ಗುಂಟೂರು: ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ ರಚನೆ ಸಂಬಂಧ ಆಡಳಿತ ಪಕ್ಷ ವೈಎಸ್ಆರ್ಸಿಪಿ ಮತ್ತು ಜನಸೇನಾ ಪಕ್ಷದ ಮಧ್ಯೆ ಸಂಘರ್ಷವೇ ನಡೆಯುತ್ತಿದೆ. ಇತ್ತೀಚೆಗೆಷ್ಟೇ ವಿಶಾಖಪಟ್ಟಣದಲ್ಲಿ ಬೃಹತ್ ಸಮಾವೇಶ ನಡೆಸಿದ್ದ ವೈಎಸ್ಆರ್ ಕಾಂಗ್ರೆಸ್ ಪಕ್ಷ, ಜನಸೇನಾ ಪಕ್ಷ ಮತ್ತು ಅದರ ಮುಖ್ಯಸ್ಥ, ನಟ ಪವನ್ ಕಲ್ಯಾಣ್ರನ್ನು ತೀವ್ರವಾಗಿ ಟೀಕಿಸಿತ್ತು. ಅದಕ್ಕೀಗ ಪವನ್ ಕಲ್ಯಾಣ್ ಖಡಕ್ ತಿರುಗೇಟು ನೀಡಿದ್ದಾರೆ.
ಇಂದು ಗುಂಟೂರಿನ ಮಂಗಲಗಿರಿಯಲ್ಲಿರುವ ಜನಸೇನಾ ಪಾರ್ಟಿ ಪ್ರಧಾನ ಕಚೇರಿ ಬಳಿ, ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ‘ನನ್ನನ್ನು ಯಾರಾದರೂ ಪ್ಯಾಕೇಜಿಂಗ್ ಸ್ಟಾರ್ ಎಂದು ಕರೆದರೆ, ಇಲ್ಲ ಸಲ್ಲದ ನಿಂದನೆ ಮಾಡಿದರೆ, ಅವರಿಗೆ ಚಪ್ಪಲಿಯಲ್ಲಿ ಸರಿಯಾಗಿ ಹೊಡೆಯುತ್ತೇನೆ’ ಎಂದು ಹೇಳಿದ್ದಾರೆ. ಅವರು ಹೇಳಿದ್ದಷ್ಟೇ ಅಲ್ಲ, ಭಾಷಣ ಮಾಡುತ್ತ ಮಾಡುತ್ತ, ತಮ್ಮ ಒಂದು ಕಾಲಿನ ಚಪ್ಪಲಿ ತೆಗೆದು ಕೈಯಲ್ಲಿ ಹಿಡಿದುಕೊಂಡು, ಅದನ್ನು ಪ್ರದರ್ಶಿಸಿದ್ದಾರೆ. ಪವನ್ ಕಲ್ಯಾಣ್ ಹೀಗೆ ಹೇಳುತ್ತಿದ್ದಂತೆ ಅವರ ಬೆಂಬಲಿಗರೆಲ್ಲ ದೊಡ್ಡದಾಗಿ ಘೋಷಣೆ ಕೂಗಿ, ಸಂತೋಷ ವ್ಯಕ್ತಪಡಿಸಿದ್ದಾರೆ.
ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ ರಚಿಸಲು ಒಪ್ಪದ ಪವನ್ ಕಲ್ಯಾಣ್ ವಿರುದ್ಧ ಕಟುವಾಗಿ ಟೀಕಿಸಿದ್ದ ವೈಎಸ್ಆರ್ ಕಾಂಗ್ರೆಸ್ ಸಚಿವರು, ಶಾಸಕರು ಒಂದೇ ಸಮ ಪವನ್ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಪವನ್ ಕಲ್ಯಾಣ್ ಆದಾಯದ ಬಗ್ಗೆಯೂ ಮಾತನಾಡಿ, ಅವರೊಬ್ಬ ಪ್ಯಾಕೇಜ್ ಸ್ಟಾರ್ ಎಂದು ವ್ಯಂಗ್ಯ ಮಾಡಿದ್ದರು. ಈಗ ಆ ಮಾತುಗಳ ವಿರುದ್ಧ ಪವನ್ ಕಲ್ಯಾಣ್ ಸಿಡಿದೆದ್ದಿದ್ದಾರೆ.
‘ನಾನೊಂದು ಸ್ಕಾರ್ಪಿಯೋ ಕಾರು ತಂದರೆ, ಅದನ್ನು ಯಾರೋ ಸ್ಪಾನ್ಸರ್ ಮಾಡಿದ್ದಾರೆ ಎಂದು ವೈಎಸ್ಆರ್ ಕಾಂಗ್ರೆಸ್ನವರು ಹಂಗಿಸುತ್ತಾರೆ. ಈ ಎಂಟು ವರ್ಷಗಳಲ್ಲಿ ಸಿನಿಮಾ ಮಾಡಿ ನಾನು ಗಳಿಸಿದ್ದೆಷ್ಟು ಎಂದು ಅವರಿಗೇನಾದರೂ ಗೊತ್ತಿದೆಯಾ? ನಾನು ಆರು ಸಿನಿಮಾಗಳಲ್ಲಿ ನಟಿಸಿದ್ದೇನೆ ಮತ್ತು ಅದರಿಂದಲೇ 100 ರಿಂದ 120 ಕೋಟಿ ರೂಪಾಯಿ ಗಳಿಸಿದ್ದೇನೆ. 33.27 ಕೋಟಿ ರೂಪಾಯಿಗೂ ಅಧಿಕ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದೇನೆ. ನನ್ನ ಮಕ್ಕಳ ಹೆಸರಲ್ಲಿ ಇಟ್ಟಿದ್ದ ನಿಶ್ಚಿತ ಠೇವಣಿ (Fixed Deposits)ಯನ್ನು ಹಿಂಪಡೆದು, ಆ ಹಣದಲ್ಲಿ ನಮ್ಮ ಜನಸೇನಾ ಪಕ್ಷದ ಕಚೇರಿಯನ್ನು ನಿರ್ಮಿಸಿದ್ದೇನೆ. ವಿವಿಧ ಸಂಘ-ಸಂಸ್ಥೆಗಳೀಗೆ 12 ಕೋಟಿ ರೂ.ಗಳಷ್ಟು ದೇಣಿಗೆ ನೀಡಿದ್ದೇನೆ’ ಎಂದು ತಮ್ಮ ಆದಾಯ ಮತ್ತು ಖರ್ಚಿನ ಬಗ್ಗೆ ಪವನ್ ಕಲ್ಯಾಣ್ ಮಾಹಿತಿ ನೀಡಿದರು. ಹಾಗೇ, ವೈಎಸ್ಆರ್ಸಿ ಪಕ್ಷದ ನಾಯಕರನ್ನು ರೌಡಿಗಳು, ಗೂಂಡಾಗಳು ಎಂದು ಹೇಳಿದರು.
ವಿಶಾಖಪಟ್ಟಣದಲ್ಲಿ ವೈಎಸ್ಆರ್ಸಿ ಪಕ್ಷ ನಡೆಸಿದ್ದ ಬೃಹತ್ ಸಮಾವೇಶದಲ್ಲಿ ಸಚಿವೆ ರೋಜಾ ಸೇರಿ ಹಲವರು ಪವನ್ ಕಲ್ಯಾಣ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದರಿಂದ ಆಕ್ರೋಶಗೊಂಡ ಪವನ್ ಕಲ್ಯಾಣ್ ಬೆಂಬಲಿಗರು ವಿಶಾಖಪಟ್ಟಣ ಏರ್ಪೋರ್ಟ್ನಲ್ಲಿ ರೋಜಾ ವಾಹನದ ಮೇಲೆ ಆಕ್ರಮಣ ಮಾಡಿದ್ದರು. ಈ ವಿಚಾರದಲ್ಲಿ ಸ್ಪಷ್ಟನೆ ಕೋರಿ ವಿಶಾಖಪಟ್ಟಣ ಪೊಲೀಸರು ನಟ ಪವನ್ ಕಲ್ಯಾಣ್ಗೆ ನೋಟಿಸ್ ನೀಡಿದ್ದಾರೆ.
ಇದನ್ನೂ ಓದಿ: ಆಂಧ್ರಪ್ರದೇಶದ ಸಚಿವೆ ರೋಜಾ ವಿರುದ್ಧ ನಟ ಪವನ್ ಕಲ್ಯಾಣ್ ಬೆಂಬಲಿಗರ ಆಕ್ರೋಶ; ಕಾರಿನ ಮೇಲೆ ದಾಳಿ