ನವ ದೆಹಲಿ: ವಿಮಾನ ಪ್ರಯಾಣದ ವೇಳೆ ಅಶಿಸ್ತು ತೋರಿಸುವವರ ಬಗ್ಗೆ ವರದಿಯಾಗುವ ಪ್ರಕರಣಗಳು ಹೆಚ್ಚುತ್ತಿವೆ. ಏರ್ ಇಂಡಿಯಾ ವಿಮಾನದಲ್ಲಿ (Air India Flight) ಪ್ರಯಾಣಿಕನೊಬ್ಬ ಮಲ-ಮೂತ್ರ ವಿಸರ್ಜನೆ ಮಾಡಿ, ಗಲೀಜು ಸೃಷ್ಟಿಸಿ ಬಂಧಿತನಾಗಿದ್ದಾನೆ (Urinates on Air India). ಈ ಘಟನೆ ಜೂನ್ 24 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮುಂಬಯಿ-ದೆಹಲಿ ಮಾರ್ಗದ ಎಐಸಿ 866 ಎಂಬ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ರಾಮ್ ಸಿಂಗ್ ಇಂಥ ಹೊಲಸು ಮಾಡಿದ್ದಾನೆ. ಪೊಲೀಸರು ಎಫ್ ಐಆರ್ ದಾಖಲು ಮಾಡಿದ್ದಾರೆ. ಈತ ಮದ್ಯಪಾನ ಮಾಡಿದ್ದರ ಬಗ್ಗೆ ಉಲ್ಲೇಖವಾಗಿಲ್ಲ.
ಮುಂಬಯಿಯಿಂದ ದೆಹಲಿಗೆ ಹೋಗುತ್ತಿದ್ದ ವಿಮಾನದ 9 ನೇ ಸಾಲಿನಲ್ಲಿ, 17F ಸೀಟ್ ನಲ್ಲಿ ಕುಳಿತಿದ್ದ ರಾಮ್ ಸಿಂಗ್, ವಿಮಾನ ಹೊರಟ ಕೆಲವೇ ಹೊತ್ತಲ್ಲಿ ಅನುಚಿತ ವರ್ತನೆ ತೋರಿಸಿದ್ದಾನೆ. ಸೀಟ್ ನಿಂದ ಕೆಳಗೆ ಇಳಿದು ಮಲ-ಮೂತ್ರ ವಿಸರ್ಜಿಸಿ, ಅಲ್ಲೇ ಉಗುಳಿದ್ದಾನೆ. ಅಷ್ಟರಲ್ಲಿ ವಿಮಾನ ಸಿಬ್ಬಂದಿ ಅಲ್ಲಿಗೆ ಬಂದು ರಾಮ್ ಸಿಂಗ್ ನನ್ನು ಅಲ್ಲಿಂದ ಕರೆದುಕೊಂಡು ಹೋಗಿ ಐಸೋಲೇಟ್ ಮಾಡಿದ್ದಾರೆ. ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.
ರಾಮ್ ಸಿಂಗ್ ಅಷ್ಟಾದರೂ ಗಲಾಟೆ ಮಾಡುತ್ತಿದ್ದ. ಬಳಿಕ ವಿಮಾನ ಸಿಬ್ಬಂದಿ ಈ ವಿಚಾರವನ್ನು ಪೈಲೆಟ್ ಗೆ ತಿಳಿಸಿದ್ದಾರೆ. ಅವರಲ್ಲಿ ಕ್ಯಾಪ್ಟನ್ ಪೈಲೆಟ್, ಏರ್ ಪೋರ್ಟ್ ಅಧಿಕಾರಿಗಳಿಗೆ ಕರೆ ಮಾಡಿ, ವಿಮಾನದಲ್ಲಿ ಆದ ವಿಷಯವನ್ನು ತಿಳಿಸಿದ್ದಾರೆ. ಹಾಗೇ, ವಿಮಾನ ಲ್ಯಾಂಡ್ ಆಗುವ ವೇಳೆ ಭದ್ರತಾ ಸಿಬ್ಬಂದಿಯನ್ನು ಅಲರ್ಟ್ ಮಾಡಿರುವಂತೆಯೂ ಮನವಿ ಮಾಡಿದ್ದರು. ಅದರಂತೆ ಮುಂಬಯಿ ವಿಮಾನ ನಿಲ್ದಾಣ ತಲುಪುತ್ತಿದ್ದಂತೆ ರಾಮ್ ಸಿಂಗ್ ನನ್ನು ಬಂಧಿಸಿ ಸ್ಥಳೀಯ ಪೊಲೀಸ್ ಸ್ಟೇಶನ್ ಗೆ ಕರೆದೊಯ್ಯಲಾಗಿದೆ.
ಇದನ್ನೂ ಓದಿ: Air India: ಏರ್ ಇಂಡಿಯಾ ವಿಮಾನದಲ್ಲಿ ಧೂಮಪಾನ, ಗಲಾಟೆ; ಪ್ರಯಾಣಿಕನ ಕೈಕಾಲು ಕಟ್ಟಿ ಕೂರಿಸಿದ ಸಿಬ್ಬಂದಿ
ಏರ್ ಇಂಡಿಯಾ ವಿಮಾನದಲ್ಲಿ ಇದು ಮೊದಲೇನೂ ಅಲ್ಲ. ಶಂಕರ್ ಮಿಶ್ರಾ ಎಂಬಾತ ಮದ್ಯಪಾನ ಮಾಡಿ, ತನ್ನ ಸಹಪ್ರಯಾಣಿಕಳಾದ ಹಿರಿಯ ವಯಸ್ಸಿನ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದ ಪ್ರಕರಣ ದೊಡ್ಡ ಸುದ್ದಿಯಾಗಿತ್ತು. ಅದಾದ ಮೇಲೆ ಇನ್ನೊಬ್ಬ ಪ್ರಯಾಣಿಕ ಕೂಡ ಕುಡಿದ ಅಮಲಲ್ಲಿ ಪಕ್ಕದ ಸೀಟ್ ನಲ್ಲಿ ಇದ್ದ ಮಹಿಳೆಯೊಬ್ಬರ ಬ್ಲಾಂಕೆಟ್ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಹಾಗೇ, ವಿದ್ಯಾರ್ಥಿಯೊಬ್ಬ ಕಂಠಪೂರ್ತಿ ಕುಡಿದು, ತನ್ನದೇ ಸೀಟ್ನಲ್ಲಿ ಮೂತ್ರ ವಿಸರ್ಜಿಸಿಕೊಂಡಿದ್ದ ಘಟನೆಯೂ ನಡೆದಿತ್ತು. ಮಾರ್ಚ್ನಲ್ಲಿ ಇಂಡಿಗೊ ವಿಮಾನದಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು. ಅಸ್ಸಾಂನ ಗುವಾಹಟಿಯಿಂದ ದೆಹಲಿಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬ ಕುಡಿದು ವಾಂತಿ-ಮಲವಿಸರ್ಜನೆ ಮಾಡಿದ್ದ. ಅವನು ಮಾಡಿದ ಗಲೀಜನ್ನು ಆ ವಿಮಾನದ ಪರಿಚಾರಕಿಯೊಬ್ಬರು ಸ್ವಚ್ಛಗೊಳಿಸಿದ್ದರು.