Site icon Vistara News

ಸ್ಪೈಸ್‌ ಜೆಟ್‌ ವಿಮಾನದಲ್ಲಿ ಹೊಗೆ ಕಂಡ ಬಳಿಕ ತುರ್ತು ಭೂಸ್ಪರ್ಶ, 2 ತಿಂಗಳಲ್ಲಿ 4ನೇ ಅವಘಡ

spice jet

ನವ ದೆಹಲಿ: ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಪ್ರದೇಶದ ಜಬಲ್ಪುರಕ್ಕೆ ಹೊರಟಿದ್ದ ಸ್ಪೈಸ್‌ ಜೆಟ್‌ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತುರ್ತಾಗಿ ಮರಳಿ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಲಾಗಿದೆ. ಸ್ಪೈಸ್‌ ಜೆಟ್‌ ವಿಮಾನ ಈ ರೀತಿ ಸಮಸ್ಯೆಗೆ ಸಿಲುಕುತ್ತಿರುವುದು ಕಳೆದ ಎರಡು ತಿಂಗಳ ಅವಧಿಯಲ್ಲಿ ಇದು ಮೂರನೇ ಬಾರಿ.

ದಿಲ್ಲಿಯಿಂದ ಹೊರಟ ಈ ವಿಮಾನದಲ್ಲಿ ೫೦ ಪ್ರಯಾಣಿಕರು ಇದ್ದರು. ವಿಮಾನ ಟೇಕಾಫ್‌ ಆಗಿ ಸುಮಾರು ೫೦೦೦ ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಕ್ಯಾಬಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಪ್ರಯಾಣಿಕರು ಆತಂಕದಿಂದ ಹೌಹಾರಿದರು. ಸಿಬ್ಬಂದಿ ತಕ್ಷಣವೇ ವಿಮಾನವನ್ನು ದಿಲ್ಲಿ ವಿಮಾನ ನಿಲ್ದಾಣದ ಕಡೆಗೆ ಹಾರಿಸಿದರು. ದಿಲ್ಲಿ ವಿಮಾನ ನಿಲ್ದಾಣದಲ್ಲೂ ಅಲರ್ಟ್‌ ಮಾಡಿದ್ದರಿಂದ ತುರ್ತಾಗಿ ಇಳಿಯಲು ಅವಕಾಶ ಮಾಡಿಕೊಡಲಾಯಿತು.

ನಿಲ್ದಾಣದಲ್ಲಿ ವಿಮಾನ ನಿಲ್ಲುತ್ತಿದ್ದಂತೆಯೇ ಪ್ರಯಾಣಿಕರು ಧಾವಂತದಿಂದ ಕೆಳಗಿಳಿದರು. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದು, ಯಾವುದೇ ಸಮಸ್ಯೆ ಆಗಿಲ್ಲ ಎಂದು ಸ್ಪೈಸ್‌ ಜೆಟ್‌ ಹೇಳಿಕೊಂಡಿದೆ.

ಪ್ರಯಾಣಿಕರ ಹಿಡಿಶಾಪ
ವಿಮಾನದಲ್ಲಿದ್ದ ಕೆಲವು ಪ್ರಯಾಣಿಕರು ಕ್ಯಾಬಿನ್‌ನಿಂದ ಹೊಗೆ ಬರುವ ದೃಶ್ಯಗಳನ್ನು ಟ್ವೀಟ್‌ ಮಾಡಿದ್ದಾರೆ. ಜತೆಗೆ ಸ್ಪೈಸ್‌ ಜೆಟ್‌ ವಿಮಾನಗಳ ಅವ್ಯವಸ್ಥೆಯ ಬಗ್ಗೆ ಕಿಡಿ ಕಾರಿದ್ದಾರೆ. ವಿಮಾನದಲ್ಲಿದ್ದ ಕೆಲವರಿಗೆ ಉಸಿರುಗಟ್ಟಿದ ಅನುಭವ ಆಗಿರುವುದನ್ನು ಅವರು ವಿವರಿಸಿದ್ದಾರೆ.

ಈ ನಡುವೆ ವಿಮಾನದಲ್ಲಿದ್ದ ಪ್ರಯಾಣಿಕರು ಅಲ್ಲಿರುವ ದಿನ ಪತ್ರಿಕೆ ಮತ್ತು ಮ್ಯಾಗಜಿನ್‌ನನ್ನು ಬಳಸಿ ಗಾಳಿ ಹಾಕಿಕೊಳ್ಳುತ್ತಿರುವ ವಿಡಿಯೊಗಳು ಕೂಡಾ ಹೊರಬಿದ್ದಿವೆ.

ಇದು ನಾಲ್ಕನೇ ಬಾರಿ

ಸ್ಪೈಸ್‌ ಜೆಟ್‌ನಲ್ಲಿ ಈ ರೀತಿ ಅಪಾಯಕ್ಕೆ ಸಿಲುಕುತ್ತಿರುವುದು ಇದು ನಾಲ್ಕನೇ ಬಾರಿ.
– ಜೂನ್‌ ೧೯ರಂದು 185 ಪ್ರಯಾಣಿಕರನ್ನು ಹೊತ್ತು ಪಟನಾದಿಂದ ದಿಲ್ಲಿಗೆ ಹೊರಟಿದ್ದ ವಿಮಾನದಲ್ಲಿ ಟೇಕಾಫ್‌ ಆದ ಕೂಡಲೇ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಅದನ್ನು ಪಟನಾ ವಿಮಾನ ನಿಲ್ದಾಣದಲ್ಲೇ ಇಳಿಸಲಾಯಿತು.
– ಜೂನ್‌ ೨೫ರಂದು ಪಟನಾದಿಂದ ಗುವಾಹಟಿಗೆ ಹೋಗುತ್ತಿದ್ದ ಸ್ಪೈಸ್‌ ಜೆಟ್‌ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಾಗ ಕೂಡಲೇ ವಿಮಾನವನ್ನು ಪಟನಾದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು.
– ಮೇ ೪ರಂದು ಚೆನ್ನೈನಿಂದ ದುರ್ಗಾಪುರಕ್ಕೆ ಹೋಗುತ್ತಿದ್ದ ವಿಮಾನದಲ್ಲಿ ಮಾರ್ಗಮಧ್ಯೆ ಸಮಸ್ಯೆ ಉಂಟಾಗಿದ್ದಿಂದ ಚೆನ್ನೈಗೆ ವಾಪಸ್‌ ಬರಲಾಯಿತು.

ಇದನ್ನೂ ಓದಿ| UAV |ಭಾರತೀಯ ಸೇನೆಯ ಚಾಲಕರಹಿತ ವಿಮಾನ ಚಿತ್ರದುರ್ಗದಲ್ಲಿ ಮೊದಲ ಯಶಸ್ವಿ ಹಾರಾಟ

Exit mobile version