ಆಗ್ರಾ: ಅಯೋಧ್ಯೆ, ವಾರಾಣಸಿಯ ಬಳಿಕ ಇದೀಗ ಜಗತ್ತಿನ ಏಳು ಅಚ್ಚರಿಗಳಲ್ಲಿ ಒಂದಾದ ಆಗ್ರಾದ ತಾಜ್ ಮಹಲ್ ಬಗ್ಗೆ ವಿವಾದದ ಬಿರುಗಾಳಿ ಎದ್ದಿದೆ. ತಾಜ್ ಮಹಲ್ ಮೂಲತಃ ಒಂದು ಶಿವಾಲಯವಾಗಿದ್ದು, ಮೊಘಲ್ ದೊರೆ ಷಹಜಹಾನ್ ತನ್ನ ಆಡಳಿತಾವಧಿಯಲ್ಲಿ ಅದನ್ನು ತನ್ನ ಪ್ರೀತಿಯ ರಾಣಿ ಮುಮ್ತಾಜ್‌ಳ ಹೆಸರಿನಲ್ಲಿ ಸಮಾಧಿಯಾಗಿ ಪರಿವರ್ತಿಸಿದ ಎಂಬ ವಾದದ ಹಿನ್ನೆಲೆಯಲ್ಲಿ ಇತಿಹಾಸದ ಸತ್ಯವನ್ನು ಬಯಲುಗೊಳಿಸಬೇಕೆಂಬ ಬೇಡಿಕೆ ಬಲವಾಗಿದೆ.
ಐತಿಹಾಸಿಕ ಸತ್ಯಗಳಿಗೆ ಸೂಕ್ತ ಸಾಕ್ಷ್ಯಗಳು ತಾಜ್ ಮಹಲ್‌ನ ಒಳಗಿರುವ 22 ಮುಚ್ಚಿದ ಕೋಣೆಗಳ ಒಳಗೆ ಇರಬಹುದು ಎನ್ನುವುದು ಎಲ್ಲರ ಗುಮಾನಿ. ಆದರೆ, ಭಾರತೀಯ ಪ್ರಾಚ್ಯವಸ್ತು ಇಲಾಖೆ ಅದನ್ನು ಮುಚ್ಚಿದೆ. ಈ ಮುಚ್ಚಿದ ಕೋಣೆಗಳನ್ನು ತೆರೆದು ಅಲ್ಲಿ ಏನಿದೆ? ಹಿಂದೂ ದೇವರ ಮೂರ್ತಿಗಳಿವೆಯೇ? ಏನಾದರೂ ಶಾಸನಗಳಿವೆಯೇ ಎನ್ನುವುದರ ತನಿಖೆ ನಡೆಸಲು ಪ್ರಾಚ್ಯ ವಸ್ತು ಇಲಾಖೆ(ಎಎಸ್‌ಐ)ಗೆ ಆದೇಶ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯೊಂದನ್ನು ಸಲ್ಲಿಸಲಾಗಿದೆ.
ಬಿಜೆಪಿಯ ಅಯೋಧ್ಯಾ ಘಟಕದ ಮಾಧ್ಯಮ ಉಸ್ತುವಾರಿಯಾಗಿರುವ ರಜನೀಶ್ ಸಿಂಗ್ ಅವರು ಈ ಪಿಐಎಲ್‌ನ್ನು ಸಲ್ಲಿಸಿದ್ದು, ಅದು ಇನ್ನಷ್ಟೇ ವಿಚಾರಣೆಗೆ ಬರಬೇಕಾಗಿದೆ.
ಪಿಐಎಲ್‌ನಲ್ಲಿ ಏನಿದೆ?
ವಕೀಲರಾದ ರಾಮ್ ಪ್ರಕಾಶ್ ಶುಕ್ಲಾ ಮತ್ತು ರುದ್ರ ವಿಕ್ರಮ್ ಸಿಂಗ್ ಅವರ ಮೂಲಕ ಸಲ್ಲಿಸಲಾದ ದಾವೆಯಲ್ಲಿ, ಹಿಂದೂ ಸಂಘಟನೆಗಳು ತಾಜ್‌ಮಹಲ್ ಮೂಲದಲ್ಲಿ ಒಂದು ಶಿವಾಲಯವಾಗಿತ್ತು ಎಂದು ವಾದಿಸುತ್ತಿರುವುದನ್ನು ಉಲ್ಲೇಖಿಸಲಾಗಿದೆ. ಈ ಬಗ್ಗೆ ಸೂಕ್ತವಾದ ತನಿಖೆಯನ್ನು ನಡೆಸಿ ವಿವಾದಕ್ಕೆ ಅಂತ್ಯ ಹಾಡಬೇಕು ಎಂದು ಮನವಿ ಮಾಡಲಾಗಿದೆ.
ಸತ್ಯಶೋಧನಾ ಸಮಿತಿಗೆ ಬೇಡಿಕೆ
ಪಿಐಎಲ್‌ನಲ್ಲಿರುವ ಪ್ರಮುಖವಾದ ಬೇಡಿಕೆ ಏನೆಂದರೆ, ನಾಲ್ಕು ಮಹಡಿಗಳ ತಾಜ್‌ಮಹಲ್‌ನ ನೆಲ ಮಹಡಿ ಮತ್ತು ಮೇಲಿನ ಮಹಡಿಗಳಲ್ಲಿರುವ 22 ಮುಚ್ಚಿದ ಕೋಣೆಗಳಲ್ಲಿ ಏನಿದೆ ಎನ್ನುವುದನ್ನು ತನಿಖೆ ನಡೆಸಬೇಕು. ಪ್ರಾಚ್ಯ ವಸ್ತು ಇಲಾಖೆ ಈಗ ಅದನ್ನು ಮುಚ್ಚಿದೆ.
ಹಿಂದೂ ಭಕ್ತರು ನಂಬಿರುವ ಪ್ರಕಾರ ಮತ್ತು ಇತಿಹಾಸ ತಜ್ಞ ಪಿ.ಎನ್. ಓಕ್ ಅವರ ಸಂಶೋಧನೆಯ ಪ್ರಕಾರ, ಈ ಮುಚ್ಚಿ ಕೋಣೆಗಳಲ್ಲಿ ತಾಜ್ ಮಹಲ್ ಪೂರ್ವದಲ್ಲಿ ಒಂದು ಶಿವಾಲಯವಾಗಿತ್ತು ಎನ್ನುವುದಕ್ಕೆ ಪೂರಕವಾದ ದಾಖಲೆಗಳಿವೆ. ಈ ಕೋಣೆಗಳನ್ನು ಯಾಕೆ ಮುಚ್ಚಿಟ್ಟಿದ್ದೀರಿ ಎಂದು ಈ ಹಿಂದೆಯೇ ಪ್ರಾಚ್ಯ ವಸ್ತು ಇಲಾಖೆಯನ್ನು ಮಾಹಿತಿ ಹಕ್ಕಿನಡಿ ಕೇಳಲಾಗಿತ್ತು. ಆಗ ಇಲಾಖೆಯು ಭದ್ರತಾ ಕಾರಣಗಳನ್ನು ನೀಡಿತ್ತು ಎಂದು ಪಿಐಎಲ್‌ನಲ್ಲಿ ತಿಳಿಸಲಾಗಿದೆ.
ಮುಚ್ಚಿದ್ದು 45 ವರ್ಷಗಳ ಹಿಂದೆ
ನಿಗೂಢವಾಗಿರುವ ಈ 22 ಕೋಣೆಗಳಿಗೆ 45 ವರ್ಷಗಳ ಹಿಂದಿನವರೆಗೂ ಪ್ರವೇಶ ಇತ್ತು. ಅದಾದ ಬಳಿಕ ಅದನ್ನು ಮುಚ್ಚಲಾಗಿದೆ ಎನ್ನುವುದು ಇತಿಹಾಸ ತಜ್ಞ ರಾಜ್ ಕಿಶೋರ್ ಅಭಿಮತ.
ಅವರ ಪ್ರಕಾರ ಈ ಕಟ್ಟಡವನ್ನು ಷಹಜಹಾನ್ ಕಟ್ಟಿಸಿದ್ದೇ ಅಲ್ಲ. ಇರುವ ಕಟ್ಟಡಕ್ಕೇ ಸಮಾಧಿಯ ರೂಪವನ್ನು ನೀಡಲಾಗಿದೆ. ಈ ಕಟ್ಟಡದ ಮರು ನಿರ್ಮಾಣದ ಸಂದರ್ಭದಲ್ಲೂ ಷಹಜಹಾನ್ ಆಗ್ರಾದಲ್ಲಿ ಇರಲಿಲ್ಲ. ಅವರು ದಕ್ಷಿಣ ಭಾರತದಲ್ಲಿದ್ದ. ನಂತರ ಮುಮ್ತಾಜ್ ಬೇಗಂ ಸಾವನ್ನಪ್ಪಿದ ಬಳಿಕವಷ್ಟೇ ಅದನ್ನು ಅಲ್ಲಿ ತಂದು ದಫನ ಮಾಡಲಾಯಿತು.
ಜೈಪುರದ ರಾಜನ ಜಾಗ?
ಇತಿಹಾಸ ತಜ್ಞ ರಾಜ್ ಕಿಶೋರ್ ಶರ್ಮಾ ಅವರು ಹೇಳುವಂತೆ, ತಾಜ್ ಮಹಲ್ ಜೈಪುರದ ರಾಜ ಮಾನ್ ಸಿಂಗ್ ಅವರಿಗೆ ಸೇರಿದ್ದು. ಮಾನ್ ಸಿಂಗ್ ಮೊಮ್ಮಗ ರಾಜಾ ಜೈ ಸಿಂಗ್ ಅವರಿಗೆ ಒಂದಷ್ಟು ಪ್ರತ್ಯೇಕ ಜಾಗವನ್ನು ನೀಡಿ ಈ ಕಟ್ಟಡವನ್ನು ಪಡೆದುಕೊಳ್ಳಲಾಗಿತ್ತು. ಅಲ್ಲಿದ್ದ ಕಟ್ಟಡದಲ್ಲಿ ಬದಲಾವಣೆ ಮಾಡಿ ಸಮಾಧಿಯಾಗಿ ಪರಿವರ್ತಿಸಲಾಗಿದೆ. ಈ ಬದಲಾವಣೆಯ ಎಲ್ಲ ಕುರುಹುಗಳು ಆ 22 ಕೋಣೆಗಳ ಒಳಗೆ ಇರುವ ಸಾಧ್ಯತೆ ಇದೆ. ಹಾಗಾಗಿ ಅವುಗಳನ್ನು ತೆರೆದು ತನಿಖೆಗೆ ಅವಕಾಶ ನೀಡುವುದು ಉತ್ತಮ.
ನ್ಯಾಯಾಲಯ ಒಂದೊಮ್ಮೆ ಈ ಪಿಐಎಲ್‌ನ್ನು ವಿಚಾರಣೆಗೆ ಸ್ವೀಕರಿಸಿದರೆ ಅಯೋಧ್ಯಾ, ವಾರಾಣಸಿ ಮಾದರಿಯಲ್ಲೇ ಹೊಸ ಸ್ವರೂಪ ಪಡೆಯುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ.