ನವ ದೆಹಲಿ: ಸೆಪ್ಟೆಂಬರ್ 22ರಂದು ರಾಷ್ಟ್ರಾದ್ಯಂತ 15ಕ್ಕೂ ಹೆಚ್ಚು ರಾಜ್ಯಗಳಲ್ಲಿನ ಪಿಎಫ್ಐ ನಾಯಕರ ಕಚೇರಿಗಳು, ಮನೆಗಳ ಮೇಲೆ ಎನ್ಐಎ ಮತ್ತು ಇಡಿ (ರಾಷ್ಟ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ) ದಾಳಿ ನಡೆಸಿ, ಹಲವು ದಾಖಲೆಗಳನ್ನು ವಶಪಡಿಸಿಕೊಂಡಿವೆ. ಈ ದಾಳಿಗಳಿಗೆ ಸಂಬಂಧಪಟ್ಟ ವರದಿಯನ್ನು ಎನ್ಐಎ ಮತ್ತು ಇ ಡಿ ತನಿಖಾದಳಗಳು ವಿವಿಧ ಕೋರ್ಟ್ಗಳಿಗೆ ಸಲ್ಲಿಸಿವೆ.
‘ಭಯೋತ್ಪಾದನಾ ಕೃತ್ಯಗಳ ಮೂಲಕ ಹಿಂಸಾತ್ಮಕ ಸ್ವರೂಪದ ಜಿಹಾದ್ ನಡೆಸಿ ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸಲು ಪಿತೂರಿ ನಡೆಸುವುದು, ವಿವಿಧ ಗುಂಪುಗಳು, ಸಮುದಾಯದ ಮಧ್ಯೆ ದ್ವೇಷ ಹಬ್ಬಿಸುವುದು, ಲಷ್ಕರೆ ತೊಯ್ಬಾ, ಐಸಿಸ್, ಅಲ್ ಕಾಯಿದಾಗಳಂಥ ಉಗ್ರ ಸಂಘಟನೆಗೆ ಭಾರತದ ಹೆಚ್ಚೆಚ್ಚು ಮುಸ್ಲಿಂ ಯುವಕರು ಸೇರ್ಪಡೆಗೊಳ್ಳುವಂತೆ ಪ್ರಚೋದಿಸುವುದು, ಭೂಗತ ಮೂಲಗಳ ಮೂಲಕ ಹಣ ಸಂಗ್ರಹಣೆ ಮಾಡಿ ಉಗ್ರಕೃತ್ಯಗಳಿಗೆ ನೆರವು ನೀಡುವ ಕೆಲಸಗಳನ್ನು ಪಿಎಫ್ಐ ಮಾಡುತ್ತಿದೆ’ ಎಂಬುದನ್ನು ತನಿಖಾದಳಗಳು ಈ ವರದಿಯಲ್ಲಿ ಉಲ್ಲೇಖಿಸಿವೆ. ಅಷ್ಟೇ ಅಲ್ಲ, ‘ಪಿಎಫ್ಐ ಬಳಿ ಒಂದು ಹಿಟ್ ಲಿಸ್ಟ್ ಇದೆ. ಅದರಲ್ಲಿ ನಿರ್ದಿಷ್ಟ ಸಮುದಾಯದ ಪ್ರಮುಖ ನಾಯಕರ ಹೆಸರೆಲ್ಲ ಇದೆ ಎಂಬುದನ್ನು ನಮಗೆ ರೇಡ್ ವೇಳೆ ಸಿಕ್ಕ ಹಲವು ದಾಖಲೆಗಳು ಸಾಕ್ಷೀಕರಿಸಿವೆ’ ಎಂದೂ ಎನ್ಐಎ ತಿಳಿಸಿದೆ.
ಇತ್ತೀಚೆಗೆ ಹಲವು ಕೋಮುಗಲಭೆಗಳು, ಹತ್ಯೆ ಪ್ರಕರಣಗಳಲ್ಲಿ ಪಿಎಫ್ಐ ಹೆಸರು ಕೇಳಿಬಂದಿತ್ತು. ಅದರ ಬೆನ್ನಲ್ಲೇ ಎನ್ಐಎ, ಇಡಿ ದಾಳಿ ನಡೆದಿತ್ತು. ಸೆಪ್ಟೆಂಬರ್ 21ರ ತಡರಾತ್ರಿ 3ಗಂಟೆಯಿಂದ, 22ರ ಮಧ್ಯಾಹ್ನ 2ಗಂಟೆವರೆಗೆ ದೇಶದ ವಿವಿಧ ರಾಜ್ಯಗಳ 93 ಪ್ರದೇಶಗಳ ಮೇಲೆ ರೇಡ್ ನಡೆದಿತ್ತು. ಇವೆರಡೂ ತನಿಖಾದಳಗಳ 300 ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು. ಪಿಎಫ್ಐನ ಉನ್ನತ ಮುಖಂಡರನ್ನೂ ಬಂಧಿಸಿ ಕರೆದುಕೊಂಡುಹೋಗಿದ್ದಾರೆ. ಅವರ ವಿಚಾರಣೆಯೂ ನಡೆಯುತ್ತಿದೆ. ಇದೀಗ ತನಿಖಾದಳಗಳು ಕೋರ್ಟ್ಗೆ ಸಲ್ಲಿಸಿದ ವರದಿಯಲ್ಲಿನ ಅಂಶಗಳು ಆತಂಕಕಾರಿ ಎನಿಸಿವೆ.
ಇದನ್ನೂ ಓದಿ: NIA RAID | PFI ಸಿಮಿಯ ಇನ್ನೊಂದು ರೂಪ, ನಿಷೇಧಕ್ಕೆ ಸಾಕ್ಷ್ಯಗಳ ಸಂಗ್ರಹ ನಡೆಯುತ್ತಿದೆ ಎಂದ ಶೋಭಾ ಕರಂದ್ಲಾಜೆ