ಉತ್ತರಾಖಂಡ್ನ ಹರಿದ್ವಾರಲ್ಲಿ ಇಂದು ಮುಂಜಾನೆ ಅರಳಿಮರ (ಅಶ್ವತ್ಥ ಮರ)ವೊಂದು ಬಿದ್ದು ಇಬ್ಬರ ಪ್ರಾಣ ಹೋಗಿದೆ (Peepal Tree Falls). ಹಲವರು ಗಾಯಗೊಂಡಿದ್ದಾರೆ. ಅಶ್ವತ್ಥ ವೃಕ್ಷ 200ಕ್ಕೂ ಹೆಚ್ಚು ವರ್ಷ ಹಳೇದಾಗಿದೆ. ಹರಿದ್ವಾರದಲ್ಲಿ ಕೆಲವು ದಿನಗಳಿಂದಲೂ ಗಾಳಿ-ಮಳೆ ರಭಸ ಹೆಚ್ಚಿರುವ ಕಾರಣ ಮರ ಮುರಿದುಬಿದ್ದಿದೆ ಎಂದು ವರದಿಯಾಗಿದೆ. ಹರಿದ್ವಾರದ ಜ್ವಾಲಾಪುರ ಏರಿಯಾದಲ್ಲಿ ಅನ್ಸಾರಿ ಮಾರ್ಕೆಟ್ ಬಳಿ ಘಟನೆ ನಡೆದಿದೆ. ಮೃತರಾದ ಇಬ್ಬರಲ್ಲಿ ಒಬ್ಬರು ಹರ್ಯಾಣದ ಸೋನಿಪತ್ನಿಂದ ಹರಿದ್ವಾರಕ್ಕೆ ಬಂದಿದ್ದ ಪ್ರವಾಸಿಗ ಎನ್ನಲಾಗಿದೆ.
ಬೃಹದಾಕಾರದ ಅಶ್ವತ್ಥ ಮರ ಬಿದ್ದು ಅವಘಡ ಉಂಟಾಗುತ್ತಿದ್ದಂತೆ ಪೊಲೀಸರು, ಸ್ಥಳೀಯ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಮರ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಮರದಡಿಗೆ ಸಿಲುಕಿದ್ದ ಎಲ್ಲರನ್ನೂ ರಕ್ಷಿಸಿ, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಬಗ್ಗೆ ಹೇಳಿಕೆ ನೀಡಿದ ಹರಿದ್ವಾರ ಎಸ್ಎಸ್ಪಿ ಅಜಯ್ ಸಿಂಗ್ ‘200 ವರ್ಷ ಹಳೇದಾದ ಅಶತ್ಥ ಮರ ಉರುಳಿಬಿತ್ತು. ಅದರಡಿಯಲ್ಲಿ ಸಿಲುಕಿದವರಲ್ಲಿ ನಾಲ್ವರಿಗೆ ಹೆಚ್ಚಿನ ಗಾಯವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.
ಹಿಂದೂ ಧರ್ಮದಲ್ಲಿ ಅರಳಿ ಮರ ಅಥವಾ ಅಶ್ವತ್ಥ ಮರಕ್ಕೆ ಅಪಾರ ಮನ್ನಣೆ ಇದೆ. ಅದನ್ನು ದೇವರೆಂದೇ ಪೂಜಿಸುತ್ತಾರೆ. ಕಷ್ಟ ನಿವಾರಣೆ, ಆರೋಗ್ಯ, ಸಂತಾನ ಪ್ರಾಪ್ತಿಗಾಗಿ ಈ ಮರ ಪೂಜಿಸುತ್ತಾರೆ. ಇನ್ನು ಇದರ ತೊಗಟೆಯನ್ನು ಔಷಧಿಗಾಗಿ, ಎಲೆಗಳನ್ನು ಹೋಮ-ಹವನಗಳಲ್ಲಿ ಬಳಕೆ ಮಾಡುತ್ತಾರೆ. ಹೀಗಾಗಿ ಅಶ್ವತ್ಥ ಮರಗಳು ಎಷ್ಟೇ ಹಳೆಯದಾದರೂ ಅದನ್ನು ಕಡಿಯಲು ಯಾರೂ ಮುಂದಾಗುವುದಿಲ್ಲ. ನೂರಾರು ವರ್ಷ ಬದುಕುವ ಆ ಮರಗಳು ಸಾಮಾನ್ಯವಾಗಿ ಊರ ಮಧ್ಯೆಯೋ, ದೇಗುಲದ ಬಳಿಯೋ ಇದ್ದೇ ಇರುತ್ತವೆ. ಆ ಮರಗಳು ತಾನಾಗೇ ಬಿದ್ದಾಗ ಹೀಗೆ ಹಾನಿಗಳು ಕಟ್ಟಿಟ್ಟಬುತ್ತಿ ಎಂಬಂತಾಗಿದೆ.
ಇದನ್ನೂ ಓದಿ: Rain News: ಸಿಡಿಲಿಗೆ ಸುಟ್ಟು ಕರಕಲಾದ ಬಾಳೆತೋಟ; ಮರ ಬಿದ್ದು ಹೋಟೆಲ್ ಧ್ವಂಸ