Site icon Vistara News

ಪ್ರಧಾನಿ ಮೋದಿ ಬಿಹಾರ ಭೇಟಿ ವೇಳೆ ಪಿಎಫ್​ಐ ಪ್ಲ್ಯಾನ್​ ಏನಿತ್ತು? ಸತ್ಯ ಬಾಯ್ಬಿಟ್ಟ ಬಂಧಿತ ನಾಯಕ !

PFI planned to disturb PM Narendra Modi rally In Bihar

ನವ ದೆಹಲಿ: ಇದೇ ವರ್ಷ ಜುಲೈ 12ರಂದು ಪ್ರಧಾನಿ ನರೇಂದ್ರ ಮೋದಿ ಬಿಹಾರಕ್ಕೆ ಭೇಟಿ ಕೊಟ್ಟಿದ್ದಾಗ ಅವರನ್ನು ಹತ್ಯೆ ಮಾಡಲು ಪಿತೂರಿ ನಡೆದಿತ್ತು. ಮೋದಿಯವರು ಅಲ್ಲಿಗೆ ಆಗಮಿಸುವುದಕ್ಕೂ 15ದಿನಗಳ ಮೊದಲಿನಿಂದಲೂ ಉಗ್ರರು ಬಿಹಾರದ ಪುಲ್ವಾರಿ ಶರೀಫ್​​ನಲ್ಲಿ ತಂಗಿದ್ದರು. ನರೇಂದ್ರ ಮೋದಿ ಹತ್ಯೆ ಪ್ರಕ್ರಿಯೆ ಹೇಗಿರಬೇಕು? ಯೋಜನೆಗಳೆಲ್ಲ ಹೇಗೆ ನಡೆಯಬೇಕು? ಎಂಬ ಕುರಿತು ಅವರಿಗೆಲ್ಲ ಅಲ್ಲಿ ತರಬೇತಿ ನೀಡಲಾಗುತ್ತಿತ್ತು ಎಂಬ ವಿಷಯ ಜುಲೈ 14ರಂದು ಬೆಳಕಿಗೆ ಬಂದಿತ್ತು. ಈ ಉಗ್ರರ ಘಟಕದ ಮೇಲೆ ಬಿಹಾರ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಅರೆಸ್ಟ್ ಮಾಡಿದ್ದರು. ಹಾಗೇ, ಆ ಉಗ್ರ ಘಟಕದಲ್ಲಿ ಇದ್ದ, ಪಿಎಫ್​ಐಗೆ ಸೇರಿದ 25 ಕರಪತ್ರಗಳು, 2047 India Towards Rule of Islamic India (2047ರ ವೇಳೆಗೆ ಭಾರತವನ್ನು ಸಂಪೂರ್ಣವಾಗಿ ಇಸ್ಲಾಮಿಕ್‌ ರಾಷ್ಟ್ರವನ್ನಾಗಿ ಮಾರ್ಪಡಿಸುವುದು)’ ಎಂಬ ತಲೆ ಬರಹ ಇರುವ ದಾಖಲೆಗಳನ್ನೆಲ್ಲ ವಶಪಡಿಸಿಕೊಂಡಿದ್ದರು.

ಅಂದು ಪ್ರಧಾನಿ ಮೋದಿ ಬಿಹಾರಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಪಿಎಫ್​ಐ ಪ್ಲ್ಯಾನ್​ ಏನಿತ್ತು? ಎಂಬುದನ್ನು ಈಗ ಪಿಎಫ್​ಐ ಕಾರ್ಯಕರ್ತ ಶಫೀಕ್ ಪಾಯೆತ್ ಬಾಯ್ಬಿಟ್ಟಿದ್ದಾನೆ. ಸೆಪ್ಟೆಂಬರ್​ 22ರಂದು ದೇಶಾದ್ಯಂತ ಪಿಎಫ್​​ಐಗೆ ಸಂಪರ್ಕ ಇರುವ ಸ್ಥಳಗಳ ಮೇಲೆ ದಾಳಿ ಮಾಡಿದ್ದ ಎನ್​ಐಎ ಪಿಎಫ್​ಐನ ಹಲವು ನಾಯಕರನ್ನು ಬಂಧಿಸಿದೆ. ಹೀಗೆ ಬಂಧಿತರಾದವರಲ್ಲಿ ಒಬ್ಬನಾದ ಶಫೀಕ್​ ಪಾಯೆತ್​, ಅಂದು ಬಿಹಾರದಲ್ಲಿ ತಮ್ಮ ಪಿತೂರಿ ಏನಿತ್ತು ಎಂಬುದನ್ನು ಎನ್​ಐಎ ಎದುರು ಬಾಯ್ಬಿಟ್ಟಿದ್ದಾನೆ. ನರೇಂದ್ರ ಮೋದಿಯವರ ಱಲಿಯನ್ನು ಹಾಳುಮಾಡುವುದು, ದೊಡ್ಡದೊಡ್ಡ ಬ್ಯಾನರ್, ಪೋಸ್ಟರ್​ಗಳನ್ನು ಹಿಡಿದು ಪ್ರತಿಭಟನೆ ನಡೆಸಿ, ಗಲಾಟೆ ಸೃಷ್ಟಿಸುವುದು, ಗಲಭೆ ಹುಟ್ಟುಹಾಕುವುದು ನಮ್ಮ ಪ್ಲ್ಯಾನ್​ ಆಗಿತ್ತು ಎಂಬುದಾಗಿ ತಿಳಿಸಿದ್ದಾನೆ ಎಂದು ತನಿಖಾ ದಳದ ಮೂಲಗಳು ತಿಳಿಸಿವೆ.

ಹಾಗೇ, ಪಿಎಫ್​ಐ ಹಲವು ವರ್ಷಗಳಿಂದಲೂ ವಿವಿಧ ಮೂಲಗಳಿಂದ ಹಣ ಸಂಗ್ರಹ ಮಾಡುತ್ತಿದೆ. ಅದರಲ್ಲೂ ಕಳೆದೊಂದು ವರ್ಷದಲ್ಲಿ ದೇಶದ ವಿವಿಧ ರಾಜ್ಯಗಳು, ವಿದೇಶಗಳಿಂದ 120 ಕೋಟಿ ರೂಪಾಯಿಯಷ್ಟನ್ನು ಅದು ಪಡೆದಿದೆ. ಇವೆಲ್ಲವೂ ಉಗ್ರ ಕೃತ್ಯಗಳಿಗೆ ನೆರವು ನೀಡಲು ಸಂಗ್ರಹಿಸಿದ ಹಣವೇ ಆಗಿದೆ ಎಂದು ಇ ಡಿ. ತಿಳಿಸಿದೆ. ಹಾಗೇ, ತಮ್ಮ ದಾಳಿಯ ವರದಿಯನ್ನು ವಿವಿಧ ಕೋರ್ಟ್​ಗಳಿಗೆ ಸಲ್ಲಿಕೆ ಮಾಡಿರುವ ತನಿಖಾ ದಳಗಳು ‘‘ಭಯೋತ್ಪಾದನಾ ಕೃತ್ಯಗಳ ಮೂಲಕ ಹಿಂಸಾತ್ಮಕ ಸ್ವರೂಪದ ಜಿಹಾದ್​ ನಡೆಸಿ ಇಸ್ಲಾಮಿಕ್​ ಆಳ್ವಿಕೆಯನ್ನು ಸ್ಥಾಪಿಸಲು ಪಿತೂರಿ ನಡೆಸುವುದು, ವಿವಿಧ ಗುಂಪುಗಳು, ಸಮುದಾಯದ ಮಧ್ಯೆ ದ್ವೇಷ ಹಬ್ಬಿಸುವುದು, ಲಷ್ಕರೆ ತೊಯ್ಬಾ, ಐಸಿಸ್​, ಅಲ್​ ಕಾಯಿದಾಗಳಂಥ ಉಗ್ರ ಸಂಘಟನೆಗೆ ಭಾರತದ ಹೆಚ್ಚೆಚ್ಚು ಮುಸ್ಲಿಂ ಯುವಕರು ಸೇರ್ಪಡೆಗೊಳ್ಳುವಂತೆ ಪ್ರಚೋದಿಸುವುದು, ಭೂಗತ ಮೂಲಗಳ ಮೂಲಕ ಹಣ ಸಂಗ್ರಹಣೆ ಮಾಡಿ ಉಗ್ರಕೃತ್ಯಗಳಿಗೆ ನೆರವು ನೀಡುವ ಕೆಲಸಗಳನ್ನು ಪಿಎಫ್​ಐ ಮಾಡುತ್ತಿದೆ’ ಎಂಬುದನ್ನು ಹೇಳಿವೆ.

ಇದನ್ನೂ ಓದಿ: NIA Raid | ಎನ್‌ಐಎ ಬಂಧಿಸಿರುವ ಬೆಂಗಳೂರಿನ ಏಳು ಪಿಎಫ್‌ಐ ಮುಖಂಡರ ಸಂಪೂರ್ಣ ಕ್ರೈಂ ಹಿಸ್ಟರಿ ಇಲ್ಲಿದೆ!

Exit mobile version