ಎಲ್ಲರಿಗೂ ಕೆಲವು ಇಷ್ಟವಾದ ತಿಂಡಿಗಳಿರುತ್ತವೆ. ಅದನ್ನೇ ಹೆಚ್ಚಾಗಿ ತಿನ್ನುವುದಕ್ಕೆ ಅವರು ಬಯಸುವುದು ಸಾಮಾನ್ಯ. ನಿಮ್ಮ ಕುಟುಂಬದಲ್ಲಿ ಯಾರಿಗೆ ಯಾವ ಖಾದ್ಯ ಹೆಚ್ಚು ಇಷ್ಟವಾಗುತ್ತದೆ ಎನ್ನುವುದು ನಿಮಗೆ ಗೊತ್ತಿರುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿ (PM Modi Birthday) ಅವರಿಗೆ ಯಾವ ಖಾದ್ಯ (Modi’s 10 Favourite Indian Dishes) ಇಷ್ಟ ಎನ್ನುವುದರ ಬಗ್ಗೆ ತಿಳಿದಿದೆಯೆ? ಮೋದಿ ಅವರು ಇಷ್ಟ ಪಡುವ ಕೆಲವು ಖಾದ್ಯಗಳ ಕುತೂಹಲಕರ ಮಾಹಿತಿ ಇಲ್ಲಿದೆ.
ಧೋಕ್ಲಾ (Dhokla)
ಗುಜರಾತ್ ಮೂಲದವರಾದ ಮೋದಿ ಅವರಿಗೆ ಗುಜರಾತ್‌ನ ಪ್ರಸಿದ್ಧ ಖಾದ್ಯವಾದ ಧೋಕ್ಲಾವೆಂದರೆ ತುಂಬಾನೇ ಇಷ್ಟವಂತೆ. ಸಾಮಾನ್ಯವಾಗಿ ಈ ಧೋಕ್ಲಾವನ್ನು ಹಿಟ್ಟಿನಿಂದ ಅಥವಾ ರವೆಯಿಂದ ತಯಾರಿಸಲಾಗುತ್ತದೆ. ನೋಡುವುದಕ್ಕೆ ನಮ್ಮ ಮೈಸೂರು ಪಾಕ್‌ನಂತೆಯೇ ಕಾಣುವ ಧೋಕ್ಲಾವನ್ನು ಗುಜರಾತ್‌ನಲ್ಲಿ ಸ್ನ್ಯಾಕ್ಸ್ ರೀತಿಯಲ್ಲಿ ತಿನ್ನಲಾಗುತ್ತದೆ.
ವೆಜ್ ಥಾಲಿ (Veg Thali)
ಸಂಸತ್ ಭವನದ ಕ್ಯಾಂಟೀನ್‌ನಲ್ಲಿ ಸದಸ್ಯರಿಗೆಂದು ವಿಧವಿಧದ ಅಡುಗೆ ಸಿದ್ಧವಿರುತ್ತದೆ. ಆದರೂ ಕೆಲವು ಸಚಿವರು ಅದನ್ನು ಇಷ್ಟಪಡದೆ ಹೊರಗಿನ ಆಹಾರ ತರಿಸಿಕೊಂಡು ತಿನ್ನುವವರಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಸತ್ ಭವನದ ಕ್ಯಾಂಟೀನ್‌ನ ವೆಜ್ ಥಾಲಿಯೆಂದರೆ ತುಂಬಾ ಇಷ್ಟವಂತೆ. ಹಾಗಾಗಿ ಅವರು ಸಂಸತ್ ಭವನದಲ್ಲಿದ್ದಾಗ ಹೆಚ್ಚಾಗಿ ಅದನ್ನೇ ಸೇವಿಸುತ್ತಾರಂತೆ. ಅದರಲ್ಲಿ ಅವರಿಗೆ ಪಲ್ಯ, ಸಬ್ಜಿ, ದಾಲ್, ರೊಟ್ಟಿ, ಸಲಾಡ್ ಸೇರಿ ವಿವಿಧ ರೀತಿಯ ಖಾದ್ಯಗಳು ಇರುತ್ತವೆ.
ಹಣ್ಣಿನ ಸಲಾಡ್ (Fruit Salad)
ಸಲಾಡ್ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ವಿಧ ವಿಧದ ಹಣ್ಣುಗಳನ್ನು ಹಾಕಿ ಮಾಡುವ ಫ್ರೂಟ್ ಸಲಾಡ್ ಪ್ರಧಾನಿ ಮೋದಿ ಅವರಿಗೂ ಬಲು ಇಷ್ಟವಾಗುತ್ತದೆ. ಹಲವಾರು ಹಣ್ಣುಗಳನ್ನು ಕತ್ತರಿಸಿ ಹಾಕಿ ಅದಕ್ಕೆ ಚಾಟ್ ಮಸಾಲೆ ಸೇರಿಸಿಕೊಂಡು ಮೋದಿ ಅವರು ಸೇವಿಸುತ್ತಾರಂತೆ. ಹೆಚ್ಚು ಸರಳವಾದ ಆಹಾರವನ್ನೇ ಅವರು ಸೇವಿಸಲು ಇಷ್ಟಪಡುತ್ತಾರಂತೆ.
ಖಿಚಡಿ (Khichdi)
ಮಾಡುವುದಕ್ಕೂ ಇದು ಸುಲಭ. ಹಾಗೆಯೇ ತಿನ್ನುವುದಕ್ಕೂ ಇಷ್ಟವಾಗುವ ಖಾದ್ಯ ಖಿಚಡಿ. ಗುಜರಾತ್ ಭಾಗದಲ್ಲಿ ಹೆಚ್ಚಾಗಿ ಮಾಡಲಾಗುವ ಖಿಚಡಿ ಮೋದಿ ಅವರಿಗೆ ಪ್ರೀತಿಯ ಆಹಾರವಂತೆ. ಹೆಸರು ಬೇಳೆ ಮತ್ತು ವಿವಿಧ ಸಣ್ಣ ಧಾನ್ಯಗಳಿಂದ ಮಾಡುವ ಖಿಚಡಿಯನ್ನು ಅವರು ಇಷ್ಟದಿಂದ ಸೇವಿಸುತ್ತಾರಂತೆ. ರಾಗಿಯಿಂದ ಮಾಡಿದ ಖಿಚಡಿ ಕೂಡ ಅವರಿಗೆ ಇಷ್ಟವಾಗುತ್ತದೆಯಂತೆ.
ಶ್ರೀಖಂಡ (Srikhand)
ಗುಜರಾತ್‌ನ ಪ್ರಸಿದ್ಧ ಸಿಹಿ ಖಾದ್ಯಗಳಲ್ಲಿ ಒಂದು ಶ್ರೀಖಂಡ. ಮೊಸರಿನಿಂದಲೇ ತಯಾರಾಗುವ ಈ ಖಾದ್ಯವನ್ನು ಪ್ರಧಾನಿ ಮೋದಿ ಅವರು ಇಷ್ಟ ಪಟ್ಟು ತಿನ್ನುತ್ತಾರಂತೆ. ಕೆಲವೊಮ್ಮೆ ಅದಕ್ಕೆ ವಿವಿಧ ಹಣ್ಣಗಳನ್ನೂ ಸೇರಿಸಿಕೊಂಡು ತಿನ್ನುವ ಅಭ್ಯಾಸ ಅವರಿಗಿದೆಯಂತೆ.
ಸೆವ್ ತಮೆಟಾ (Sev Tameta)
ಈ ವರ್ಷ ಜನವರಿಯಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ ನಡೆದಿತ್ತು. ಆ ಸಭೆಯಲ್ಲಿನ ಊಟದ ಮೆನ್ಯು ಅನ್ನು ಮೋದಿ ಅವರ ಇಷ್ಟದಂತೆ ಮಾಡಲಾಗಿತ್ತು. ಅದರಲ್ಲಿ ಸೇವ್ ಟಮೆಟಾ ಕೂಡ ಒಂದಾಗಿತ್ತು. ಟೊಮೆಟೊ ಬಳಸಿಕೊಂಡು ಮಾಡುವ ಈ ಕರಿ ಗುಜರಾತ್‌ನಲ್ಲಿ ಹೆಚ್ಚು ಫೇಮಸ್ ಆಗಿರುವಂತಹ ಖಾದ್ಯ. ಇದೂ ಕೂಡ ಮೋದಿ ಅವರ ಇಷ್ಟದ ಖಾದ್ಯಗಳಲ್ಲಿ ಒಂದಾಗಿದೆ.
ಮಾರ್ವಾಡಿ ಪುಲಾವ್ (Marwari Pulao)
ಪಲಾವ್‌ಗಳಲ್ಲಿ ಯಾವಾಗಲೂ ಸಾಕಷ್ಟು ಪೌಷ್ಟಿಕಾಂಶದ ಪದಾರ್ಥಗಳಿರುತ್ತದೆ. ಹಲವಾರು ವಿಧದ ತರಕಾರಿಗಳನ್ನು ಹೊಂದಿರುವ ಅದು ಹಲವರಿಗೆ ಇಷ್ಟದ ತಿಂಡಿ. ಹಾಗೆಯೇ ಮಾರ್ವಾಡಿ ಪಲಾವ್ ಕೂಡ ಅದರಲ್ಲಿ ಪ್ರಸಿದ್ಧವಾದ ಬಗೆಯಾಗಿದೆ. ಜೋಧ್‌ಪುರ ಭಾಗದಲ್ಲಿ ಹೆಚ್ಚಾಗಿ ತಯಾರಿಸಲಾಗುವ ಈ ಮಾರ್ವಾಡಿ ಪಲಾವ್‌ನಲ್ಲಿ ಮೊಸರು, ಗೋಡಂಬಿ, ದಾಳಿಂಬೆ ಸೇರಿ ಹಲವು ರೀತಿಯ ಸಾಮಗ್ರಿಯನ್ನು ಹಾಕಲಾಗಿರುತ್ತದೆ. ರೈತಾದೊಂದಿಗೆ ಬಡಿಸಲಾಗುವ ಈ ಪಲಾವ್ ಮೋದಿ ಅವರ ಫೇವರಿಟ್ ಖಾದ್ಯಗಳಲ್ಲಿ ಒಂದಾಗಿದೆ.
ರವಾ ಮಸಾಲಾ ದೋಸೆ (Rawa Masala Dosa)
ದೋಸೆ ನಮ್ಮ ದಕ್ಷಿಣ ಭಾರತದ ಹೆಮ್ಮೆ. ಅದರಲ್ಲೂ ಮಸಾಲಾ ದೋಸೆ ಇಲ್ಲಿ ತುಂಬಾನೇ ಫೇಮಸ್. ಅದರಲ್ಲಿ ರವಾ ಮಸಾಲಾ ದೋಸೆಯನ್ನು ನೀವು ಮಾಡಿಕೊಂಡು ಸವಿದಿರುತ್ತೀರಿ. ಈ ರವಾ ಮಸಾಲಾ ದೋಸೆ ನಮ್ಮ ಪ್ರಧಾನಿ ಅವರಿಗೂ ಇಷ್ಟವಂತೆ. ದಕ್ಷಿಣ ಭಾರತದ ಖಾದ್ಯಗಳಲ್ಲಿ ಅವರು ಹೆಚ್ಚಾಗಿ ಇಷ್ಟಪಡುವುದು ಈ ರವಾ ಮಸಾಲಾ ದೋಸೆಯನ್ನೇ.
ಅಜ್ವೈನ್ ಚಪಾತಿ (Ajwain Chapati)
ಅಜ್ವೈನ್ ಬೀಜಗಳು ನಮ್ಮ ಜೀರ್ಣಕ್ರಿಯೆಯನ್ನು ಚೆನ್ನಾಗಿ ಮಾಡುವುದರ ಜತೆ ದೇಹವನ್ನು ತಂಪಾಗಿಸುವ ಗುಣಲಕ್ಷಣ ಹೊಂದಿದೆ. ಅದರಿಂದ ಮಾಡಲಾಗುವ ರೊಟ್ಟಿ/ಚಪಾತಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಗೋಧಿ ಹಿಟ್ಟಿನೊಂದಿಗೆ ಅಜ್ವೈನ್ ಹಿಟ್ಟನ್ನು ಸೇರಿಸಿ ಮಾಡುವ ಚಪಾತಿ ಮೋದಿ ಅವರಿಗೆ ಇಷ್ಟವಂತೆ.
ಭಿಂಡಿ ಕಧಿ (Bhindi Kadhi)
ಗುಜರಾತ್‌ನ ಪ್ರಮುಖ ಆಹಾರಗಳಲ್ಲಿ ಒಂದು ಭಿಂಡಿ ಕಧಿ. ಮೋದಿ ಅವರಿಗೆ ತಮ್ಮ ತವರು ರಾಜ್ಯದ ಈ ಖಾದ್ಯ ಇಷ್ಟವಾಗುತ್ತದೆಯಂತೆ. ಸ್ವಲ್ಪ ಸಿಹಿಯಾಗಿರುವ ಈ ಖಾದ್ಯವನ್ನು ಹುರಿದ ಬೆಂಡೆಕಾಯಿಯಿಂದ ತಯಾರಿಸಲಾಗುತ್ತದೆ. ಇದನ್ನು ಅನ್ನದೊಂದಿಗೆ ಸೇವಿಸಲಾಗುತ್ತದೆ.
ಇದನ್ನೂ ಓದಿ: Narendra Modi: ಜನ್ಮದಿನದಂದು ಮೆಟ್ರೋದಲ್ಲಿ ಮೋದಿ ಸಂಚಾರ; ಸಂಸ್ಕೃತದಲ್ಲಿ ಶುಭಕೋರಿದ ಯುವತಿ