ತಿರುವನಂತಪುರಂ: ಸೆಪ್ಟೆಂಬರ್ 22ರಂದು 13 ರಾಜ್ಯಗಳ ಪಿಎಫ್‌ಐ ಮುಖಂಡರ ಮನೆ, ಕಚೇರಿಗಳ ಮೇಲೆ ಎನ್‌ಐಎ ಮತ್ತು ಇ ಡಿ (ರಾಷ್ಟ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ)ಗಳು ದಾಳಿ ಮಾಡಿದ್ದನ್ನು ಖಂಡಿಸಿ ಇಂದು ಮುಂಜಾನೆ 6ಗಂಟೆಯಿಂದ ಕೇರಳದಲ್ಲಿ ಪಿಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಅದೀಗ ಹಿಂಸಾಚಾರಕ್ಕೆ ತಿರುಗಿದೆ. ಪಿಎಫ್‌ಐ ಮುಖಂಡರು-ಕಾರ್ಯಕರ್ತರು ಬಸ್, ಕಾರುಗಳಿಗೆ ಕಲ್ಲು ಹೊಡೆದಿದ್ದಾರೆ, ರಸ್ತೆ ಮಧ್ಯೆ ಟೈಯರ್ಗಳಿಗೆ ಬೆಂಕಿ ಹಚ್ಚಿದ್ದಾರೆ. ಕೊಲ್ಲಂನ ಪಲ್ಲಿಮುಕ್ಕು ಎಂಬಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದು, ಅವರು ಗಾಯಗೊಂಡಿದ್ದಾರೆ.
ಅಲಪ್ಪುಳದಲ್ಲಿ ಪಿಎಫ್‌ಐ ಕಾರ್ಯಕರ್ತರು ನಡೆಸಿದ ಕಲ್ಲು ತೂರಾಟದಿಂದ 15 ವರ್ಷದ ಹುಡುಗಿ ಮತ್ತು ಆಟೋ ಚಾಲಕನೊಬ್ಬ ಗಾಯಗೊಂಡಿದ್ದಾರೆ. ಇಲ್ಲಿ ಕೇರಳ ರಸ್ತೆ ಸಾರಿಗೆ ಬಸ್ ಮತ್ತು ಒಂದು ಟ್ಯಾಂಕರ್ಗೆ ಕೂಡ ಕಲ್ಲು ಎಸೆದಿದ್ದು, ಅದೆರಡೂ ವಾಹನಗಳೂ ಹಾಳಾಗಿವೆ. ಅಲುವಾ ಮತ್ತು ಕೋಯಿಕ್ಕೊಡ್ಗಳಲ್ಲೂ ಬಸ್ಗಳನ್ನು ಧ್ವಂಸ ಮಾಡಿದ್ದಾರೆ. ಕಾರು, ಆಟೋಗಳೆಲ್ಲ ಪಿಎಫ್‌ಐ ಪ್ರತಿಭಟನಾಕಾರರ ಕೈಯಲ್ಲಿ ನುಜ್ಜುಗುಜ್ಜಾಗುತ್ತಿವೆ. ಕೋಯಿಕ್ಕೊಡ್ ಮತ್ತು ಕಣ್ಣೂರುಗಳಲ್ಲೂ ದಾಂಧಲೆ ಎಬ್ಬಿಸಿದ್ದಾರೆ. ಅದರಲ್ಲೂ ಕಣ್ಣೂರಿನ ನಾರಾಯಣಪರದಲ್ಲಿ ಸುದ್ದಿ ಪತ್ರಿಕೆಗಳನ್ನು ವಿತರಿಸಲು ಕೊಂಡೊಯ್ಯುತ್ತಿದ್ದ ವಾಹನವೊಂದರ ಮೇಲೆ ಬಾಂಬ್ ಬಾಂಬ್ ಕೂಡ ಎಸೆಯಲಾಗಿದೆ ಎಂದು ಅಲ್ಲಿನ ಮಾಧ್ಯಮ ಸಿಬ್ಬಂದಿ ವರದಿ ಮಾಡಿದ್ದಾರೆ. ವಯಾನಾಡ್ನಲ್ಲಿ ಟೈಯರ್ಗಳಿಗೆ ಬೆಂಕಿ ಹಚ್ಚಿ, ರಸ್ತೆಯನ್ನು ನಿರ್ಬಂಧಿಸಲಾಗಿದೆ.
ಪಿಎಫ್‌ಐ ಸಂಘಟನೆ ಮುಖಂಡರ ಮೇಲೆ ಎನ್‌ಐಎ ದಾಳಿ ನಡೆಯಲು ಕೇಂದ್ರ ಬಿಜೆಪಿ ಸರ್ಕಾರವೇ ಕಾರಣ ಎಂದು ಆರೋಪಿಸುತ್ತಿರುವ ಪಿಎಫ್‌ಐ ಕಾರ್ಯಕರ್ತರು ಇಂದು ತಮಿಳುನಾಡಿನ ಕೊಯಂಬತ್ತೂರಿನಲ್ಲಿರುವ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಮುಖಂಡರು, ಕಾರ್ಯಕರ್ತರು ಕೂಡ ಪ್ರತಿಭಟನೆಗೆ ಇಳಿದಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಕೇರಳ, ತಮಿಳುನಾಡುಗಳೆಲ್ಲ ಪ್ರತಿಭಟನಾ ವಲಯಗಳಾಗಿ ಮಾರ್ಪಟ್ಟಿವೆ.
ಔಷಧಿ ತರಲು ಹೋಗುತ್ತಿದ್ದವರ ಮೇಲೆ ಹಲ್ಲೆ
ಎನ್‌ಐಎ ದಾಳಿ ಖಂಡಿಸಿ ಸೆಪ್ಟೆಂಬರ್ 22ರಂದು ಕೇರಳ, ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಪಿಎಫ್‌ಐ ಪ್ರತಿಭಟನೆ ನಡೆಸಿತ್ತು. ಅದರ ಮುಂದುವರಿದ ಭಾಗವಾಗಿ ಇಂದು (ಸೆ.23) ಕೇರಳ ಬಂದ್ಗೆ ಕರೆ ಕೊಡಲಾಗಿತ್ತು. ಅದರಂತೆ ಇಂದು ಮುಂಜಾನೆಯಿಂದಲೇ ಪಿಎಫ್‌ಐ ಸಂಘಟನೆ ಸಿಬ್ಬಂದಿ ಬೀದಿಗೆ ಇಳಿದಿದ್ದಾರೆ. ಅಂಗಡಿಗಳನ್ನೆಲ್ಲ ಬಲವಂತವಾಗಿಯೂ ಮುಚ್ಚಿಸುತ್ತಿದ್ದಾರೆ. ಇಂದು ಮುಂಜಾನೆ ಕಾರಿನಲ್ಲಿ ವ್ಯಕ್ತಿಯೊಬ್ಬರು ತಮ್ಮ ಪತ್ನಿಗೆ ಔಷಧಿ ತರಲೆಂದು ಹೋಗುತ್ತಿದ್ದರು. ಅವರ ಕಾರಿನ ಮೇಲೆಯೂ ಕಲ್ಲು ಎಸೆಯಲಾಗಿದೆ. ‘ನನ್ನ ಪತ್ನಿಗೆ ನಾಲ್ಕೈದು ರೀತಿಯ ಮಾತ್ರೆಗಳು ಬೇಕಿತ್ತು. ಹಾಗಾಗಿ ಬೆಳಗ್ಗೆಯೇ ಹೊರಟಿದ್ದೆ, ದಾರಿ ಮಧ್ಯೆ ನನ್ನನ್ನು ತಡೆದ ಪಿಎಫ್‌ಐ ಕಾರ್ಯಕರ್ತರು ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದರು, ಇವತ್ತು ಬಂದ್ ಇದೆ ಗೊತ್ತಿಲ್ಲವಾ? ಎಂದು ಕೂಗಾಡಿದರು ಎಂದೂ ಆ ವ್ಯಕ್ತಿಯೇ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: NIA Raid | ಮುಂಜಾನೆ ದಾಳಿಗೆ ಬೆಚ್ಚಿಬಿದ್ದ ಪಿಎಫ್‌ಐ, ರಾಜ್ಯದ ಏಳು ಮಂದಿ ಎನ್‌ಐಎ ವಶದಲ್ಲಿ, ಮುಂದೇನು?