ನೊಯ್ಡಾದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕುನಾಯಿಗಳ ದಾಳಿ ಹೆಚ್ಚುತ್ತಿದೆ. ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾದಲ್ಲಿ ಸೆಕ್ಯೂರಿಟಿ ಗಾರ್ಡ್ವೊಬ್ಬರಿಗೆ, ಮನೆಯೊಂದರಲ್ಲಿ ಸಾಕಿದ ನಾಯಿ ಕಚ್ಚಿತ್ತು. ಬೀದಿ ನಾಯಿಗಳು ಬಿಡಿ, ಒಬ್ಬರ ಮನೆಯಲ್ಲಿ ಸಾಕಿದ ನಾಯಿ, ಇನ್ನೊಂದು ಮನೆಯವರನ್ನು ಕಚ್ಚುವುದು, ದಾರಿ ಹೋಕರ ಮೇಲೆ ದಾಳಿಮಾಡುವುದೆಲ್ಲ ಇಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ನೊಯ್ಡಾ ಆಡಳಿತ ಅಲ್ಲಿ ನಾಯಿ-ಬೆಕ್ಕು ಸಾಕುವ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ತಂದಿದೆ.
‘ಯಾರೇ ಸಾಕಿದ ನಾಯಿ-ಬೆಕ್ಕುಗಳು ಇನ್ನೊಬ್ಬರ ಮೇಲೆ ದಾಳಿ ಮಾಡುವುದು, ಕಚ್ಚುವುದು ಮಾಡಿದರೆ, ಅವುಗಳ ಮಾಲೀಕರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಲು ನೊಯ್ಡಾ ಪ್ರಾಧಿಕಾರದ ಸಿಇಒ ರಿತು ಮಹೇಶ್ವರಿ ನಿರ್ಧರಿಸಿದ್ದಾರೆ. ಮನುಷ್ಯರ ಮೇಲೆ ಅಷ್ಟೇ ಅಲ್ಲ, ಸಾಕು ನಾಯಿಗಳು ಇನ್ನೊಬ್ಬರ ಮನೆಯ ಪ್ರಾಣಿಗಳ ಮೇಲೆ ದಾಳಿ ಮಾಡಿದರೂ ದಂಡ ತುಂಬ ಬೇಕಾಗಿದೆ. ಬರೀ ಇಷ್ಟೇ ಅಲ್ಲ, ‘ಸಾಕಿದ ನಾಯಿ-ಬೆಕ್ಕುಗಳ ದಾಳಿಯಿಂದ ಗಾಯಗೊಂಡವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನೂ ಮಾಲೀಕರು ಭರಿಸಬೇಕು’ ಎಂದೂ ಅವರು ಹೇಳಿದ್ದಾರೆ.
ನಾಯಿ-ಬೆಕ್ಕುಗಳಂತ ಪ್ರಾಣಿಗಳನ್ನು ಸಾಕಲು ಸ್ಥಳೀಯ ಆಡಳಿತದಲ್ಲಿ ನೋಂದಾಯಿಸಿಕೊಳ್ಳಬೇಕು ಎಂಬ ನಿಯಮವಿದ್ದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆದರೆ ನೊಯ್ಡಾದಲ್ಲಿ ಈ ನಿಯಮವನ್ನೂ ಕಠಿಣಗೊಳಿಸಿದ್ದಾರೆ. ಯಾರೆಲ್ಲ ಪ್ರಾಣಿಗಳನ್ನು ಸಾಕುತ್ತಿದ್ದಾರೋ ಅವರು 2023ರ ಜನವರಿ 31ರೊಳಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಈ ನಿಯಮ ಮೀರಿದರೂ 10 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ನೊಯ್ಡಾ ಪ್ರಾಧಿಕಾರ ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿದ ನೊಯ್ಡಾ ಪ್ರಾಧಿಕಾರದ ಸಿಇಒ ರಿತು ಮಹೇಶ್ವರಿ, ‘ಹೊಸ ಓಖ್ಲಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (NOIDA)ದ 207ನೇ ಬೋರ್ಡ್ ಮೀಟಿಂಗ್ನಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದೇವೆ. ಅದರಲ್ಲಿ ಬೀಡಾಡಿ/ಸಾಕು ನಾಯಿಗಳು ಮತ್ತು ಬೆಕ್ಕುಗಳಿಗೆ ಸಂಬಂಧಪಟ್ಟ ನಿಯಮಗಳನ್ನು ಕಠಿಣಗೊಳಿಸಲಾಗಿದೆ. ಸಾಕು ನಾಯಿ/ಬೆಕ್ಕುಗಳಿಂದ ಯಾವುದೇ ರೀತಿಯ ಅವಾಂತರ/ ಬೇರೆಯವರಿಗೆ ತೊಂದರೆ ಆದರೂ ಅದರ ಮಾಲೀಕರು 10 ಸಾವಿರ ರೂ.ದಂಡ ತುಂಬಬೇಕು. ಈ ನಿಯಮ 2023ರ ಜನವರಿ 31ರಿಂದ ಕಡ್ಡಾಯವಾಗಿ ಜಾರಿಯಲ್ಲಿ ಬರುತ್ತದೆ’ ಎಂದಿದ್ದಾರೆ. ಹಾಗೇ, ಬೀದಿ ನಾಯಿಗಳ ಹಾವಳಿ ತಡೆಯಲೂ ಕೆಲವು ಕ್ರಮಗಳನ್ನು ಕೈಗೊಂಡಿದ್ದಾಗಿ ಹೇಳಿದ್ದಾರೆ. ಆ್ಯಂಟಿ ರೇಬಿಸ್ ಲಸಿಕೆಗಳನ್ನು ಕಡ್ಡಾಯವಾಗಿ ಹಾಕಲು ಮಾಲೀಕರಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಬೀದಿ ನಾಯಿಗಳಿಗೆ ಆಹಾರ ಹಾಕುವವರು, ಅದು ಕಚ್ಚಿದವರ ಚಿಕಿತ್ಸಾ ವೆಚ್ಚವನ್ನೂ ಭರಿಸಲಿ: ಸುಪ್ರೀಂಕೋರ್ಟ್