Site icon Vistara News

Bharat Jodo Yatra | ಕೇರಳದಲ್ಲಿ ರಾಹುಲ್‌ ಯಾತ್ರೆ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದೇಕೆ?

Rahul

ತಿರುವನಂತಪುರಂ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ದೇಶಾದ್ಯಂತ ಕೈಗೊಳ್ಳುತ್ತಿರುವ “ಭಾರತ್‌ ಜೋಡೊ ಯಾತ್ರೆ”ಗೆ (Bharat Jodo Yatra) ಕೇರಳದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಸಾರ್ವಜನಿಕರು, ಮಕ್ಕಳು ಸಹ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ ಜೋಡೊ ಯಾತ್ರೆ ವಿರುದ್ಧ ಕೇರಳ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲಾಗಿದೆ.

“ರಾಹುಲ್‌ ಗಾಂಧಿ ಕೈಗೊಳ್ಳುತ್ತಿರುವ ಭಾರತ್‌ ಜೋಡೊ ಯಾತ್ರೆಯಿಂದ ರಾಜ್ಯದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ನೂರಾರು ಜನರು ಪಾದಯಾತ್ರೆ ಕೈಗೊಳ್ಳುತ್ತಿರುವುದರಿಂದ ವಾಹನ ಸಂಚಾರಕ್ಕೆ ಭಾರಿ ಅಡ್ಡಿಯಾಗುತ್ತಿದೆ. ಹಾಗಾಗಿ, ಯಾತ್ರೆ ಆಯೋಜಕರಿಗೆ ರಸ್ತೆಯ ಒಂದು ಭಾಗ ಮಾತ್ರ ಬಳಸುವಂತೆ ನಿರ್ದೇಶಿಸಬೇಕು. ಇದರಿಂದ ವಾಹನ ಸಂಚಾರಕ್ಕೆ ಅನುಕೂಲವಾಗಲಿದೆ” ಎಂದು ವಕೀಲ ಕೆ.ವಿಜಯನ್‌ ಎಂಬುವರು ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ರಾಹುಲ್‌ ಗಾಂಧಿ ಕೈಗೊಳ್ಳುತ್ತಿರುವ ಭಾರತ್‌ ಜೋಡೊ ಯಾತ್ರೆಯು ೧೨ನೇ ದಿನಕ್ಕೆ ಕಾಲಿಟ್ಟಿದ್ದು, ಸದ್ಯ ಕೇರಳದಲ್ಲಿ ಯಾತ್ರೆ ನಡೆಯುತ್ತಿದೆ. ಇದುವರೆಗೆ ೨೫೫ ಕಿ.ಮೀ ಮಾರ್ಗವನ್ನು ರಾಹುಲ್‌ ಪಾದಯಾತ್ರೆ ಮೂಲಕ ಸಂಚರಿಸಿದ್ದಾರೆ. ಯಾತ್ರೆಯು ಒಟ್ಟು ೧೫೦ ದಿನ ನಡೆಯಲಿದ್ದು, ಒಟ್ಟು ೩,೫೭೦ ಕಿ.ಮೀ ಪಾದಯಾತ್ರೆ ಕೈಗೊಳ್ಳಲಾಗುತ್ತದೆ. ಕೇರಳದಲ್ಲಿ ೧೯ ದಿನ ಯಾತ್ರೆ ನಡೆಯಲಿದ್ದು, ರಾಹುಲ್‌ ಗಾಂಧಿ ೪೫೦ ಕಿ.ಮೀ ನಡೆಯಲಿದ್ದಾರೆ.

ಇದನ್ನೂ ಓದಿ | ಕರ್ನಾಟಕದಲ್ಲಿ ʼಭಾರತ್‌ ಜೋಡೊʼ ಹೆಸರು ಬದಲು: ಅಕ್ಟೋಬರ್‌ 3 ರಿಂದ 21 ದಿನ ಯಾತ್ರೆ

Exit mobile version