.

ಎರಡು ವರ್ಷ ಹಾರಾಟ ನಿಷೇಧ

ಏಪ್ರಿಲ್ 10 ರಂದು ದೆಹಲಿ- ಲಂಡನ್ ವಿಮಾನದಲ್ಲಿ ಇಬ್ಬರು ಮಹಿಳಾ ಕ್ಯಾಬಿನ್ ಸಿಬ್ಬಂದಿಗೆ ಪ್ರಯಾಣಿಕರೊಬ್ಬರು ಹಲ್ಲೆ ನಡೆಸಿದ್ದರು. ಆ ವ್ಯಕ್ತಿಗೆ ಏರ್ ಇಂಡಿಯಾ ಎರಡು ವರ್ಷಗಳ ಹಾರಾಟ ನಿಷೇಧವನ್ನು ವಿಧಿಸಿತ್ತು. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) ನಿಬಂಧನೆ ಪ್ರಕಾರ ವಿಮಾನ ಪ್ರಯಾಣಿಕ ಅಶಿಸ್ತು ತೋರಿದರೆ ಹಾರಾಟ ನಿಷೇಧವನ್ನು ಮಾಡಬಹುದು.

ಪ್ರಯಾಣಿಕರ ಅಶಿಸ್ತಿನ ನಡವಳಿಕೆಯನ್ನು ಮೂರು ಹಂತಗಳಾಗಿ ವರ್ಗೀಕರಿಸಲಾಗಿದೆ. ದೈಹಿಕ ಸನ್ನೆಗಳು, ಮೌಖಿಕ ಕಿರುಕುಳ ಮತ್ತು ಮದ್ಯಪಾನ ಮಾಡಿದ ಬಳಿಕ ಅಶಿಸ್ತಿನ ನಡವಳಿಕೆ ತೋರುವುದು ಹಂತ 1ರ ತಪ್ಪಾಗಿರುತ್ತದೆ. ತಳ್ಳುವಿಕೆ, ಒದೆಯುವುದು ಅಥವಾ ಲೈಂಗಿಕ ಕಿರುಕುಳ ನೀಡಿದರೆ ಹಂತ 2 ಎಂದು ವರ್ಗೀಕರಿಸಲಾಗಿದೆ. ವಿಮಾನ ಆಪರೇಟಿಂಗ್ ಸಿಸ್ಟಮ್​ಗಳಿಗೆ ಹಾನಿ ಮಾಡುವುದು, ಕೊಲೆಯತ್ನದಂಥ ನಡವಳಿಕೆಯನ್ನು ಹಂತ 3 ಎಂದು ಪರಿಗಣಿಸಲಾಗುತ್ತದೆ.

ಅಶಿಸ್ತಿನ ನಡವಳಿಕೆಯ ಮಟ್ಟವನ್ನು ಅವಲಂಬಿಸಿ, ಸಂಬಂಧಿತ ವಿಮಾನಯಾನ ಸಂಸ್ಥೆ ಪ್ರಯಾಣಿಕನಿಗೆ ಹಾರಾಟ ನಿಷೇಧ ಶಿಕ್ಷೆ ನೀಡಬಹುದು.

Exit mobile version