ದೆಹಲಿಯಲ್ಲಿ ವಿಪರೀತ ಮಳೆ-ಯಮುನಾ ನದಿಯ ಪ್ರವಾಹದ (Delhi Flood) ಮಧ್ಯೆ ರಸ್ತೆಗಳಲ್ಲಿ ಜನರ ಓಡಾಟ-ವಾಹನ ಸಂಚಾರವೇ ಕಷ್ಟವಾಗಿದೆ. ಅದರ ಮಧ್ಯೆ ಇನ್ನೊಂದು ಸಮಸ್ಯೆ ಶುರುವಾಗಿದೆ. ದೆಹಲಿಯ ಹಲವು ಕಡೆಗಳಲ್ಲಿ ಕೆಟ್ಟು ನಿಂತಿರುವ ವಿದ್ಯುತ್ ಕಂಬಗಳು ಯಮಸ್ವರೂಪಿಯಾಗಿ ಕಾಡುತ್ತಿವೆ. ಹರಿದು ಬಿದ್ದ ವೈಯರ್ಗಳಲ್ಲಿ ಪ್ರವಹಿಸುತ್ತಿರುವ ವಿದ್ಯುತ್ನಿಂದಾಗಿ ಜನರು ರಸ್ತೆಗೆ ಕಾಲಿಡಲು ಭಯಪಡುವಂತಾಗಿದೆ. ವಿದ್ಯುತ್ ಶಾಕ್ಗೆ ಒಳಗಾಗುತ್ತಿದ್ದಾರೆ. ಈಗಾಗಲೇ ಒಂದಿಬ್ಬರ ಪ್ರಾಣವೂ ಹೋಗಿದೆ.
ಅದರಲ್ಲೂ ದೆಹಲಿಯ ಆದಾಯ ತೆರಿಗೆ ಕಚೇರಿ (ITO) ಬಳಿಯಂತೂ ಹಲವು ವಿದ್ಯುತ್ ಕಂಬಗಳು ಹಾಳಾಗಿ ನಿಂತಿವೆ. ವೈಯರ್ಗಳು ಜೋತು ಬಿದ್ದು, ಅದರಲ್ಲಿ ಕರೆಂಟ್ ಪಾಸ್ ಆಗುತ್ತಿದೆ. ಆ ಮಾರ್ಗದಲ್ಲಿ ನಡೆದಾಡುವ ಜನ ನೀರಿರುವ ರಸ್ತೆಯಲ್ಲಿ ಕಾಲಿಡುತ್ತಿದ್ದಂತೆ ಶಾಕ್ಗೆ ಒಳಗಾಗುತ್ತಿದ್ದಾರೆ. ಹೀಗಾಗಿ ರಸ್ತೆ ಮೇಲೆ ಹೆಜ್ಜೆ ಇಡಲು ಭಯಪಡುತ್ತಿದ್ದಾರೆ. ಸುತ್ತಿಬಳಸಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಕಳೆದ ತಿಂಗಳು ದೆಹಲಿಯಲ್ಲಿ ಹೀಗೆ ಜೋರಾದ ಮಳೆ ಮಧ್ಯೆ ರೈಲ್ವೆ ಸ್ಟೇಶನ್ ಬಳಿ 34 ವರ್ಷದ ಮಹಿಳೆಯೊಬ್ಬರು ವಿದ್ಯುತ್ ಕಂಬ ಹಿಡಿದುಕೊಂಡ ಕೂಡಲೇ ಶಾಕ್ಗೆ ಒಳಗಾಗಿ ಮೃತಪಟ್ಟಿದ್ದಳು. ಇತ್ತೀಚೆಗೆ 17ವರ್ಷದ ಯುವಕನೊಬ್ಬ ನೀರು ತುಂಬಿದ ರಸ್ತೆ ಮಧ್ಯೆ ನಡೆದುಕೊಂಡು ಹೋಗುತ್ತಿದ್ದಾಗ ಶಾಕ್ ಹೊಡೆದು ಸತ್ತಿದ್ದ. ಇದಕ್ಕೆ ಕಾರಣ ವಿದ್ಯುತ್ ಕಂಬದಿಂದ ಹರಿದು ಬಿದ್ದ ವೈಯರ್ ಆಗಿತ್ತು.
ಇದನ್ನೂ ಓದಿ: Delhi Rain: ದೆಹಲಿಯಲ್ಲಿ ಇಂದೂ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ
ಹೀಗೆ ಕೆಟ್ಟು ನಿಂತ ವಿದ್ಯುತ್ ಕಂಬ, ಜೋತು ಬಿದ್ದ ವೈಯರ್ಗಳಿಂದ ಉಂಟಾಗುತ್ತಿರುವ ಸಾವು-ನೋವನ್ನು ದೆಹಲಿ ಮಾನವ ಹಕ್ಕುಗಳ ಆಯೋಗ ಗಂಭೀರವಾಗಿ ಪರಿಗಣಿಸಿದೆ. ಕೆಟ್ಟು ನಿಂತಿರುವ ವಿದ್ಯುತ್ ಕಂಬಗಳಿಗೆ ವಿದ್ಯುತ್ ಸಂಪರ್ಕವನ್ನು ಇನ್ನೂ ಯಾಕೆ ಕಡಿತಗೊಳಿಸಿಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅದಾದ ಬೆನ್ನಲ್ಲೇ ಕೆಲವು ಕಡೆಗಳಲ್ಲಿರುವ ಹಾಳಾದ ವಿದ್ಯುತ್ ಕಂಬದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎನ್ನಲಾಗಿದೆ.